ಕರ್ಣ ಮರಣ
(ಈ ಹಿಂದೆ ಒಂದು ಸಮಸ್ಯಾಪೂರಣಕ್ಕೆಂದು ಬರೆದ ಪದ್ಯಗಳಿವು. ಕರ್ಣನ ಸಾವಿನ ಚಿತ್ರವೊಂದನ್ನು ನೋಡಿ ನೆನಪಾಗಿ, ಒಟ್ಟಿಗೆ ಹಾಕುತ್ತಿದ್ದೇನೆ)

ಕುರುಕ್ಷೇತ್ರದ ಕಾಳಗದಲಿದು
ಮರೆಯಲಾರದ ದಿನವಹುದು ಸೈ
ದುರುಳ ದುರ್ಯೋಧನನಿಗಾಸರೆಯಾದ ಕಲಿಕರ್ಣ ।
ಧರೆಗೆ ಬಿದ್ದನುಯೆನ್ನ ಮಡದಿಗೆ
ದೊರಕಿಸುವೆ ನಾ ನ್ಯಾಯವೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ||೧ ||

ತರಣಿಯಾಕಾಶದಲಿ ಕಂತು-
ತ್ತಿರಲು ಕರ್ಣನು ರಥದ ಚಕ್ರ ಕೆ-
ಸರಲಿ ಸಿಲುಕಲು ತಾನದನು ಬಿಡಿಸಲಿಕ್ಕಿಳಿದಿರಲು
ಸರಿಯ ಸಮಯವು ಕೊಲ್ಲಲೀತನ
ದುರುಳತನಕಿದು ತಕ್ಕುದೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ ೨||

ಮರುಕವೊಂದನು ತೋರಬೇಡವು
ದುರುಳನೆಂಬುದೆ ದಿಟವು ಧರೆಯ ಕೆ-
ಸರಲಿ ಕರ್ಣನು ರಥದ ಗಾಲಿಯನೆತ್ತುತಿಹ ನೋಡೈ
ಸರಲು ಹೂಡುತಲಿವನ ಕೊಲ್ಲೆಂ-
ದಿರಲು ಹರಿ ಸರಿ ಮಾಳ್ಪೆನೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥೩||

ತರಣಿ ತನಯನು ಮತ್ತೆ ಭೂಮಿಗೆ
ಮರಳಿ ಗಾಲಿಯನೆತ್ತುತಿರೆ ತಾ
ಶರವ ಹೂಡಿಡುತಲವನಾಗಲೆ ಧರಣಿಗುರುಳಿಸುತ
ತರುಣಿ ದುರುಪದಿಗಿಂದು ನೆಮ್ಮದಿ
ಬರುವುದೌ ಹರಿ ಕೇಳುಯೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥೪||

ಕುರುಕ್ಷೇತ್ರದ ಭಾರಿಯುದ್ಧದ
ಮರೆಯಲಾರದ ದಿವಸವಿದು ಕೇಳ್
ತರಿದೆ ದುರ್ಯೋಧನನಿಗಾಸರೆಯಾದ ಕರ್ಣನನು ।
ಧರೆಗೆ ಬಿದ್ದನು! ಅಗ್ನಿ ಕನ್ಯೆಗೆ
ದೊರಕಿಹುದು ತುಸು ನ್ಯಾಯವೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥೫||

ಮರೆಯಲಾರೆನು ನಾನು ಮಾಧವ
ತರಳೆ ದ್ರೌಪದಿಗಂದು ಹಸ್ತಿನ
ಪುರದಿ ಕೌರವರಾಯನಿಂದಾಗಿರ್ದ ವಿಭವವನು ।
ದುರುಳ ಕರ್ಣನ ಯುದ್ಧ ಭೂಮಿಯ-
ಲುರುಳಿಸಾಯ್ತೈ ನೆಮ್ಮದಿಯೆನುತ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥೬||

ತರಣಿ ಕಂತುವ ಸಮಯದಲ್ಲಿಯೆ
ತರಣಿ ತನಯನು ನೀಗಲಸುವನು
ತರಣಿಗಾಗಿಹ ದುಗುಡದಿಂದಾಗಸವು ಕಪ್ಪಡರಿ |
ಸುರಿಸಿರಲು ಮಳೆಯನ್ನು ಖಂಡಿತ*
ಧರೆಗೆ ತಂಪಾಯ್ತೆಂದು ಹೇಳಿದ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥೭||


-ಹಂಸಾನಂದಿ

ಚಿತ್ರ ಕೃಪೆ: http://www.dollsofindia.com/product/wood-sculpture/karna-trying-to-lift-wheel-of-chariot-in-battlefield-of-kurkshetra-in-mahabharata-wood-relief-work-CG44.html

* ವ್ಯಾಕರಣರೀತ್ಯಾ ಶುದ್ಧವಾಗ ಕಂಡಿತ ಕ್ಕೆ ಬದಲಾಗಿ, ಹೆಚ್ಚಿಗೆ ಬಳಕೆಯಲ್ಲಿರುವ ಖಂಡಿತ ಎಂಬ ಪದವನ್ನೇ ಬಳಸಿದ್ದೇನೆ.
Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?