ಚಂದ್ರಮುಖಿಗೊಂದು ಮಾತು



ಚೆಲುವೆ ತಾಳೇ! ಇನಿಯನಿರುವೆಡೆ ಹೋಗಲಿಕೆ ತುಸು ಸಮಯವು
ರಾತ್ರಿಯಾಗಸದೊಳಗೆ ಚಂದಿರ ಸ್ವಲ್ಪ ಮೇಲಕೆ ಬಂದೊಡೆ  
ಸುತ್ತ ಚೆಲ್ಲಿದ ಹಾಲು ಬೆಳ್ದಿಂಗಳಲಿ ನಿನ್ನಯ ಚಂದದಾ  
ಹಾಲು ಮೊಗವನು ಯಾರು ಕಾಂಬರು! ದೈವವಿರುವುದು ನಿನ್ನೆಡೆ!   


ಪ್ರಾಕೃತ ಮೂಲ ( ಹಾಲನ ಗಾಹಾ ಸತ್ತಸಯಿ, 7-7) :

ಗಮ್ಮಿಹಿಸಿ ತಸ್ಸ ಪಾಸಂ ಸುಂದರಿ ಮಾ ತುರಅ ವಡ್ಢಉ ಮಿಅಂಕೋ |
ದುದ್ಧೇ ದುದ್ಧಂಇಅ ಚಂದಿಆಇ ಕೋ ಪೇಚ್ಛಇ ಮುಹಂ ದೇ ||

ಸಂಸ್ಕೃತ ಅನುವಾದ ( ನಿರ್ಣಯ ಸಾಗರ ಮುದ್ರಣಾಲಯದ ಟೀಕೆಯಿಂದ):

ಗಮಿಷ್ಯಸಿ ತಸ್ಯ ಪಾರ್ಶ್ವೇ ಸುಂದರಿ ಮಾ ತ್ವರಸ್ವ  ವರ್ಧತಾಂ ಮೃಗಾಂಕಃ ।
ದುಗ್ಧೇ ದುಗ್ಧಮಿವ ಚಂದ್ರಿಕಾಯಾಂ ಕಃ  ಪ್ರೇಕ್ಷತೇ ಮುಖಂ ತೇ ।।


ಚಿತ್ರ ಕೃಪೆ: "ಅಭಿಸಾರಿಕೆ"  http://www.artoflegendindia.com/abhisarika-p-19202.html ಈ ಪುಟದಿಂದ 

ಕೊ: ಮೂಲದ ಎರಡು ಸಾಲುಗಳನ್ನು ಅನುವಾದದಲ್ಲಿ ನಾಲ್ಕು ಸಾಲುಗಳಾಗಿ ಬೆಳೆಸಿದ್ದರಿಂದ, ತುಸು ಮೂಲದಲ್ಲಿಲ್ಲದ ಪದಗಳನ್ನು ಬಳಸಿದ್ದೇನೆ. ಆದರೂ ಭಾವಾರ್ಥ ತಪ್ಪಿಲ್ಲ ಎಂದು ಎಣಿಸಿದ್ದೇನೆ (ಉದಾಹರಣೆಗೆ, "ದೈವವಿರುವುದು ನಿನ್ನೆಡೆ " ಎಂಬ ಮಾತು 

ಕೊ.ಕೊ: ಅನುವಾದವು ಮಲ್ಲಿಕಾಮಾಲೆ ಎಂಬ ವೃತ್ತದ  ಚೌಪದಿಯ ಧಾಟಿಯಲ್ಲಿದೆ. ಪ್ರತಿ ಸಾಲಿನಲ್ಲೂ ೩/೪/೩/೪/೩/೪/೩/೩ ಈ ರೀತಿಯ ಗಣಗಳು ಬರುತ್ತವೆ. 

ಕೊ.ಕೊ.ಕೊ: ಅಭಿಸಾರವೆಂದರೆ ಬಳಿ ಹೋಗುವುದು. ಅಭಿಸಾರಿಕೆಯು ತನ್ನ ಇನಿಯನ ಜೊತೆಯನ್ನು ಬಯಸಿ ಹೋಗುತ್ತಿರುವ ಹೆಣ್ಣು. ಅಷ್ಟ ನಾಯಿಕೆಯರಲ್ಲಿ ಅಭಿಸಾರಿಕೆಯೂ ಒಬ್ಬಳು. ಇಲ್ಲಿರುವ ಚಿತ್ರದಲ್ಲಿ ನಾಯಕಿಯು ಒಬ್ಬಳೇ  ಕಾಡಿನಲ್ಲಿ ಹೋಗುತ್ತಿರುವುದನ್ನು ಚಿತ್ರಿಸಲಾಗಿದೆ.  ಈ ಪದ್ಯದಲ್ಲಿ ಕವಿಯು ಚಂದಿರನ ಮೊಗದ ಅಭಿಸಾರಿಕೆಗೆ , ಆಕಾಶದಲ್ಲಿ ಚಂದ್ರ ಮೇಲೆ ಬಂದ ಮೇಲೇ  ಇನಿಯನನ್ನು ಹುಡುಕಿ ಹೋದರೆ ಒಳಿತು, ಅಗ ಚಂದಿರನಾವುದು, ಇವಳ ಮೊಗವಾವುದು ಎನ್ನುವುದು ಯಾರಿಗೂ ತಿಳಿಯಲಾರದು ಎಂಬ ಆಪ್ತ ಸಲಹೆಯನ್ನು ನೀಡುತ್ತಿದ್ದಾನೆ! 

-ಹಂಸಾನಂದಿ 

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?