ಭಾಮಿನಿ ಷಟ್ಪದಿ

ಷಟ್ಪದಿ ಅಂದ್ರೆ ಆರು ಪಾದಗಳಿರೋದು ಅಂತ ಅರ್ಥ. ಅಂದ್ರೆ ಇರುವೆ ಗೆದ್ದಲು ಜೇನು ನೊಣಗಳಂತಹ ಆರು ಕಾಲುಗಳಿರೋ ಹುಳು ಹುಪ್ಪಟೆ ಅಂತ ಅಂದ್ಕೊಂಡ್ರೆ ಅದು ಒಂದು ತರಹದಲ್ಲಿ ಸರಿಯೇ. ಹಾಗಂದ್ರೆ, ಭಾಮಿನಿ ಷಟ್ಪದಿ ಅಂದ್ರೆ  ರಾಣಿ ಜೇನುಹುಳ ಅಂದ್ಕೊಂಡ್ಬಿಡಬೇಡಿ! ನಾನು ಹೇಳೋಕೆ ಹೊರಟಿದ್ದು ಕನ್ನಡದಲ್ಲಿ ಪ್ರಸಿದ್ಧವಾದ ಒಂದು ಪದ್ಯ ಪ್ರಕಾರವಷ್ಟೆ.

ಕನ್ನಡ ಕಾವ್ಯದಲ್ಲಿ ಬಳಕೆಯಾಗಿರುವ ಛಂದಸ್ಸುಗಳಲ್ಲಿ ಭಾಮಿನಿ ಷಟ್ಪದಿಯೇ ಅತಿ ಹೆಚ್ಚು ಪರಿಚಿತವೂ ಜನಮನ್ನಣೆಯನ್ನು ಗಳಿಸಿರುವ ಛಂದಸ್ಸು ಎಂದರೂ ತಪ್ಪಿಲ್ಲ. ಹಾಗಾಗಿಯೇ ಅದು ಹದಿನೈದನೇ ಶತಮಾನದ ಕುಮಾರವ್ಯಾಸನ ಕರ್ನಾಟಭಾರತ ಕಥಾಮಂಜರಿ (ಗದುಗಿನ ಭಾರತ) ದಿಂದ ಹಿಡಿದು ಇಪ್ಪತ್ತೊಂದನೇ ಶತಮಾನದಲ್ಲಿ ಪ್ರಕಟವಾಗಿರುವ ನರಹರಿ ಅವರ ಯೇಸುಚರಿತೆ ಎಂಬ ಕಾವ್ಯದ ವರೆಗೆ ಹಲವಾರು ಕಾವ್ಯಗಳಲ್ಲಿ ಪ್ರಯೋಗವನ್ನು ಕಂಡುಕೊಂಡಿದೆ.

ನಮ್ಮಲ್ಲಿ ಹೆಚ್ಚಿನವರಿಗೆ ಛಂದಸ್ಸು ಅಂದರೆ ಒಂದು ಕಬ್ಬಿಣದ ಕಡಲೆ, ಪುಸ್ತಕದ ಬದನೇಕಾಯಿ ಅನ್ನುವ ಅಭಿಪ್ರಾಯವಿದೆ. ಅದಕ್ಕೆ ಮುಖ್ಯ ಕಾರಣ ಚಿಕ್ಕಂದಿನಲ್ಲಿ ಈ ರೀತಿಯ ಪದ್ಯಗಳನ್ನು ಓದುವ ಶೈಲಿಯನ್ನಾಗಲೀ, ಅರ್ಥೈಸುವ ರೀತಿಯನ್ನಾಗಲೀ ಅಷ್ಟಾಗಿ ಮನದಟ್ಟು ಮಾಡಿಕೊಳ್ಳದಿರುವುದೇ ಆಗಿದೆ. ಆದರೆ ಬಿಡಿ, ಕಾಲ ಮಿಂಚಿಲ್ಲ. ಎಲ್ಲಕ್ಕೂ ಸರಿಯಾದ ಕಾಲವೊಂದು ಇದ್ದೇ ಇರುತ್ತೆ! ಇವತ್ತು ಈ ಬರಹದ ಮೂಲಕ ಭಾಮಿನಿ ಷಟ್ಪದಿಯ ಲಕ್ಷಣವೇನು, ಓದುವಾಗ ಅದನ್ನು ಗುರುತಿಸುವುದು ಹೇಗೆ, ಮತ್ತೆ ಮುಂದಿನ ಹೆಜ್ಜೆಯಾಗಿ ಭಾಮಿನಿ ಷಟ್ಪದಿಯಲ್ಲಿ ನೀವೇ ಪದ್ಯವೊಂದನ್ನು ಬರೆಯುವುದಾದಲ್ಲಿ, ಅದಕ್ಕೆ ಬೇಕಾದ ಸಾಮಗ್ರಿ - ಇಂತಹವನ್ನು ಈಗ ನೋಡೋಣ.

ಭಾಮಿನಿ ಷಟ್ಪದಿ ಒಂದು ಆರು ಸಾಲಿರುವ ಅಚ್ಚಕನ್ನಡ ಛಂದಸ್ಸು. ಅಂದರೆ, ಆರು ಸಾಲಿರುವ ಎಲ್ಲ ಕವಿತೆಗಳೂ ಷಟ್ಪದಿಯಾಗುವುದಿಲ್ಲ. ಅದು ಷಟ್ಪದಿ ಎನಿಸಿಕೊಳ್ಳಬೇಕಾದರೆ ಕೆಲವು ಲಕ್ಷಣಗಳಿರಬೇಕು. ಇದೇ ಛಂದಸ್ಸು, ಅಥವಾ ಪದ್ಯದ ನಡಿಗೆ.

ಕನ್ನಡದಲ್ಲಿ ಸಾಂಪ್ರದಾಯಿಕ ಕಾವ್ಯಗಳಲ್ಲಿ ಇರುವ ಪದ್ಯಗಳಲ್ಲಿ ಎಲ್ಲ ಸಾಲುಗಳಲ್ಲಿಯೂ ಎರಡನೆ ಅಕ್ಷರ ಒಂದೇ ಆಗಿರುತ್ತೆ. ಇದಕ್ಕೆ ಪ್ರಾಸ ಎನ್ನುತ್ತೇವೆ. ಭಾಮಿನಿಯೂ ಇದಕ್ಕೆ ಹೊರತಲ್ಲ.  ಉದಾಹರಣೆಗೆ ಕುಮಾರವ್ಯಾಸ ಭಾರತದ ಮೊದಲ ಪದ್ಯವನ್ನು ನೋಡೋಣ:

ಶ್ರೀವನಿತೆಯರಸನೆ ವಿಮಲ ರಾ-
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರ ದಾತಾರ|
ರಾವಣಾಸುರಮಥನ ಶ್ರವಣ ಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ||

ಇಲ್ಲಿ ಪ್ರತಿ ಸಾಲಿನಲ್ಲಿ ಎರಡನೆ ಅಕ್ಷರ ‘ವ’ ಆಗಿದೆ.  ಹೀಗೇ, ನೀವೇ ಷಟ್ಪದಿಯನ್ನು ಬರೆಯ ಬೇಕಾದಲ್ಲಿ ಇದನ್ನು ಗಮನದಲ್ಲಿಟ್ಟುಕೊಂಡಿರಿ.

ಮತ್ತೆ, ಪದ್ಯದ ಆರು ಸಾಲಿನಲ್ಲಿ, ಮೂರು ಮತ್ತು ಆರನೇ ಸಾಲುಗಳು ಹೆಚ್ಚು ಉದ್ದವಾಗಿಯೂ, ಉಳಿದ ಸಾಲುಗಳು ಸ್ವಲ್ಪ ಚಿಕ್ಕದಾಗಿರುವುದನ್ನೂ ನೀವು ಗಮನಿಸಿರಬೇಕು. ಕನ್ನಡದ ಎಲ್ಲ ಷಟ್ಪದಿಗಳೂ ಇದೇ ಮಾದರಿಯನ್ನೇ ಅನುಸರಿಸುತ್ತವೆ. ಭಾಮಿನಿಯದ್ದು ೩-೪ರ ಮಿಶ್ರ ನಡಿಗೆ. ಭಾಮಿನಿಷಟ್ಪದಿಯ ನಡಿಗೆಗೆ ಈ ರೀತಿ ಲೆಕ್ಕಾಚಾರ ಹಾಕಬಹುದು.

೩-೪ । ೩-೪ ।
೩-೪ । ೩-೪ ।
೩-೪ । ೩-೪ । ೩-೪ । ೨ ॥

ಪದ್ಯದ ಎರಡನೆ ಅರ್ಧ ಭಾಗ, ಮೊದಲರೆ ಭಾಗವನ್ನೇ ಹೋಲುತ್ತದೆ.  ಈ ನಡಿಗೆಯನ್ನು ಮನದಟ್ಟು ಮಾಡಿಕೊಳ್ಳಲಿಕ್ಕೆ  ಸ್ವಲ್ಪ ಲಘು ಗುರುಗಳ ಲೆಕ್ಕಾಚಾರವನ್ನು ತಿಳಿಯೋಣ.

ಸುಲಭವಾಗಿ ಹೇಳುವುದಾದರೆ, ದೀರ್ಘ ಅಕ್ಷರಗಳಿಗೆ ಎರಡು ಮಾತ್ರೆಯ ಲೆಕ್ಕ. ಒತ್ತಕ್ಷರದ ಹಿಂದಿನ ಅಕ್ಷರವು , ಮತ್ತೆ ಮೂರನೇ/ ಆರನೇ ಸಾಲಿನ ಕೊನೆಯ ಅಕ್ಷರವು ಚಿಕ್ಕದಾಗಿದ್ದರೂ ಉದ್ದವಾಗಿದ್ದರೂ, ಅದಕ್ಕೂ ಎರಡು ಮಾತ್ರೆಯ ಲೆಕ್ಕ. ಉಳಿದ ಹೃಸ್ವ- ಅಥವಾ ಗಿಡ್ಡ ಅಕ್ಷರಗಳಿಗೆಲ್ಲ ಒಂದು ಮಾತ್ರೆಯ ಲೆಕ್ಕ. ಈಗ ಉದಾಹರಣೆಗೆ ನಾ ಎನ್ನುವುದು ಎರಡು ಮಾತ್ರೆಯನ್ನೂ, ನ ಅನ್ನುವುದು ಒಂದು ಮಾತ್ರೆಯನ್ನೂ ತೋರಿಸುತ್ತೆ ಎನ್ನುವುದಾದರೆ , ಭಾಮಿನಿಯ ೩-೪ ರ ನಡಿಗೆಯನ್ನು ಮಾಡಲು ಹಲವಾರು ವಿಧಗಳಿವೆ.

ನನನ । ನನನನ ।      
ನಾನ  । ನನನನ ।      

ನಾನ  । ನಾನನ  ।      

ನಾನ  । ನಾ ನಾ  ।
ನ ನಾ । ನನನಾ  ।  

೩ ಮಾತ್ರೆಯ ಗಣಕ್ಕೆ ನನಾ ಅನ್ನುವ, ಮತ್ತೆ ೪ ಮಾತ್ರೆಯ ಗಣಕ್ಕೆ ನನಾನ ಎನ್ನುವ  ರೀತಿಯ (ಅಂದರೆ, ಒಂದು ಲಘುವಿನ ನಂತರ ಒಂದು ಗುರು ) ರೀತಿಯ ಹವಣಿಕೆ ಬರಬಾರದೆಂದು ಒಂದು ನಿಯಮ. ಹೀಗೆ ಬಂದಲ್ಲಿ ಅದು ಕೇಳಲಿಕ್ಕೆ ಚೆನ್ನಾಗಿರುವುದಿಲ್ಲವೆನ್ನುವುದೇ ಇಂತಹ ನಿಯಮಕ್ಕೆ ಕಾರಣವಷ್ಟೆ. ಇದಕ್ಕೆ "ಲಗಂ" ದೋಷವೆನ್ನುತ್ತಾರೆ, ನೀವೇ ಪದ್ಯಗಳನ್ನು ಬರೆಯಲು ಹೊರಟಾಗ ಇವುಗಳನ್ನು ನೆನಪಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ಹಾಗಿದ್ದರೇಕೆ ತಡ? ಈ ಷಟ್ಪದಿ ನಡುಗನ್ನಡದ ಕಾಲದಲ್ಲಿ ಹೆಚ್ಚು ಬಳಕೆಯಲ್ಲಿದ್ದುದು ನಿಜವಾದರೂ ಹೊಸಗನ್ನಡದಲ್ಲಿ ಬರೆಯಬಾರದೆಂದೇನೂ ಇಲ್ಲ.

ಅದಕ್ಕೇ  ತಮಾಷೆಗೊಂದು ಕಂಗ್ಲೀಷ್ ಷಟ್ಪದಿ, ಇದೀಗ ತಾನೇ ಬರೆದಿದ್ದು - ಹಾಕಿದ್ದೇನೆ.(ಶಿಥಿಲದ್ವಿತ್ತ್ಚವನ್ನು ಮನ್ನಿಸಿಬಿಡಿ!)

ಭಾಮಿನಿಯ ಹೆಸರಲ್ಲಿ ಸಾಲ್ಗಳ
ನೇಮದಿಂದಲಿ ಹೊಸೆಯ ಹೊರಟಾ-
ರಾಮದಲ್ಲೇ ಷಟ್ಪದಿ ಗಳನು ನೀವು ಬರೆದೀರಿ!
ಕಾಮ ಫುಲ್ ಸ್ಟಾಪೊಂದು ಬೇಡವು
ಗ್ರಾಮರೊಂದನು ಪಾಲಿಸಿದರಾ
ರಾಮ ನಿಮ್ಮಯ ಪದ್ಯ ಮೆಚ್ಚುವ ಡೌಟು ಬೇಡಿನ್ನು!

-ಹಂಸಾನಂದಿ

ಕೊ: ಹಿಂದೆ ಒಂದು ಕಂಗ್ಲೀಷ್ ಚೌಪದಿ ಬರೆದಿದ್ದೆ . ಅದನ್ನು ನೀವು ಇಲ್ಲಿ ಓದಬಹುದು 

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?