ಮಹದಾನಂದ
ಎರಡು ಮೂರು ವರ್ಷಗಳಿಂದ, ಶಂಕರ ಜಯಂತಿಯಂದು ಶಂಕರಾಚಾರ್ಯರ ಯಾವುದಾದರೂ ಶ್ಲೋಕವನ್ನು ಓದಿ ಅನುವಾದ ಮಾಡುತ್ತ ಬಂದಿದ್ದೇನೆ. ಹಾಗಾಗಿ, ಈ ಸಲವೂ ಶಂಕರ ಜಯಂತಿಯಂದು ಒಂದು ಪ್ರಯತ್ನ. 

ಒಂದೇ ಪದ್ಯವನ್ನೇ ಎರಡು ರೀತಿಯಲ್ಲಿ  (ಒಂದು ಚೌಪದಿಯಲ್ಲಿ, ಪ್ರಾಸವಿಲ್ಲದೇ - ಮತ್ತೊಂದು ಭಾಮಿನಿ ಷಟ್ಪದಿಯಲ್ಲಿ) ಅನುವಾದ ಮಾಡಿದ್ದೇನೆ:

(ಚೌಪದಿ)

ನಾನೆಂದು ಕಾಂಬೆನೋ ನಿನ್ನಡಿಗಳನು ಶಿವನೆ!
ಕಣ್ತುಂಬಿ ಕೈಲಿಟ್ಟು ಶಿರದಲ್ಲಿ ಮುಡಿವೆನೋ
ತಬ್ಬಿಯೆದೆಗೊತ್ತಿ ಪದಕಮಲಗಳ ಕಂಪನ್ನು
ಎಂದು ಪಡೆವೆನೊ ಬೊಮ್ಮನಿಗು ಸಿಗದ ಸೊಗವ!

(ಭಾಮಿನಿ ಷಟ್ಪದಿ)

ಎಂದು ಕಾಂಬೆನೊ ನಿನ್ನಡಿಗಳ
-ನ್ನೆಂದು ಕಣ್ಣಲಿ ತುಂಬಿಕೊಳ್ಳುವೆ
-ನೆಂದು ಕರದಲ್ಲಿಟ್ಟು ತಲೆಗೇರಿಸುತ ಮುಡಿಯುವೆನೋ?
ಎಂದು ಎದೆಗಪ್ಪುವೆನೊ ಕಂಪಿನ
ಚೆಂದದಡಿದಾವರೆಯ ಮಹದಾ 
ನಂದ ಹೊಂದುವೆ ಬೊಮ್ಮದೇವರು ಕೂಡ ಪಡೆದಿರದ?


 ಸಂಸ್ಕೃತ ಮೂಲ (ಆದಿ ಶಂಕರರ ಶಿವಾನಂದಲಹರೀ, ಪದ್ಯ ೨೬) :

ಕದಾ ವಾ ತ್ವಾಂ ದೃಷ್ಟ್ವಾ ಗಿರಿಶ ತವ ಭವ್ಯಾಂಘ್ರಿಯುಗಲಂ
ಗೃಹೀತ್ವಾ ಹಸ್ತಾಭ್ಯಾಂ ಶಿರಸಿ ನಯನೇ ವಕ್ಷಸಿ ವಹನ್
ಸಮಾಶ್ಲಿಷ್ಯಾಘ್ರಾಯ ಸ್ಫುಟಜಲಜಗಂಧಾನ್ ಪರಿಮಲಾ-
ನಲಭ್ಯಾಂ ಬ್ರಹ್ಮಾಭ್ಯೈರ್ಮುದಮನುಭವಿಷ್ಯಾಮಿ ಹೃದಯೇ

कदा वा त्वां दृष्ट्वा गिरिश तव भव्यांघ्रियुगलं
गृहीत्वा हस्ताभ्यां शिरसि नयने वक्षसि वहन् ।
समाश्लिष्याघ्राय स्फुटजलजगन्धान् परिमला-
नलभ्यां ब्रह्माध्यैर्मुदमनुभविष्यामि हृदये ॥ २६ ॥

-ಹಂಸಾನಂದಿ

ಕೊ: ಮೂಲದಲ್ಲಿ ಬ್ರಹ್ಮ ಮೊದಲಾದ ದೇವತೆಗಳೆಲ್ಲ ಅಂತ ಇರುವುದು ಅನುವಾದದಲ್ಲಿ ಅಷ್ಟು ನಿಖರವಾಗಿ ಮೂಡಿ ಬಂದಿಲ್ಲವಾದರೂ, ಸುಮಾರು ಪದ್ಯದ ಒಟ್ಟಾರೆ ಭಾವವನ್ನು ಹಿಡಿಯುವ ಪ್ರಯತ್ನ ಸಫಲವಾಗಿದೆ ಎಂದು ಎಣಿಸುತ್ತೇನೆ.

ಚಿತ್ರ: ಎಲ್ಲೋರದಲ್ಲಿರುವ ಕೈಲಾಸ ದೇವಾಲಯದಲ್ಲಿರುವ ಶಿವ. ವಿಕಿಪೀಡಿಯಾದಿಂದ http://commons.wikimedia.org/wiki/File:Ellora_Kailash_temple_Shiva_panel.jpg

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?