ಶರತ್ಕಾಲದ ಚಂದ್ರ


ಹಬ್ಬವವು ಕಂಗಳಿಗೆ ಮನಕಸಿವ ತಂಗದಿರ-
-ನುಲ್ಲಾಸ ತಂದೀವ ಕಿರಣಗಳ ಮಾಲೆ 
ನಲ್ಲನಗಲಿಕೆಯೆಂಬ ವಿಷಬಾಣಕೀಡಾದ
ಪೆಣ್ಗಳೊಡಲನು ಸುಟ್ಟು ಬಹಳ ಕಾಡಿಪುದೆ!
ಸಂಸ್ಕೃತ ಮೂಲ - (ಕಾಳಿದಾಸನ ಋತುಸಂಹಾರ ಕಾವ್ಯ, ಸರ್ಗ ೩, ಪದ್ಯ ೯)

ನೇತ್ರೋತ್ಸವೋ ಹೃದಯಹಾರಿ ಮರೀಚಿಮಾಲಃ 
ಪ್ರಲ್ಹಾದಕಃ ಶಿಶಿರಸೀಕರವಾರಿವರ್ಷೀಂ ।
ಪತ್ಯುರ್ವಿಯೋಗ ವಿಷದಿಗ್ಧ ಶರಕ್ಷತಾನಾಮ್ 
ಚಂದ್ರೋ ದಹತ್ಯತಿತರಾಂ ತನುಮಂಗನಾನಾಂ  ।।

नेत्रोत्सवो ह्दयहारिमरीचिमालः
प्रल्हादकः शिशिरसीकरवारिवर्षीं
पत्युर्वियॊगविषदिग्धशरक्षतानां
चन्द्रो दहत्यतितरां तनुमङ्गनानाम् 

-ಹಂಸಾನಂದಿ 
ಕೊ: ಈ ದಿನ, ಶರತ್ಕಾಲದ ಮೊದಲ ದಿನ, ಹಾಗಾಗಿ ಶರತ್ಕಾಲದ ಚಂದಿರನನ್ನು ಬಣ್ಣಿಸುವ ಈ ಪದ್ಯವನ್ನು ಆಯ್ದುಕೊಂಡೆ. ಈ ದಿನದ ಬಗ್ಗೆ ಹೆಚ್ಚು ಓದಬೇಕಾದರೆ ಇಲ್ಲಿ ಚಿಟಕಿಸಿ:  ಶರತ್ಕಾಲದ ಮೊದಲ ದಿನ 


ಕೊ.ಕೊ: ಋತುಸಂಹಾರವೆಂಬ ಖಂಡ ಕಾವ್ಯದಲ್ಲಿ ಕಾಳಿದಾಸನು ಆರೂ ಋತುಗಳನ್ನು ಬಣ್ಣಿಸುತ್ತಾನೆ. ಬೇಸಿಗೆ (ಗ್ರೀಷ್ಮ) ದಲ್ಲಿ ಆರಂಭವಾಗುವ  ಈ ಕಾವ್ಯ ಕೊನೆಗೆ ವಸಂತ ಕಾಲದ  ವರ್ಣನೆಯಲ್ಲಿ ಮುಗಿಯುತ್ತದೆ.  ಎಲ್ಲರಿಗೂ ಕಣ್ಣಿಗೆ ಹಬ್ಬವಾಗುವ ಚಂದಿರನ ತಂಪು ಕಿರಣಗಳು ವಿರಹಿಗಳಿಗೆ  ಕಷ್ಟವನ್ನೇ ತರುತ್ತವೆಂಬುದು ಮಹಾಕವಿ ಕಾಳಿದಾಸನೇ  ಹೇಳಿದ ಮೇಲೆ, ಇನ್ನೇನಿದೆ :) ? ಅಂದ ಹಾಗೆ ಋತುಸಂಹಾರವು ಕಾಳಿದಾಸನ ಮೊದಲ ಕಾವ್ಯವೆಂಬುದು ವಿದ್ವಾಂಸರ ಅಭಿಪ್ರಾಯ. 

ಕೊ.ಕೊ: ಅನುವಾದ ಪಂಚಮಾತ್ರಾ  ಚೌಪದಿಯ ರೂಪದಲ್ಲಿದೆ. ಆದರೆ ಪ್ರಾಸವನ್ನು ಲೆಕ್ಕಿಸಿಲ್ಲ.  

ಚಿತ್ರ ಕೃಪೆ:   http://sahk99.deviantart.com/art/Rural-blue-moon-334454531  Thank you Sakh99!Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?