ಬದುಕಬಾರದ ಜೀವನಲ್ಲ ತೆರಳಿರಲೆನ್ನೆದೆಯು ಹೋದುದವನೊಡನೆ
ಸನ್ನೆಯಿಲ್ಲದೆ ಹಿಂದೆ ಹೋಯ್ತು ಮನಸು
ಲಜ್ಜೆ ತೊರೆದಿಹ  ಜೀವ! ಕೇಳಿಲ್ಲವೇ ನೀನು
ದೊಡ್ಡವರು ಹೋದಲ್ಲೆ ದಾರಿಯೆಂದು ?


ಸಂಸ್ಕೃತ ಮೂಲ ( ಧರ್ಮಕೀರ್ತಿಯ ಪದ್ಯ , 'ಕವೀಂದ್ರ ವಚನ ಸಮುಚ್ಚಯ' ದಲ್ಲಿ ಉಲ್ಲೇಖಿತ ) :

ಪ್ರಿಯೇ ಪ್ರಯಾತೇ ಹೃದಯಂ ಪ್ರಯಾತಂ
ನಿಶ್ಚೇಷ್ಟಯಾ ಚೇತನಯಾ ಸಹೈವ
ನಿರ್ಲಜ್ಜ ಹೇ ಜೀವಿತ ನ ಶ್ರುತಂ ಕಿಂ
ಮಹಾಜನೋಹೇನಗತಃ ಸ ಪಂಥಾಃ

-ಹಂಸಾನಂದಿ

ಕೊ: ತನ್ನ ನಲ್ಲನಿಂದ ದೂರವಿರಲಾರದ ಹೆಣ್ಣೊಬ್ಬಳ ಚಿತ್ರಣವಿದು. ಅವಳ ಹೃದಯವೂ, ಮನಸ್ಸೂ ತನ್ನ ನಲ್ಲನೊಡನೆಯೇ ದೇಶಾಂತರ ಹೋಗಿವೆ. ಇನ್ನು ಈ ಜೀವವಾದರೂ ಏಕೆ ಉಳಿದಿದೆಯೆಂದು, ಈ ಮೊದಲೇ ಹೋದವರ ದಾರಿಯಲ್ಲೇ, ಈ ಉಸಿರೂ ತೊರೆದು ಹೋಗದೇ ಏಕಾದರೂ ಬದುಕುಳಿದಿದ್ದೇನೆಂದು ಕೊರಗುತ್ತಿದ್ದಾಳೆ ಆ ಹೆಣ್ಣು. "ಮಹಾ ಜನೋ ಯೇನಗತಃ ಸ ಪಂಥಾಃ" - ದೊಡ್ಡವರು ಹೋದದ್ದೇ ದಾರಿ ಅನ್ನುವುದೊಂದು ನಾಣ್ಣುಡಿ.

ಕೊ.ಕೊ: ಅನುವಾದವು (ಪಂಚಮಾತ್ರಾ) ಚೌಪದಿಯ ಧಾಟಿಯಲ್ಲಿದೆ. ಆದರೆ ಪ್ರಾಸವಿಟ್ಟಿಲ್ಲ. ಅದರ ಬದಲಾಗಿ ಪ್ರಾಸವಿರಬೇಕಾದ ಕಡೆ (ಬೇರೆಬೇರೆ) ಒತ್ತಕ್ಷರಗಳಿವೆ.

ಕೊ.ಕೊ: ಹಿಂದೆ  ವ್ಯಾಪಾರಕ್ಕೆಂದು ಹೋದವರು ತಿಂಗಳುಗಟ್ಟೆ ಮರಳಿ ಬರುತ್ತಿರಲಿಲ್ಲ. ಹಾಗಾಗಿ, ಈ ರೀತಿಯ ಅಗಲಿಕೆ ಸಾಮಾನ್ಯವಾಗಿರುತ್ತಿತ್ತು. ಅಮರುಕ, ಭರ್ತೃಹರಿ, ಗಾಹಾಸತ್ತಸಯಿ ಮೊದಲಾದ ಪದ್ಯಗಳಲ್ಲಿ ಇದರ ಕುರುಹನ್ನು ನೋಡಬಹುದು. ಸಿಂಧೂ ಸರಸ್ವತೀ ನದಿಯ ನಾಗರಿಕತೆಯ ಸಮಯದಿಂದಲೇ, ನಮ್ಮದೇಶಕ್ಕೆ ಪರದೇಶಗಳೊಡನೆ ವ್ಯಾಪಾರ ನಡೆಯುತ್ತಿದ್ದಿದ್ದು ತಿಳಿದು ಬಂದಿರುವ ವಿಷಯ.ಹಾಗೆಯೇ , ಪರದೇಶಗಳಿಂದ ಬರುತ್ತಿದ್ದ ಸಾಮಗ್ರಿಗಳು ದೇಶದ ಎಲ್ಲ ಕಡೆಗಳಿಗೂ ಸರಬರಾಜಾಗಲು ದೇಶದ ಉದ್ದಗಲಕ್ಕೂ "ಸಾರ್ಥ" ಗಳು ಹೋಗುತ್ತಿದ್ದಿದ್ದನ್ನೂ ಎಸ್.ಎಲ್. ಭೈರಪ್ಪನವರ ಸಾರ್ಥ ಕಾದಂಬರಿ ಓದಿದವರು ನೆನಪಿಸಿಕೊಳ್ಳಬಹುದು.

ಕೊ.ಕೊ.ಕೊ:  ಕಡಿಮೆ ಇದೇ ಅರ್ಥ ಬರುವ ಅಮರುಕನ ಒಂದು ಪದ್ಯವನ್ನು ಅನುವಾದಿಸಿದ್ದು ನೆನಪಾಯಿತು. ಅದನ್ನು ಇಲ್ಲಿ ಚಿಟಕಿಸಿ ಓದಬಹುದು.

ಚಿತ್ರ: ಕಲಾವಿದ ಹರಿ ಬಂಗಾರ್  (http://womanbyharrybangar.blogspot.com/2010/07/beauty-is-in-eye-of-beholder-women-in.html)

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?