ಕೊಟ್ಟು ಗೆದ್ದವಳು
ಬತ್ತದಿಹ ಕಣ್ಣೀರ ಕೊಟ್ಟಿಹಳು ನೆಂಟರಿಗೆ
ತನ್ನೆಲ್ಲ ದುಗುಡವನು ಹೆತ್ತವರಿಗೆ
ಊಳಿಗದವರಿಗಿತ್ತು ತನ್ನ ದೈನ್ಯತೆಯನ್ನು
ಬೇಗುದಿಯ ಬಿಟ್ಟಿಹಳು ಗೆಳತಿಯರಿಗೆ

ನಿಟ್ಟುಸಿರ ಬಿಡುವುದೂ ನೋವ ತರುತಿರಲಾಕೆ 
ನೆನೆದಿಹಳು  ಮುಂಬರುವ ಬಿಡುಗಡೆಯನು; 
ಹೊಂದು ನೆಮ್ಮದಿಯನ್ನು!  ಬೆಸನದಗಲಿಕೆ ನೋವ-
ನವಳಾಗಲೇ ದೂರ ಕಳಿಸಿರುವಳು

ಸಂಸ್ಕೃತ ಮೂಲ ( ಅಮರು ಶತಕದಿಂದ - ವೇಮ ಭೂಪಾಲನ ಟೀಕೆ, ೮೭ನೆ ಪದ್ಯ ) :

ಅಚ್ಛಿನ್ನಂ ನಯನಾಂಬು ಬಂಧುಷು ಕೃತಂ ಚಿಂತಾ ಗುರುಷ್ವರ್ಪಿತಾ
ದತ್ತಂ ದೈನ್ಯಮಶೇಷತಃ ಪರಿಜನೇ ತಾಪಃ ಸಖೀಶ್ವಾಹಿತಃ
ಅದ್ಯ ಶ್ವಃ ಪರನಿರ್ವೃತಿಂ ಭಜತಿ ಸಾ ಶ್ವಾಸೈಃ ಪರಂ ಖಿದ್ಯತೇ 
ವಿಸ್ರಬ್ಧೋ ಭವ ವಿಪ್ರಯೋಗಜನಿತಂ ದುಃಖಂ ವಿಭಕ್ತಂ ತಯಾ ||

-ಹಂಸಾನಂದಿ 

ಕೊ: ತನ್ನ ಇನಿಯನಿಂದ ದೂರವಾಗಿದ್ದು ಕೊರಗುತ್ತಿರುವ ನಾಯಕಿಯ ಬಗ್ಗೆ ಒಬ್ಬ ಗೆಳತಿ ಇನ್ನೊಬ್ಬಳಿಗೆ ಹೇಳುತ್ತಿರುವ ಮಾತಿನಂತೆ ತೋರುತ್ತದೆ ಈ ಪದ್ಯ.

ಕೊ.ಕೊ: ನಾಯಕಿಯ ದುಃಖ ಅವಳಿಂದ ಅವಳ ಹತ್ತಿರದ ಹೆತ್ತವರು, ನೆಂಟರಿಷ್ಟರು, ಕೆಲಸದವರು, ಗೆಳೆಯರು ಎಲ್ಲರಿಗೂ ಸಾಂಕ್ರಾಮಿಕವೆಂಬಂತೆ ಹಬ್ಬಿ ಅವರೆಲ್ಲರೂ ಕೊರಗುತ್ತಿದ್ದಾರೆ. ಈಗ ನಾಯಕಿದೆ ಬದುಕಿರುವುದೇ ಭಾರವಾಗಿದೆ. ಇಂದೋ ನಾಳೆಯೋ ಉಸಿರುಡುಗಿ  ಹೋಗುವಂತಿದ್ದಾಳೆ ಆಕೆ. ಆದರೆ ತನ್ನೆಲ್ಲ ನೋವನ್ನು ಇತರರಿಗೆ ಹಂಚಿ ಜೀವವನ್ನೇ ತೊರೆಯಹೊರಟಿರುವುದರಿಂದ ಅವಳು ದುಃಖ ಮುಕ್ತಳು, ಅದ್ದರಿಂದ ಅವಳು ನೋವಲ್ಲಿರುವಳೆಂದು ಬೇಸರ ಪಡಬೇಡ ಎಂದು ಹೇಳುವುದರಿಂದಲೇ, ಅವಳ ವಿರಹ ವೇದನೆ ಎಷ್ಟು ತೀಕ್ಷ್ಣವಾಗಿದೆ ಎಂಬುದನ್ನು ಕವಿ  ತಿಳಿಸುತ್ತಿದ್ದಾನೆ.  


ಚಿತ್ರ ಕೃಪೆ:  ರಾಜಾ ರವಿ ವರ್ಮನ 'ದಮಯಂತಿ' -ವಿಕಿಪೀಡಿಯ ದಿಂದ http://upload.wikimedia.org/wikipedia/commons/2/25/Raja_Ravi_Varma%2C_Damayanti_Vanavasa.jpg

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?