Skip to main content

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೧

(ಇದು ಆರೇಳು ವರ್ಷಗಳ ಹಿಂದೆ ಬರೆದಿದ್ದ ಒಂದು ಬರಹ - ಇಲ್ಲಿ ಹಾಕಿರಲಿಲ್ಲವಾದ್ದರಿಂದ ಮತ್ತೆ ಹಾಕುತ್ತಿದ್ದೇನೆ)

ಒಂದಾನೊಂದು ಕಾಲದಲ್ಲಿ ಸೀಗೆ ಗುಡ್ಡದ ತಪ್ಪಲಲ್ಲಿ ಒಂದು ಕರಡಿ ಸಂಸಾರ ವಾಸವಾಗಿತ್ತು. ಅಮ್ಮ, ಅಪ್ಪ ಮತ್ತೆ ಪುಟಾಣಿ. ಬೆಟ್ಟದ ಮೇಲೆ ಕುರುಚಲು ಕಾಡಿದ್ದರಿಂದ ಅವರ ಸಂಸಾರಕ್ಕೆ ಹಲಸಿನ ಹಣ್ಣಿಗೂ, ಜೇನುತುಪ್ಪಕ್ಕೂ ಯಾವತ್ತೂ ಕೊರತೆ ಆಗಿರ್ಲಿಲ್ಲ. ಸುತ್ತ ಮುತ್ತ ಹಳ್ಳೀ ಜನರೂ ಕೂಡ ಸೀಗೆ ಗುಡ್ಡದಲ್ಲಿ ಕರಡಿ ಸಂಸಾರ ಇರೋದು ಗೊತ್ತಿದ್ರಿಂದ ಹೆಚ್ಚಾಗಿ ಯಾರೂ ಬೆಟ್ಟದ ಮೇಲೇ ಬರೋದಾಗ್ಲಿ, ಕರಡಿಗಳಿಗೆ ತೊಂದ್ರೆ ಮಾಡೋದಾಗ್ಲಿ ಮಾಡ್ತಿರ್ಲಿಲ್ಲ.

ಪುಟಾಣಿ ಕರಡಿ ಇದೆಯಲ್ಲ, ಅದು ಬಹಳ ಚೇಷ್ಟೆ. ನಿಂತ ಕಡೆ ಕಾಲು ನಿಲ್ಲೋದಿಲ್ಲ. ಒಂದು ದಿನ ಹಾಡುಹಗಲೇ ಅಮ್ಮನ ಕಣ್ಣು ತಪ್ಪಿಸಿ ಗುಡ್ಡದ ಕೆಳಗಿರೋ ಊರಿಗೆ ಹೋಗಿಬಿಟ್ಟಿದೆ! ನಟ್ಟ ನಡು ಮಧ್ಯಾಹ್ನ. ಎಲ್ಲೋ ಮಕ್ಕಳು ಹಾಡು ಹೇಳೋದು ಕೇಳಿ ಹೋಗಿ ನೋಡತ್ತೆ, ಒಂದು ಪುಟಾಣಿ ಗುಡಿಯೊಳಗೆ ಯಾರೋ ಮಕ್ಕಳಿಗೆ ಏನೋ ಹೇಳಿಕೊಡ್ತಿದಾರೆ. ಪುಟಾಣಿ ಅಲ್ಲೇ ಕಿಟಕಿ ಹತ್ರ ಕಿವಿಇಟ್ಟು ಕೇಳತ್ತೆ. ಮೂಡಲ - ಪಡುವಲ - ಬಡಗಲ - ತೆಂಕಲ ಇವು ನಾಕು ದಿಕ್ಕುಗಳು. ಇವಕ್ಕೇ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಅಂತಲೂ ಅಂತಾರೆ ಅಂತ ಪೇಟ ಕಟ್ಟಿಕೊಂಡವರೊಬ್ರು ಹೇಳ್ತಾ ಇದ್ದಿದ್ದನ್ನ,  ಮಕ್ಕಳೂ ಅದೇ ಮಾತನ್ನೆ ತಿರುಗಿ ತಿರುಗಿ ಹೇಳ್ತಿದ್ದು ಕೇಳಿಸ್ತು. ಅಷ್ಟರಲ್ಲೇ, ಪೇಟದವರು, ಹೋಗಿ ಮಕ್ಳಾ , ಇನ್ನು ಮನೇಗೆ ಹೋಗಿ ಊಟ ಮಾಡೀ ಅಂತ ಇದ್ದಾಗ ಕರಡೀ ಮರಿಗೆ ಯಾರಾದ್ರೂ ನೋಡಿದ್ರೆ ಅಂತ ಭಯವಾಗಿ ಓಟ ಕಿತ್ತಿತು.

ಅತ್ಲಾಗಿ ಅಮ್ಮ ಕರಡೀಗೆ ಜೀವವೇ ಬಾಯಿಗೆ ಬಂದಿತ್ತು. ಮಗು ಎಲ್ಲಾದ್ರೂ ಹೋಗಿ ಏನಾದ್ರೂ ಅಪಾಯ ಮಾಡಿಕೊಂಡರೆ ಅಂತ. ವಾಪಸ್ ಬಂದ ಮಗುವಿಗೆ ಒಂದು ಕೋಪದಲ್ಲಿ ಏಟು ಕೊಟ್ಟು, ಆಮೇಲೆ ಮುದ್ದು ಮಾಡಿ, ಹಾಗೆಲ್ಲ ಮಾಡ್ಬಾರ್ದು ಮರೀ, ನಮ್ಮ ಮನೆ ಈ ಗುಡ್ಡ. ನಮ್ಮ ಮನೆಯಲ್ಲಿ ನಾವೇ ರಾಜರು. ಹೊರಗೆ ಹೋದರೆ ನಮಗೆ ಕಷ್ಟ ಅಂತ ಒಳ್ಳೇ ಮಾತಲ್ಲಿ ತಿಳೀಹೇಳಿ, ಇನ್ಯಾವತ್ತೂ ಹಾಗೆ ಹಳ್ಳೀಗೆ ಹೋಗ್ಬಾರ್ದು ಅಂತ ಮಾತು ತೊಗೋತು.

ಹಳ್ಳಿಗೆ ಹೋಗಿ ಬಂದ ಮರೀಗೆ ಒಂದೇ ಯೋಚನೆ. ಅದೇನದು ಪೇಟ ಸುತ್ತಿದ್ದವರು ಪೂರ್ವ ಪಶ್ಚಿಮ ಅಂತಿದ್ರಲ್ಲ ಅಂತ. ಅಮ್ಮನ್ನ ಕೇಳಿತು. ಅಮ್ಮ, "ಅದೆಲ್ಲ ನಂಗೆ ಗೊತ್ತಿಲ್ಲ ಕಣೋ. ನಿಮ್ಮಣ್ಣನ್ನ ಕೇಳು, ಗೊತ್ತಿದ್ರೆ ಹೇಳ್ತಾರೆ" ಅಂತು. ಸಂಜೇ ಮೊದಲು ದೊಡ್ಡ ಜೇನುಹಟ್ಟಿಯೊಂದನ್ನ, ಜೊತೆಗೆ ಎರಡು ಹಲಸಿನ ಹಣ್ಣನ್ನ ಅಪ್ಪ ತೊಗೊಂಬಂದಾಗ ಪುಟಾಣಿ ಕೇಳೇ ಕೇಳ್ತು. "ಅಣ್ಣ, ಪೂರ್ವ ಪಶ್ಚಿಮ, ತೆಂಕಲ ಬಡಗಲ ಅಂದ್ರೇನು?" ಅಂತ. ಅಷ್ಟು ಹೊತ್ತಿಗೆ ಅಮ್ಮನೂ ಪುಟಾಣಿಯ ಸಾಹಸದ ವಿಷಯ ಅಪ್ಪನ ಹತ್ತಿರ ದೂರಿ ಆಗಿತ್ತು. ಅಪ್ಪ ಅರ್ಧ ಕೋಪ ಅರ್ಧ ಪ್ರೀತಿಯಿಂದ, "ಸರಿ ಅದೆಲ್ಲ ಆಮೇಲೆ ಹೇಳ್ತೀನಿ. ಬೇಗ ಒಂದಿಷ್ಟು ಹಣ್ಣು ತಿನ್ನು" ಅಂತ ತಿನ್ನಿಸಿ ಗಡಗಡ ಅಂತ ಗುಡ್ಡದ ಮೇಲಿದ್ದ ಗುಡೀ ತನಕ ಕರ್ಕೊಂಡು ಹೋಯ್ತು ಪುಟಾಣೀನ.

ಅಪ್ಪ ಕರಡಿ ಅಲ್ಲಿ ನಿಂತು ಮುಳುಗೋ ಸೂರ್ಯನ್ನ ತೋರಿಸಿ, "ನೋಡು ಮರಿ, ಈಗ ಸೂರ್ಯ ಮುಳುಗ್ತಿದಾನಲ್ಲ, ಆ ದಿಕ್ಕಿಗೆ ಪಶ್ಚಿಮ, ಪಡುವಲು ಅಂತಾರೆ. ಇದಕ್ಕೆ ಎದುರುಗಡೆ , ಬೆಳಗ್ಗೆ ಸೂರ್ಯ ಹುಟ್ತಾನಲ್ಲ ಅದಕ್ಕೆ ಮೂಡಲು, ಅಥ್ವಾ ಪೂರ್ವ ಅಂತಾರೆ. ಮತ್ತೆ, ನೀನು ಪೂರ್ವದ ಕಡೇನೋಡ್ತಾ ನಿಂತರೆ ನಿನ್ನ ಬಲಗೈ ತೋರಿಸೋ ಕಡೆ ತೆಂಕಲು ಅಥ್ವಾ ದಕ್ಷಿಣ. ಎಡಗೈ ತೋರಿಸೋದು ಉತ್ತರ ಅಥವಾ ಬಡಗಲು. ಇವಕ್ಕೆ ದಿಕ್ಕುಗಳು ಅಂತಾರೆ" ಅಂತು.

ಅಷ್ಟು ಹೊತ್ತಿಗೆ ಕತ್ತಲಾಗ್ತಾ ಹೋಯ್ತು. "ಸೂರ್ಯ ಮುಳುಗಿದ್ಮೇಲೆ, ದಿಕ್ಕು ಕಾಣೋದು ಹೇಗೆ ಅಣ್ಣಾ?" ಅಂತು ಪುಟಾಣಿ. ಅದಕ್ಕೆ ಅಪ್ಪ ಅಲ್ಲಿ ಕಾಣೋಕೆ ಶುರುವಾಗಿದ್ದ ಒಂದು ನಕ್ಷತ್ರ ತೋರಿಸಿ "ನೋಡು ಮರಿ, ಅದಕ್ಕೆ ಧ್ರುವ ನಕ್ಷತ್ರ ಅಂತಾರೆ. ಅದು ಉತ್ತರ ದಿಕ್ಕನ್ನ ತೋರಿಸತ್ತೆ.ಅದೊಂದು ದಿಕ್ಕು ಗೊತ್ತಾದ್ರೆ ಎಲ್ಲ ಗೊತ್ತಾದ್ ಹಾಗೆ ಅಲ್ವಾ" ಅಂತು. ಪುಟಾಣೀಗೆ ಯಾಕೋ ಬಗೆ ಹರೀಲಿಲ್ಲ.

ಸರಿ ಚಂದ್ರನ ಬೆಳಕಲ್ಲೇ ಕಥೆ ಶುರುಮಾಡ್ತು ಅಪ್ಪ ಕರಡಿ.

"ನೋಡು ಪುಟಾಣಿ. ಭೂಮಿ ಒಂದು ಚೆಂಡಿನ ತರಹ ಇದೆ. ಅದು ತುಂಬ ದೊಡ್ಡದು, ಅದಕ್ಕೆ ನಮಗೆ ಅದು ಗೊತ್ತಾಗೋಲ್ಲ. ನೋಡಿಲ್ಲಿ,ಈ ಕಿತ್ತಳೇ ಹಣ್ಣಿನ ತರ್ಹ ಇದೆ ಭೂಮಿ.ಈ ಹಣ್ಣಿನ ನಡುವೆ ಒಂದು ಕಡ್ಡಿ ಚುಚ್ಚಿಬಿಡೋಣ" ಅಂತ ಚುಚ್ಚಿ ತೋರಿಸಿತು. ಆಮೇಲೆ ಕಡ್ಡಿಯನ್ನ ಹಿಡಿದು ಹಣ್ಣನ್ನ ತಿರುಗಿಸ್ತಾ ಹೇಳ್ತು - ನೋಡು ಭೂಮೀ ಹೀಗೇ ತಿರುಗ್ತಿರತ್ತೆ. ಗೊತ್ತಾಯ್ತಾ? ಈ ಕಡ್ಡಿಯ ಒಂದು ಕಡೇನ ನಾವು ಉತ್ತರ ಅಂತೀವಿ, ಇನ್ನೊಂದನ್ನ ದಕ್ಷಿಣ ಅಂತೀವಿ. ಅಂದ್ರೆ, ಈ ಹಣ್ಣಿನ, ಅಂದ್ರೆ ಭೂಮಿ ಮೇಲೆ ಎಲ್ಲೇ ನಿಂತ್ರೂ ಉತ್ತರ ದಕ್ಷಿಣ ಈ ಕಡ್ಡಿಯ ತುದಿ ಅಂತಲೇ ಇಟ್ಕೋ" ಅಂತು.

"ಸ್ವಲ್ಪ ಅರ್ಥ ಆಯ್ತು - ಇನ್ನೂ ಬಿಡಿಸಿ ಹೇಳಿ ಅಣ್ಣಾ" ಅಂತು ಪುಟಾಣಿ. ಪಾಪ , ಚಿಕ್ಕದಲ್ಲ್ವಾ?

"ನೋಡು, ನಾವು ಯಾವೂರಲ್ಲೇ ಇರಲಿ, ಈ ಉತ್ತರ ಅನ್ನೋ ಕಡೇಲಿ ಹೋಗ್ತಾ ಇದ್ರೆ, ಈ ಕಡ್ಡಿ ಹಣ್ಣಿಂದ ಹೊರಕ್ಕೆ ಬರ್ತಿದೆಯಲ್ಲಾ, ಅಲ್ಲಿಗೇ ಹೋಗಿ ಸೇರ್ಬೇಕು. ಅಂದ್ರೆ, ನಮ್ಮ ಮನೆ ಸೀಗೇಗುಡ್ಡದಿಂದ ನೇರವಾಗಿ ಈ ಧ್ರುವನಕ್ಷತ್ರ ನೋಡ್ತಾ ಹೋದ್ರೆ ನೀನು ಒಂದಲ್ಲ ಒಂದು ದಿನ ಆ ಕಡ್ಡಿ ಇರೋ ಕಡೇಗೆ ಹೋಗ್ತೀಯ. ಆ ಜಾಗಕ್ಕೆ ಉತ್ತರ ಧ್ರುವ ಅಂತಾರೆ. ಅಲ್ಲಿ ಹೋದಾಗ,ನೀನು ತಲೆ ಎತ್ತಿ ನೋಡಿದರೆ, ಸರೀಯಾಗಿ ನೆತ್ತಿ ಮೇಲೆ ನಿನಗೆ ಈ ಧ್ರುವ ನಕ್ಷತ್ರ ಕಾಣತ್ತೆ. ಹಾಗೇ, ನಿನ್ನ ಚಿಕ್ಕಪ್ಪನ ಮನೇ ನೋಡಿದೀಯಲ್ಲ, ಮಾಲೇಕಲ್ಲು ತಿರುಪತೀಲಿ, ಅಲ್ಲಿ ಅವರ ಮನೇ ಪುಟಾಣಿ ಅವರ ಮನೇಯಿಂದ ಆ ಧ್ರುವ ನಕ್ಷತ್ರ ನೋಡ್ತಾ ನಡ್ಕೊಂಡು ಹೋದ್ರೆ ಅದೂ ಒಂದಲ್ಲ ಒಂದು ದಿನ ಅದೇ ಉತ್ತರ ಧ್ರುವವನ್ನೇ ಸೇರತ್ತೆ""ಓ ಗೊತ್ತಾಯ್ತು. ಉತ್ತರ ದಕ್ಷಿಣ ಎಲ್ಲಾ ಊರಿಂದಲೂ ಒಂದೇ ಆಯ್ತು. ಹಾಗಾದ್ರೆ, ಪೂರ್ವ ಪಶ್ಚಿಮ ಎಲ್ಲಿ?" ಅಂತು ಪುಟಾಣಿ.
"ಹ್ಮ್ಮ್.. ಅದೇ ತಮಾಶಿ ನೋಡು. ಈ ಪೂರ್ವ ಪಶ್ಚಿಮಕ್ಕೆ ಸ್ವಂತಿಕೆ ಅನ್ನೋದೇ ಇಲ್ಲ.  ನೀನು ಬೇರೆಬೇರೆ ಕಡೇಗೆ ಹೋಗ್ತಾ ಪೂರ್ವ ಪಶ್ಚಿಮ ಬೇರೆ ಬೇರೆ ಆಗ್ತಾ ಇರತ್ತೆ. ಭೂಮಿ ಸುತ್ತೋ ದಿಕ್ಕಲ್ಲೇ ಹೋಗ್ತಾ ಇದ್ರೆ ಅದೇ ಪೂರ್ವ. ಸೀಗೇ ಗುಡ್ಡದ ಪೂರ್ವಕ್ಕೆ ಕೊಂಡಜ್ಜಿ - ಅದೇ ನೀನಿವತ್ತು ಬೆಳಗ್ಗೆ ಹೋಗಿದ್ಯಲ್ಲ, ಆ ಗುಡಿ ಕೊಂಡಜ್ಜಿ ವರದರಾಜನ ಗುಡಿ. ಹಾಗೇ ಮುಂದೆ ಹೋದರೆ ತಿಮ್ಮನ ಹಳ್ಳಿ. ಇನ್ನೂ ಮುಂದಕ್ಕೆ ಹೋದರೆ ಗಂಡಸಿ. ಹಾಗೇ ಹೋಗ್ತಾ.... ಇದ್ದರೆ, ಭೂಮೀ ಎಲ್ಲ ಸುತ್ಕೊಂಡು ಮತ್ತೆ ಸೀಗೇಗುಡ್ಡಕ್ಕೇ ಹಗರೇ ಕಡೇಯಿಂದ ಬರ್ತೀಯ; ಅದೇ ನಿಮ್ಮ ಚಿಕ್ಕಪ್ಪನ ಮನೇ ಪುಟಾಣಿ ಮಾಲೇಕಲ್ಲಿಂದ ಪೂರ್ವಕ್ಕೆ ಹೋಗ್ತಾ ಇದ್ದ್ರೆ, ಮೊದ್ಲು ಶೆಟ್ಟಿಕೆರೆ  ಸಿಕ್ಕತ್ತೆ . ಆಮೇಲೆ ಕೋಟೆಕೆರೆ. ಹಾಗೇ ಹೋಗ್ತಾ ಹೋಗ್ತಾ ಹೋಗ್ತಾ ಇದ್ರೆ, ಒಂದಲ್ಲ ಒಂದು ದಿನ ಅರಸೀಕೆರೆ ಕಡೆಯಿಂದ ಮಾಲೇಕಲ್ಲಿಗೆ ಹತ್ಬಹುದು!"


ಪುಟಾಣಿಗೆ ಇದೆಲ್ಲ ಕೇಳಿ ಬಹಳ ಖುಷಿ ಆಯ್ತು! "ಓ ಚೆನ್ನಾಗಿದೆ ತುಂಬಾ! ಅಪ್ಪ, ಹಾಗಾರೆ ನೀನು ಚಿಕ್ಕಪ್ಪಂಗೆ ಹೇಳು - ಅವ್ರೆಲ್ಲಾ ಮಾಲೇಕಲ್ಲಿಂದ ಹೊರಡ್ಲಿ. ನಾವಿಲ್ಲಿಂದ ಹೊರ್ಡಣ. ಮತ್ತೆ ಉತ್ತರ ಧ್ರುವಕ್ಕೆ ಹೋಇ ಅಲ್ಲೊಂದು ಮನೇ ಮಾಡ್ಕೊಂಡು ಇದ್ಬಿಡಣ!" ಅಂತು.

ಅಪ್ಪ ಅದಕ್ಕೆ " ಅಯ್ಯೋ ಪುಟ್ಟ, ಅದು ತುಂಬಾ ದೂರ. ಅಲ್ಲಿ ತುಂಬಾ ಚಳಿ ಜಾಸ್ತಿ, ಆದ್ರೆ ಅಲ್ಲಿ ನಮ್ ದಾಯಾದಿಗಳ್ ಮನೆಗಳು ಬೇಕಾದಷ್ಟಿವೆ. ಆದ್ರೆ ತಮಾಷಿ ಗೊತ್ತಾ? ಅವರಿಗೆ ನಮ್ ತರಹ ಹಗ್ಲು ರಾತ್ರಿ ಇಲ್ಲ. ಆರ್ ತಿಂಗಳು ಹಗಲು ಆರ್ ತಿಂಗಳು  ರಾತ್ರಿ" ಅಂತು.

ಪುಟಾಣಿ ಕಕ್ಕಾಬಿಕ್ಕಿ! "ಸೂರ್ಯ ಆರ್ ತಿಂಗಳು ಮುಳುಗ್ದೇ ಇದ್ರೆ, ಅಲ್ಲಿರೋ ನಮ್ ದಾಯಾದಿಗಳಿಗೆ ಪೂರ್ವ ಯಾವ್ದು, ಪಶ್ಚಿಮ ಯಾವ್ದು ಅಂತ ಹೇಗೆ ಗೊತ್ತಾಗತ್ತೆ ಅಣ್ಣ?" ಅಂತು.

ಅಪ್ಪ ಅದಕ್ಕೆ, "ಪುಟ್ಟೂ, ಅದೊಂದು ದೊಡ್ಡ ಕತೆ - ಈಗಾಗ್ಲೇ ರಾತ್ರಿ ಆಗಿದೆ. ಬೇಗ ಹೋಗಿ ಮಲ್ಕೋಳೋಣಾ, ಅದೆಲ್ಲ ಇನ್ನೊಂದ್ಸಲ ಹೇಳ್ತೀನಿ" ಅಂತ ಪುಸಲಾಯ್ಸಿ ಮಗೂನ ಮನೇಗೆ ಕರ್ಕೊಂಡು ಹೋಯ್ತು.

(ಮುಂದುವರೆಯುವುದು ....)

-ಹಂಸಾನಂದಿ

ಕೊಸರು: ಸೀಗೇಗುಡ್ಡ ಹಾಸನದ ಹತ್ತಿರದ, ಬೇಲೂರು ರಸ್ತೆಯ ಪಕ್ಕದಲ್ಲಿರುವ ಒಂದು ಗುಡ್ಡ. ಇದರ ಒಂದು ಬುಡದಲ್ಲಿ ಸೀಗೆ ಎಂಬ ಹಳ್ಳಿ ಇದೆ. ಇನ್ನೊಂದು ಕಡೆ ಮುದ್ದಾದ ವರದರಾಜನ ಗುಡಿಯಿರುವ ಕೊಂಡಜ್ಜಿ. ನಮ್ಮ ಶಾಲೆಯಿಂದ ನಿತ್ಯ ಕಾಣುತ್ತಿದ್ದ ಗುಡ್ಡ. ಅದರ ಮೇಲೆ ಕರಡಿಗಳು ಇವೆ ಅಂತ ಎಲ್ಲ ಹುಡುಗರೂ ಹೇಳ್ತಿದ್ದರು. ಈಗಲೂ ಒಂದು ತರಹ ಕುರುಚಲು ಕಾಡಿದೆ.

ಕೊನೆಯ ಕೊಸರು: ಮಾಲೇಕಲ್ಲು ತಿರುಪತಿ ಅರಸೀಕೆರೆ ಬಳಿಯ ಒಂದು ಬೆಟ್ಟ. ಮೇಲೆ ವೆಂಕಟ ರಮಣನ ಗುಡಿ ಇದೆ. ಅಲ್ಲೂ ಕರಡಿಗಳಿವೆ ಅಂತ ಹೇಳುವುದನ್ನು ಕೇಳಿರುವೆ.

Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ಹಲವರಿಗೆ ಪತ್ರಿಕೆಯಲ್ಲಿ ಬಂದದ್ದೆಲ್ಲಾ ಸತ್ಯ, ಪ್ರಕಟವಾಗಿದ್ದೆಲ್ಲ ನಿಜ ಅನ್ನುವ ಭ್ರಮೆ ಇರುತ್ತೆ. ಒಂದು ವಾದವಿದ್ದರೆ ಅದರ ಎಲ್ಲ ಮುಖಗಳನ್ನೂ ನೋಡಿ ಅವರವರ ತೀರ್ಮಾನ ಅವರು ತೆಗೆದುಕೊಳ್ಳುವುದೇನೋ ಸರಿಯೇ. ಆದರೆ ಈ ದಾರಿ ಹಿಡಿಯದೇ, ಪ್ರಕಟವಾದಮೇಲೆ ಅದು ಸರಿಯೇ ಇರಬೇಕು ಎಂದು ಕೊಳ್ಳುವುದು ಮಾತ್ರ ಹಳ್ಳ ಹಿಡಿಯುವ ದಾರಿ.

ಐದು  ವರ್ಷಗಳ ಹಿಂದೆ ಬರೆದಿಟ್ಟಿದ್ದ ಈ ಬರಹವನ್ನು ಇವತ್ತು, ಸ್ವಲ್ಪ ತಿದ್ದು ಪಡಿ ಮಾಡಿ, ಸ್ವಲ್ಪ ಸೇರಿಸಿ,  ಪ್ರಕಟಿಸಿದ್ದೇಕೆ ಎಂದರೆ, ಪ್ರಜಾವಾಣಿಯಲ್ಲಿ  ಐದು ವರ್ಷ ಹಿಂದೆ ಅಂಕಣವೊಂದರಲ್ಲಿ ಪ್ರಕಟವಾಗಿದ್ದ  ಬರಹವೊಂದು ಅವರಿವರ ಫೇಸ್ ಬುಕ್ ಗೋಡೆಗಳಲ್ಲಿ ಕಾಣಿಸಿಕೊಂಡಿದ್ದು. ಮತ್ತೆ ಹಲವರು  ಆ ಬರಹವನ್ನು ಹಂಚಿಕೊಂಡು, ಮರುಪ್ರಸಾರ ಮಾಡಿದ್ದೂ ನನ್ನ ಕಣ್ಣಿಗೆ ಬಿದ್ದುದರಿಂದ, ಹಿಂದೆ ನಾನು ಬರೆದಿಟ್ಟ ಟಿಪ್ಪಣಿಗಳು ನೆನಪಾದುವು!


ಈ ಬರಹದ ಬಗ್ಗೆ ಐದು ವರ್ಷಗಳ ಹಿಂದೆಯೇ, ಅಂದರೆ ಈ ಅಂಕಣ ಬರಹ ಪ್ರಜಾವಾಣಿಯಲ್ಲಿ ಬಂದಾಗಲೇ, ಗೂಗಲ್ ಬಜ಼್ ನಲ್ಲಿ ಒಂದಷ್ಟು ಚರ್ಚೆ ಆಗಿತ್ತು. ಪತ್ರಿಯೆಯ ಅಂಕಣದಲ್ಲಿ ಅಂಕಣಕಾರರು ಬರೆದದ್ದೆಲ್ಲಾ ಸತ್ಯ ಅಥವಾ ಸರಿ ಎಂದು ಕೊಂಡ ಕೆಲವು ಮಿತ್ರರು (ಏಕೆಂದರೆ ಅದು ಪ್ರಜಾವಾಣಿಯಂತಹ ಪತ್ರಿಕೆಯಲ್ಲೇ ಪ್ರಕಟವಾಗಿತ್ತಲ್ಲ!) ಈ ಬರಹವನ್ನು ಆಧಾರವಾಗಿಟ್ಟುಕೊಂಡು,  ಕೃಷ್ಣ ದ್ರಾವಿಡ ಭಾಷೆಯಾಡುತ್ತಿದ್ದವನೇ, ಅದರಲ್ಲೂ ಅವನು ಕನ್ನಡದವನೇ ಎಂದು ವಾದಿಸಿದ್ದರು. ಕೃಷ್ಣ ಕನ್ನಡದವನೇ ಅಲ್ಲವೇ ಅನ್ನುವುದನ್ನ…

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಪ್ರತಿದಿನ ಪತ್ರಿಕೆಯಲ್ಲಿ ದಿನಭವಿಷ್ಯ ನೋಡುವಂತಹ ಕೋಟ್ಯಂತರ ಜನಗಳಲ್ಲಿ ನೀವು ಒಬ್ಬರಾಗಿದ್ದರೆ, ಅಥವ ನಿಮ್ಮ ರಾಶಿ ಫಲವನ್ನು  ಪತ್ರಿಕೆಯಲ್ಲೋ, ಇಂಟರ್ನೆಟ್ ನಲ್ಲೋ ಆಗಾಗ ನೋಡುವ ಹವ್ಯಾಸ ನಿಮಗಿದ್ದರೆ, ಈ ಬರಹ ಓದೋದು ನಿಮಗೆ ಅತೀ ಅಗತ್ಯ. ಯಾಕೆ ಗೊತ್ತಾ? ನೀವು ನೋಡ್ತಾ ಇರೋ ರಾಶಿ ನೀವು ಹುಟ್ಟಿದ ರಾಶಿಯೇ ಅಲ್ಲದೆ ಇರಬಹುದು. ಇದೇನಪ್ಪಾ ನಾನು ಹುಟ್ಟಿದ್ದೇ ಸುಳ್ಳಾ ಹೀಗನ್ನೋಕೆ ಅಂದಿರಾ? ತಾಳಿ, ನಿಮಗೇ ಅರ್ಥವಾಗುತ್ತೆ. ಇನ್ನು ನಿಮಗೆ ಈ ಭವಿಷ್ಯ ಜ್ಯೋತಿಷ್ಯ ಇಂತಹದ್ದರ ಬಗ್ಗೆ ನಂಬಿಕೆ ಇಲ್ಲವೇ? ಅದರೂ, ಸುಮ್ಮನೆ ನಿಮ್ಮ ಆಕಾಶದ ಬಗ್ಗೆ ತಿಳುವಳಿಕೆಯನ್ನ ಹೆಚ್ಚಿಸಿಕೊಳ್ಳೋದಕ್ಕೆ ಓದಬಹುದು ನೀವಿದನ್ನ. ನಮ್ಮಲ್ಲಿ ಹಲವರು ನಾನು ಇಂಥ ನಕ್ಷತ್ರದಲ್ಲಿ ಹುಟ್ಟಿದೆ , ಇಂತಹ ರಾಶಿ ಅಂತ ಅಂದುಕೊಂಡಿರ್ತಾರೆ. ಅಂತಹವರಲ್ಲಿ ನೀವೂ ಸೇರಿದ್ದರೆ, ಈ ಜನ್ಮ ನಕ್ಷತ್ರಗಳು ಸಾಮಾನ್ಯವಾಗ ನೀವು ಹುಟ್ಟಿದಾಗ ಚಂದ್ರ ಆಕಾಶದಲ್ಲಿ ಯಾವ ನಕ್ಷತ್ರದ ಹತ್ತಿರ ಕಾಣಿಸ್ತಿದ್ದ ಅನ್ನೋದರ ಮೇಲೆ ಹೇಳಲಾಗುತ್ತೆ. ಚಂದಿರ ಆಕಾಶದ ಸುತ್ತಾ ಒಂದು ಸುತ್ತನ್ನ ಸುಮಾರು ೨೭ ದಿನದಲ್ಲಿ ಪೂರಯಿಸುತ್ತಾನೆ. ಹಾಗಾಗಿ ದಿನಕ್ಕೊಂದು ನಕ್ಷತ್ರ. ಈ ಇಪ್ಪತ್ತೇಳು ನಕ್ಷತ್ರಗಳು ೧೨ ರಾಶಿಗಳಲ್ಲಿ ಹಂಚಿರೋದ್ರಿಂದ, ಒಂದು ತಿಂಗಳ ಅವಧಿಯಲ್ಲಿ ಹುಟ್ಟಿರೋ ಒಂದಷ್ಟು ಜನರನ್ನ ನೋಡಿದರೆ, ಅವರು ಹುಟ್ಟಿದ ಚಾಂದ್ರಮಾನ ರಾಶಿ ಹನ್ನೆರಡು ರಾಶಿಗಳಲ್ಲಿ ಯಾವುದಾದರೂ ಆಗಿರಬಹುದು. ಇದು ಚಾಂದ್ರಮಾನದ ರೀತಿ. ಆದರೆ…

ಲಕ್ಷ್ಮೀ ಸ್ತುತಿ - ಕನಕಧಾರಾ ಸ್ತೋತ್ರ

ಮೊಗ್ಗೊಡೆದಿಹ ಲವಂಗ ಮರವನ್ನು ಮುತ್ತುತಿಹ
ಹೆಣ್ದುಂಬಿಯೋಲ್ ಹರಿಯ ಬಳಿಸಾರಿ ನಲಿವಾಕೆ
ಕಣ್ಣುಗಳ ಓರೆನೋಟದಲೆ ಸಕಲಸುಖವಿತ್ತು
ಒಳ್ಳಿತನು ತಂದೀಯಲಾ ಮಂಗಳೆ

ಜೇನ ಸವಿಯಲು ಚೆಲುವ ಕನ್ನೈದಿಲೆಯ ಕಡೆಗೆ
ಮರಮರಳಿ ಬರುತಲಿಹ ಜೇನ್ದುಂಬಿಯಂತೆ
ನಾಚುತಲಿ ಒಲವಿನಲಿ ಆ ಮುರಾರಿಯ ಮೊಗವ
ಓರಣದಿ ಹೊರಳುತಲಿ ನೋಡುತಿಹ ಮುಗುದೆ
ಹಿರಿಕಡಲ ಮಗಳ ಆ ಸೊಗದ ನೋಟದ ಮಾಲೆ
ತೋರುತಿರಲೆನಗೀಗ ಸಕಲ ಸಂಪದಗಳನೆ

ಹಾವ ಮೇಗಡೆ ಕಣ್ಣಮುಚ್ಚಿ ಪವಡಿಸಿರುವಂಥ
ಪತಿಯನ್ನು ಎವೆಯಿಕ್ಕದೆಯೆ ಪ್ರೀತಿಯಲ್ಲಿ
ನೋಡುತಿಹ ಕಮಲಕಣ್ಣವಳೋರೆ ನೋಟಗಳು
ಬೀಳುತಿರಲೆನ್ನೆಡೆಗೆ ಸಂತಸವ ತರಲು

ಕೌಸ್ತುಭವನಿಟ್ಟವಗೆ  ಮಧುವನ್ನು ಮಡುಹಿದಗೆ
ನಿನ್ನ ಕಣ್ನೋಟಗಳ ಸರವ ತೊಡೆಸಿಹಳೆ!
ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ
ತುಸು ಬೀರು ಎನ್ನೆಡೆಗೆ ಮಂಗಳವ ತರುತ

ಸಂಸ್ಕೃತ ಮೂಲ (ಆದಿ ಶಂಕರರ ಕನಕಧಾರಾ ಸ್ತೋತ್ರದಿಂದ): 

ಅಂಗಂ ಹರೇಃ ಪುಲಕ ಭೂಷಣ ಮಾಶ್ರಯಂತೀ
ಭೃಂಗಾಗನೇವ ಮುಕುಲಾಭರಣಂ ತಮಾಲಮ್ |
ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಳ ದೇವತಾಯಾಃ ||

ಮುಗ್ದಾ ಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾ ಪ್ರಣಿಹಿತಾನಿ ಗತಾಗತಾನಿ |
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ ಸಂಭಾವಾ ಯಾಃ ||

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದ
ಮಾನಂದಕಂದಮನಿಷೇಷಮನಂಗ ನೇತ್ರಮ್ |
ಅಕೇಕರಸ್ಥಿತಕನೀನಿಕ ಪದ್ಮನೇತ್ರಂ
ಭೂತ್ಯೈ ಭವನ್ಮಮ ಭುಜಂಗಶಯಾಂಗನಾಯಾಃ ||

ಬಾಹ್ವಂತರೇ ಮಧುಜಿತಃ ಶ…