ಬುದ್ಧನ ದಾರಿ
ಬೊಮ್ಮ ಹೊಂಬಣ್ಣದಲಿ ಕಂಗೊಳಿಸುವೀ ಚೆಲುವ
ಮೊಗವ ನೋಡಿರೆ  ಚಣವು ಬಿಡುತಿದ್ದನೇ?
ಕಣ್ಣನ್ನು ತೆರೆಯದೆಲೆ ಈ ರೂಪ ನೋಡದೆಯೆ 
ಸೃಷ್ಟಿಸಿದನೆಂದರದ  ನಂಬಬಹುದೇ?

ಅದಕೇ ಹೇಳುವೆ ಕೇಳು ಈ ನಿಖಿಳ ಜಗವನ್ನು 
ಸೃಷ್ಟಿಸುವನೊಬ್ಬನೂ ಇಲ್ಲವೆಂದು 
ನಿಜವ ಹೇಳಿದನೊಬ್ಬ! ಆ ಬುದ್ಧನಾ ಮತವ 
ಹಿಡಿವುದೊಂದೇ ಈಗ ಸರಿದಾರಿಯು!  


ಸಂಸ್ಕೃತ ಮೂಲ ( ವಿದ್ಯಾಕರನ ಸುಭಾಷಿತ ರತ್ನ ಕೋಶದಲ್ಲಿ  ೧೬.೫೭, ೪೪೦ ; ಧರ್ಮಕೀರ್ತಿ ಬರೆದ ಪದ್ಯ  ) 

ಯಾತಾ ಲೋಚನ ಗೋಚರಂ ಯದಿ ವಿಧೇರೇಣೇಕ್ಷಣಾ ಸುಂದರೀ
ನೇಯಂ ಕುಂಕುಮಪಂಕಪಿಂಜರಮುಖೀ ತೇನೋಜ್ಝ್ಹಿತಾ ಸ್ಯಾತ್ ಕ್ಷಣಂ |
ನಾಪ್ಯಾಮೀಲಿತ ಲೋಚನಸ್ಯ ರಚನಾದ್ರೂಪಂ ಭವೇದೀಶ್ವರಂ
ತಸ್ಮಾತ್ಸರ್ವಮಕರ್ತೃಕಂ ಜಗದಿದಂ ಶ್ರೇಯೋ ಮತಂ ಸೌಗತಂ || 


-ಹಂಸಾನಂದಿ

ಕೊ: ಧರ್ಮಕೀರ್ತಿ  ಆರನೇ ಶತಮಾನದಲ್ಲಿದ್ದ ಒಬ್ಬ ಬೌದ್ಧ ತತ್ತ್ವ ಜ್ಞಾನಿ. ವಿದ್ಯಾಕರ ಹನ್ನೊಂದನೇ ಶತಮಾನದಲ್ಲಿದ್ದ ಇನ್ನೊಬ್ಬ ಬೌದ್ಧ ಕವಿ. ಇವನ ಸುಭಾಷಿತ ರತ್ನ ಕೋಶವೆಂಬ ಸಂಗ್ರಹದಲ್ಲಿ ಸುಮಾರು ೧೮೦೦ಕ್ಕೂ ಹೆಚ್ಚು ಪದ್ಯಗಳಿವೆ.

ಕೊ.ಕೊ ಮೂಲದಲ್ಲಿ  ಕಡೆಯ ಒಂದು ಸಾಲಿನಲ್ಲಿ ಹೇಳಿರುವ ವಿಚಾರವನ್ನು ನಾನು ಸ್ವಲ್ಪ ಹಿಗ್ಗಿಸ ಬೇಕಾಯಿತು. "ಅದಕೆ ಹೇಳುವೆ ಕೇಳು" ಅನ್ನುವ ಮಾತು ಮೂಲದಲ್ಲಿಲ್ಲ!  ಆದರೂ ಮೂಲದ ಆಶಯಕ್ಕೆ ಧಕ್ಕೆ ಆಗಿಲ್ಲ ಎಂದುಕೊಂಡಿದ್ದೇನೆ.  ಅನುವಾದವು ಪಂಚಮಾತ್ರಾ ಚೌಪದಿಯ ಧಾಟಿಯ ಎರಡು ಪದ್ಯಗಳಲ್ಲಿ ಹಂಚಿಕೊಂಡಿದೆ. ಪದ್ಯಗಳಲ್ಲಿ ಪ್ರಾಸ ಮತ್ತೆ ಸಂಧಿ ನಿಯಮಗಳನ್ನು ಪಾಲಿಸಿಲ್ಲ.

ಕೊ.ಕೊ.ಕೊ: ಯಾವಳೋ ಚೆಲುವೆಯನ್ನು ಕಂಡಾಗ ಈ ಪದ್ಯವನ್ನು ಬರೆದಿದ್ದಿರಬೇಕು. ಇಂಥಾ ಚೆಲುವೆಯನ್ನು ಸೃಷ್ಟಿಸಿದವನೊಬ್ಬನಿದ್ದರೆ, ಅವನು ಅವಳನ್ನು ಬಿಟ್ಟಿರುವುದಕ್ಕೆ ಸಾಧ್ಯವಿರುತ್ತಿರಲಿಲ್ಲ. ಅವಳನ್ನು ಕಣ್ಣುಮುಚ್ಚಿಕೊಂಡೇ ಸೃಷ್ಟಿಸಿದ್ದಾನೆ ಎಂದುಕೊಂಡರೆ, ಇಂದಹ ಚೆಲುವನ್ನು ಕಣ್ಣಿಂದ ನೋಡದೇ ನಿರ್ಮಿಸಲು ಸಾಧ್ಯವಾಗುವುದಿಲ್ಲ! ಈ ಎರಡೂ ಪ್ರಮೇಯಗಳಿಂದ, ಸೃಷ್ಟಿ ಮಾಡುವವನೊಬ್ಬ ಇರಲು ಸಾಧ್ಯವಿಲ್ಲ. ಹಾಗಾಗಿ ಆ ವಾದವನ್ನು ಮಂಡಿಸಿದ ಬುದ್ಧನ ಮತವೇ ಹೆಚ್ಚಾಯದ್ದು ಅನ್ನುವುದು ಕವಿಯ ಆಶಯ. ಹೇಗಿದೆ ವರಸೆ!

ಚಿತ್ರ ಕೃಪೆ: ನ್ಯೂಯಾರ್ಕ್ ನ ಬ್ರೂಕ್ಲಿನ್ ಸಂಗ್ರಹಾಲಯದಲ್ಲಿರುವ  ರಾಗಮಾಲಾ ವರ್ಣಚಿತ್ರ (ರಾಗ ಕಾಮೋದ್)  

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ