ಹೀಗೊಂದು ಟೈಮ್ ಪಾಸ್ ದೇವೀ ಸ್ತುತಿ

ಅಪರೂಪಕ್ಕೊಮ್ಮೆ ಸಮಯ ಸಿಕ್ಕಿತು ಅಂತ ಇವತ್ತು ಗೂಗಲ್ ಡ್ರೈವ್ ಅನ್ನು ಗುಡಿಸ್ತಾ ಇದ್ದೆ. ಆ ಸಮಯಕ್ಕೆ, ಸರಿ ಸುಮಾರು ಒಂದು ವರ್ಷ ಹಿಂದೆ ಬರೆದಿದ್ದ ಬರಹವೊಂದು ಕೈಗೆ ಸಿಕ್ಕಿತು. ಒಮ್ಮೊಮ್ಮೊ ಹೀಗೇನೇ, ಮರೆತೇ ಹೋಗಿರುತ್ತೆ. ಈ ಬ್ಲಾಗು ಪಾಗು ಇತ್ಯಾದಿಗಳೆಲ್ಲ ಬರೋಕೆ ಮುಂಚೆ ಈ ರೀತಿ ಏನಾದರೂ ಹೊಳೆದಿದ್ದರೆ ಅದು ಒಂದಷ್ಟು ದಿನವಾದ ಮೇಲೆ ಅದರ ನೆನಪು ಪೂರ್ತಿ ಹಾರಿಹೋಗಿರ್ತಿತ್ತು. ಈಗ ಇದ್ದು ಬದ್ದಿದ್ದನ್ನೆಲ್ಲ ಒಂದು ಕಡೆ ಗುಪ್ಪೆ  ಹಾಕೋದಕ್ಕೆ ಒಂದು ಜಾಗವೇನೋ ಇರತ್ತೆ. ಆದರೆ, ಅದನ್ನೂ ಆಗಾಗ ಗುಡಿಸಿಟ್ಟುಕೊಳ್ಳದೇ ಹೋದರೆ, ಮತ್ತೆ ಹಳೇ ಪ್ರಸಂಗವೇ! ಹೋಗಲಿ ಬಿಡಿ ಆ ಬರಹವನ್ನ ಇನ್ನೊಮ್ಮೆ ಹಾಕ್ತೇನೆ ಇಲ್ಲೇ.

ಆದ್ರೆ ಈ ಗುಡಿಸಿ ಗುಂಡಾಂತರ ಮಾಡೋವಾಗ ಒಂದು ಹಳೇ ಸಮಸ್ಯಾಪೂರಣವೂ ಸಿಕ್ತು. ಸಾರಿ. ಪೊಲಿಟಿಕಲಿ ಕರೆಕ್ಟ್ ಆಗಿರಬೇಕಾದರೆ, ಇದು ದತ್ತಪದಿ. ಈಗ ಏನಪ್ಪಾ ಅಂದ್ರೆ , ಪದ್ಯದ ಒಂದು ಸಾಲು ಕೊಟ್ಟು, ಉಳಿದ ಸಾಲುಗಳನ್ನ ಬರೆಯಿರಿ ಅಂದರೆ ಅದು ಸಮಸ್ಯಾಪೂರಣ. ಯಾವುದೋ ನಾಲ್ಕು ಪದ ಕೊಟ್ಟು ಈ ಪದಗಳನ್ನು ಬಳಸಿಕೊಂಡು ಕೊಟ್ಟಿರುವ ನಿಬಂಧನೆಗಳಿಗೆ ಅನುಗುಣವಾಗಿ ಪದ್ಯವನ್ನು ಬರೆಯುವುದು ದತ್ತಪದಿ. ನೀವು ಯಾವುದಾದರೂ ಅವಧಾನವನ್ನ ನೋಡಿದ್ದರೆ ನಿಮಗೆ ಈ ವಿಂಗಡಣೆ ಗೊತ್ತಿರುತ್ತೆ. ಇಲ್ಲದಿದ್ದರೂ ಪರವಾಗಿಲ್ಲ, ಇದೊಂದು ಪದ್ಯ (ನವ್ಯ ಕವಿತೆ ಅಲ್ಲ, ಆದರೆ ಪರಂಪರೆಯಿಂದ ಬಂದಿರುವ ಛಂದಸ್ಸುಗಳಲ್ಲಿ ಪದ್ಯ ಬರೆಯುವ ಆಟ.

ಈ ದತ್ತಪದಿ ಬರೆದಿದ್ದೂ ಸುಮಾರು ಹೋದ ವರ್ಷ ಇದೇ ಸಮಯದಲ್ಲಿ. ಪದ್ಯಪಾನ  (http://padyapaana.com) ದಲ್ಲಿ ಕೊಟ್ಟಿದ್ದ ಪ್ರಶ್ನೆಯೇ. ಊಟತಿಂಡಿಯಲ್ಲಿ ಆಸಕ್ತಿ ಇರುವಂತಹ ನನ್ನಂತಹವರಿಗೆ ಈ ಪದ್ಯ ಹಿಡಿಸುತ್ತೆ ಅಂತ ಮೊದಲೇ ಹೇಳ್ಬಿಡ್ತೀನಿ. ಯಾಕಂತ ನಿಮಗೇ ಗೊತ್ತಾಗುತ್ತೆ, ಒಂದು ನಿಮಿಷ ಇರಿ. ಪ್ರಶ್ನೆಯೇ ಹಾಗಿದೆ.

‘ದೋಸೆ’, ‘ಸಾರು’, ‘ಪಲ್ಯ’, ‘ಪೂರಿ’ ಪದಗಳನ್ನುಪಯೋಗಿಸಿ ನಿಮ್ಮ ಇಷ್ಟದೇವತೆಯ ಸ್ತುತಿಯನ್ನು ಪದ್ಯರೂಪದಲ್ಲಿ ರಚಿಸಿರಿ. 


ಹೇಳಲಿಲ್ವಾ? ಪೂರಿ ಪಲ್ಯ ಮಸಾಲೆ ದೋಸೆ ಇಷ್ಟ ಆಗೋರಿಗೆ ಇಂತಹ ಪದ್ಯ ಬರೆಯೋಕೆ ಇಷ್ಟ ಆಗೋದರಲ್ಲಿ ಕಷ್ಟ ಏನಿದೆ! ಅದಕ್ಕೇ ನಾನೂ ಒಂದು ಬರೆದುಬಿಟ್ಟೆ. ತರಕಾರಿ ಹಣ್ಣುಗಳ ಹಾರ ತೊಟ್ಟ ದೇವಿ ಶಾಕಾಂಬರಿ ಅಂತ ಕೇಳಿದ್ದೆ. ಆಮೇಲೆ ಅದು ಶಾಕಂಭರಿ ಅಂತ ತಿಳಿದವರು ಹೇಳಿದ್ದರಿಂದ ತಿದ್ದಿಕೊಂಡಿ. ನೋಡಿ ನನ್ನ ಪದ್ಯವನ್ನ.

ಕಾಯಿಪಲ್ಯದ ಹಾರತೊಟ್ಟಿಹ
ತಾಯೆ ಶಾಕಂಭರಿಯೆ ನೀ ವರ
ವೀಯೆ ಸಾರುತ ನಂಬಿದವರನು ಪೊರೆವೆನೆನ್ನುತಲಿ
ಹಾಯೆನಿಸಿದೋ ಸೆರೆಯ ಜೀವವ
ಕಾಯುವುದು ತರ ನಿಖಿಳ ಜಗಕೆ
ನ್ಯಾಯ ಕರುಣಾ ಪೂರಿತೆಯೆ ಹಸಿವನ್ನು ನೀನಳಿಸಿ

ನವಂಬರ್ ಅಂದರೆ ಅಮೆರಿಕೆಯಲ್ಲಿ Thanksgiving ಹಬ್ಬದ ಕಾಲ - ಹಸಿವಿನಿಂದ ಬಾಧಿತರಾಗಿರುವವರಿಗೆ, ಸಾಧ್ಯವಾದಷ್ಟು ಸಹಾಯ ಮಾಡುವುದು ಈ ಹಬ್ಬದ ಸಂಪ್ರದಾಯ. ಸರಿ , ಅದೇ ಸಮಯಕ್ಕೆ ನಾನು ಜಗದ ಹಸಿವನ್ನು ಅಳಿಸಲು ದೇವಿಯನ್ನ ಬೇಡುವುದು ಕೂಡ ಸಂಪ್ರದಾಯ ಬದ್ಧವಾಗೇ ಇದೆ ಎಂದುಕೊಳ್ಳುತ್ತೇನೆ. ಏನಂತೀರಿ?

-ಹಂಸಾನಂದಿ

ಚಿತ್ರ: ವಿಜಯವಾಡದ ಕನಕದುರ್ಗೆ, ಶಾಕಂಭರಿಯ ಅಲಂಕಾರದಲ್ಲಿ  http://www.hindu-blog.com/2010/07/shakambari-festival-2010-at-vijayawada.html  - ಇಲ್ಲಿಂದ ತೆಗೆದುಕೊಂಡಿದ್ದು.

ಕೊ: ಪದ್ಯ ಭಾಮಿನಿ ಷಟ್ಪದಿಯಲ್ಲಿದೆ. ಇನ್ನು ಅದರಲ್ಲಿರುವ ದೋಸೆ, ಸಾರು. ಪಲ್ಯ, ಪೂರಿಗಳನ್ನು ನೀವೇ ಹುಡುಕಿ,  ದೇವಿಯ ಪ್ರಸಾದವೆಂದು  ಸ್ವೀಕರಿಸಬಹುದು :)

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ