ಸೊಬಗಿಯರ ಮೆರಗು


ಮೆರೆಯೆ ಕಿವಿಯಲಿ ಸೊಗದ ಬೆಟ್ಟದಾವರೆ ಹೂವು
ಕರಿಯ ಬಳುಕುವ ಕುರುಳಿನಲಿ ಮುಡಿದಶೋಕ
ಬಿರಿದಿರುವ  ಬಿಳಿಮಲ್ಲೆ  ಹೂವುಗಳ ದಂಡೆಗಳು
ತರುತಿಹವು ಬೆಡಗಿಯರ ಚಂದಕ್ಕೆ ಮೆರುಗು

 ಸಂಸ್ಕೃತ ಮೂಲ: (ಕಾಳಿದಾಸನ ಋತುಸಂಹಾರ  ೬:೪)

ಕರ್ಣೇಷು ಯೋಗ್ಯಂ ನವಕರ್ಣಿಕಾರಂ
ಚಲೇಷು ನೀಲೇಷ್ವಲಕೇಷ್ವಶೋಕಮ್
ಪುಷ್ಪಂಚ ಫುಲ್ಲಂ ನವಮಲ್ಲಿಕಾಯಾಃ
ಪ್ರಯಾತಿ ಕಾಂತಿಂ ಪ್ರಮದಾಜನಾನಾಮ್ ||


-ಹಂಸಾನಂದಿ

ಕೊ: ಇಲ್ಲಿ ಹೇಳಿದ ಬೆಟ್ಟದಾವರೆ ಹೂವು, ನಾವೀಗ ಬೆಟ್ಟದಾವರೆ ಎಂದು ಕರೆಯುವ Dahlia  ಜಾತಿಯ ಹೂವಲ್ಲ. "ಕರ್ಣಿಕಾರ" ಎಂಬ ಹೆಸರನ್ನು ಎರಡೂ ಬೇರೆ ಜಾತಿಯ ಮರಗಳಿಗೆ ಅನ್ವಯಿಸಲಾಗಿದೆ.  ಮೊದಲನೆಯದು Pterospermun Aceifolium.  ಉತ್ತರ ಭಾರತದಲ್ಲಿ ಈ ಮರಕ್ಕೆ ಕನಕಚಂಪಾ, ದ್ರುಮೋತ್ಪಲ ಎಂಬ ಹೆಸರುಗಳೂ ಇದ್ದುವಂತೆ. ಅದಕ್ಕೆ ಹಿಂದೆ ಆ ಕನ್ನಡದಲ್ಲಿ ಆ ಹೂವನ್ನು ಬೆಟ್ಟದಾವರೆ ಎಂದೂ ಕರೆದುದ್ದಿದೆ. ಅದನ್ನೇ ನಾನೂ ಬಳಸಿದ್ದೇನೆ.  ಕರ್ಣಿಕಾರವೆಂದೇ ಕರೆಸಿಕೊಳ್ಳುವ  ಎರಡನೆ ಯ ಮರ  Cassia Fistula.   ಮಲೆಯಾಳಂ ನಲ್ಲಿ ಇದಕ್ಕೆ ಕರ್ಣಿಕಾರ, ವಿಷು ಕಣಿ ಹೂವು ಎಂದು ಹೆಸರಿದ್ದರೆ ಕನ್ನಡದಲ್ಲಿ ಕಕ್ಕೆ ಎಂಬ ಹೆಸರೂ ಇದೆ.

ಕೊ.ಕೊ: ಕರ್ಣಿಕಾರ ಎಂಬ ಹೆಸರು, ಈ ಹೂವು ಕಿವಿಗೆ ತೊಡುವ ಆಭರಣದಂತೆ ಇರುವುದರಿಂದಲೂ ಬಂದಿರಬಹುದೇನೋ! ಸಂಸ್ಕುತ ನಿಘಂಟುವಿನಲ್ಲಿ ಕರ್ಣಿಕಾರ ಎಂದರೆ ಕಿವಿಯ ಒಡವೆ ಎಂದೂ ಅರ್ಥವನ್ನು ಕೊಟ್ಟಿದೆ.

ಕೊ.ಕೊ: ಇದು ಕಾಳಿದಾಸನ ಋತುಸಂಹಾರದಲ್ಲಿ ವಸಂತದ ವರ್ಣನೆಯಿರುವ ಆರನೇ ಸರ್ಗದ ಪದ್ಯ. ವಸಂತದಲ್ಲಿ ಅರಳುವ ಕರ್ಣಿಕಾರ, ಮಲ್ಲಿಗೆ, ಅಶೋಕ ಹೂಗಳ ಸೊಬಗು ಹೆಣ್ಗಳ ಚೆಲುವನ್ನು ಹೆಚ್ಚಿಸುವುದನ್ನು ಕವಿ ಸರಳವಾಗಿ, ಲಲಿತವಾಗಿ ಬಣ್ಣಿಸಿದ್ದಾನೆ. ಅನುವಾದವು ಪಂಚಮಾತ್ರಾ ಚೌಪದಿಯಲ್ಲಿದೆ. ಮೂಲದಲ್ಲಿ "ಮಲ್ಲಿಗೆ" ಎಂತಿರುವುದನ್ನು ನಾನು "ಮಲ್ಲೆ ಹೂಗಳ ದಂಡೆ"ಯಾಗಿಸಿದ್ದೇನೆ. ಅದರಿಂದ ಅರ್ಥಕ್ಕೇನೂ ಹೆಚ್ಚುಕಡಿಮೆಯಾಗದು ಎಂದೆಣಿಸುವೆ!

ಚಿತ್ರ ಕೃಪೆ: ಎಲ್ಲಿಂದ ತೆಗೆದುಕೊಂಡಿದ್ದು ಎಂಬುದನ್ನು ಗುರುತು ಹಾಕಿಕೊಳ್ಳಲು ಮರೆತೆ! ಕ್ಷಮೆ ಇರಲಿ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ