ಸಿರಿಯ ಮಹಿಮೆ
ಗರಳಗಳಲೇ ಘೋರ ಹಾಲಾಹಲವೆನುವ ವಿಷವೆಂಬರು
ಸಿರಿಯೆನುವ ವಿಷವದಕು ಕೆಡುಕೆಂಬುದನು ದಿಟದಲಿ ಕಾಣರು! 
ಹರನು ನಂಜನ್ನುಣಲು ಗಂಟಲು ಅವನದಾದುದು ನೀಲಿಯು 
ಸಿರಿಯ ವರಿಸಿದ ಹರಿಯ ಮೈಯಿಡಿ ನೀಲಿಗಟ್ಟಿತು ಕಾಣಿರೊ!

ಸಂಸ್ಕೃತ ಮೂಲ ( ಅಷ್ಟಾವಧಾನಿ  ಡಾ.ಶಂಕರ್ ರಾಜಾರಾಮನ್ ಅವರದ್ದು):

ಹಾಲಾಹಲಾದುಗ್ರತರಪ್ರಭಾವಂ ವಿಶ್ಃಅಂ ಪ್ರತೀಮೋ ಭುವನೇಷು ಲಕ್ಷ್ಮೀಮ್ |
ಯುಕ್ತೋ ಹರಸ್ತೇನ ತು ನೀಲಕಂಠೋ ಯುಕ್ತಸ್ತಯಾ ನೀಲತನುರ್ಮುರಾರಿಃ  ||

हालाहलादुग्रतरप्रभावं विषं प्रतीमो भुवनेषु लक्ष्मीम् । 
युक्तो हरस्तेन तु नीलकण्ठो युक्तस्तया नीलतनुर्मुरारिः ॥


-ಹಂಸಾನಂದಿ

ಕೊ: ಅವಧಾನಿ  ಡಾ.ಶಂಕರ್ ರಾಜಾರಾಮನ್ ಅವರು ವೃತ್ತಿಯಲ್ಲಿ ವೈದ್ಯರು, ಮತ್ತೆ  ಪ್ರವೃತ್ತಿಯಲ್ಲಿ ಕವಿ. ಸಂಸ್ಕೃತ ಮತ್ತೆ ಕನ್ನಡದಲ್ಲಿ ಅಷ್ಟಾವಧಾನವನ್ನು ನಡೆಸಬಲ್ಲ ನಮ್ಮನಾಡಿನ ಕೆಲವೇ ಪ್ರತಭಾನ್ವಿತರಲ್ಲಿ ಇವರೊಬ್ಬರು.

ಕೊ.ಕೊ: ದೇವಾಸುರರು ಸಮುದ್ರಮಥನ ಮಾಡಿದಾಗ ಅದರಲ್ಲಿ ಮೊದಲು ಹಾಲಾಹಲ*ವೆಂಬ ಘೋರವಾದ ವಿಷ ಹುಟ್ಟಿತು. ಜಗತ್ತನ್ನು ಅದರಿಂದ ಕಾಪಾಡಲು ಶಿವನು ಅದನ್ನು ಕುಡಿದಾಗ, ಅವನಿಗೆ ಅದರಿಂದಾಗಬಹುದಾದ ಹಾನಿಯನ್ನು ತಡೆಯಲು, ಪಾರ್ವತಿಯು ಶಿವನ ಗಂಟಲನ್ನು ಒತ್ತಿಹಿಡಿದಿದ್ದರಿಂದ, ಆ ವಿಷವು ಅವನ ಗಂಟಲಲ್ಲೇ ನಿಂತು, ಅವನ ಗಂಟಲು ನೀಲಿ ಬಣ್ಣವನ್ನು ಹೊಂದಿತು. ಈ ಕಾರಣಕ್ಕಾಗಿಯೇ ಅವನು ನೀಲಕಂಠನೂ, ನಂಜುಂಡನೂ ಆದನು.

ಕೊ.ಕೊ.ಕೊ: ಸಮುದ್ರ ಮಂಥನವನ್ನು ಮುಂದುವರೆಸಿದಾಗ, ಅದರಲ್ಲಿ ಇನ್ನೂ ಹಲವು ವಸ್ತುಗಳು ಹುಟ್ಟಿದವು. ಹಾಗೆ ಹುಟ್ಟಿದವಳು ಲಕ್ಷ್ಮಿ.  ಅದಕ್ಕಾಗಿಯೇ ಅವಳು ಸಮುದ್ರರಾಜ ತನಯೆ. ಅವಳನ್ನು, ವಿಷ್ಣುವು ಮದುವೆಯಾಗಿ ಶ್ರೀಕಾಂತನಾದನು. ಕವಿಯು ಇಲ್ಲಿ ವಿಷ್ಣುವಿನ ನೀಲವರ್ಣವನ್ನು ಲಕ್ಷ್ಮೀ ಪ್ರಭಾವದಿಂದ "ನೀಲಿಗಟ್ಟಿದ ಮೈಯವನಾದನು" ಎಂದು ಚಮತ್ಕಾರವಾಗಿ ಹೇಳುತ್ತಾ, ಸಂಪತ್ತಿಗಿರುವ ದುರ್ಗುಣಗಳನ್ನೂ ಸೂಚಿಸುತ್ತಾರೆ.

(ಈ ಅನುವಾದವು ಮಾರ್ಪಡಿಸಿದ , ಭಾಮಿನೀಗತಿಯ ಮಲ್ಲಿಕಾಮಾಲೆ/ಮತ್ತಕೋಕಿಲಾ ಚೌಪದಿಯ ಛಂದಸ್ಸಿನಲ್ಲಿದೆ)

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?