ಲಕ್ಷ್ಮೀ ಸ್ತುತಿ - ಕನಕಧಾರಾ ಸ್ತೋತ್ರ



ಮೊಗ್ಗೊಡೆದಿಹ ಲವಂಗ ಮರವನ್ನು ಮುತ್ತುತಿಹ
ಹೆಣ್ದುಂಬಿಯೋಲ್ ಹರಿಯ ಬಳಿಸಾರಿ ನಲಿವಾಕೆ
ಕಣ್ಣುಗಳ ಓರೆನೋಟದಲೆ ಸಕಲಸುಖವಿತ್ತು
ಒಳ್ಳಿತನು ತಂದೀಯಲಾ ಮಂಗಳೆ

ಜೇನ ಸವಿಯಲು ಚೆಲುವ ಕನ್ನೈದಿಲೆಯ ಕಡೆಗೆ
ಮರಮರಳಿ ಬರುತಲಿಹ ಜೇನ್ದುಂಬಿಯಂತೆ
ನಾಚುತಲಿ ಒಲವಿನಲಿ ಆ ಮುರಾರಿಯ ಮೊಗವ
ಓರಣದಿ ಹೊರಳುತಲಿ ನೋಡುತಿಹ ಮುಗುದೆ
ಹಿರಿಕಡಲ ಮಗಳ ಆ ಸೊಗದ ನೋಟದ ಮಾಲೆ
ತೋರುತಿರಲೆನಗೀಗ ಸಕಲ ಸಂಪದಗಳನೆ

ಹಾವ ಮೇಗಡೆ ಕಣ್ಣಮುಚ್ಚಿ ಪವಡಿಸಿರುವಂಥ
ಪತಿಯನ್ನು ಎವೆಯಿಕ್ಕದೆಯೆ ಪ್ರೀತಿಯಲ್ಲಿ
ನೋಡುತಿಹ ಕಮಲಕಣ್ಣವಳೋರೆ ನೋಟಗಳು
ಬೀಳುತಿರಲೆನ್ನೆಡೆಗೆ ಸಂತಸವ ತರಲು
 
ಕೌಸ್ತುಭವನಿಟ್ಟವಗೆ  ಮಧುವನ್ನು ಮಡುಹಿದಗೆ
ನಿನ್ನ ಕಣ್ನೋಟಗಳ ಸರವ ತೊಡೆಸಿಹಳೆ!
ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ
ತುಸು ಬೀರು ಎನ್ನೆಡೆಗೆ ಮಂಗಳವ ತರುತ

ಸಂಸ್ಕೃತ ಮೂಲ (ಆದಿ ಶಂಕರರ ಕನಕಧಾರಾ ಸ್ತೋತ್ರದಿಂದ): 

ಅಂಗಂ ಹರೇಃ ಪುಲಕ ಭೂಷಣ ಮಾಶ್ರಯಂತೀ
ಭೃಂಗಾಗನೇವ ಮುಕುಲಾಭರಣಂ ತಮಾಲಮ್ |
ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಳ ದೇವತಾಯಾಃ ||

ಮುಗ್ದಾ ಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾ ಪ್ರಣಿಹಿತಾನಿ ಗತಾಗತಾನಿ |
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ ಸಂಭಾವಾ ಯಾಃ ||

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದ
ಮಾನಂದಕಂದಮನಿಷೇಷಮನಂಗ ನೇತ್ರಮ್ |
ಅಕೇಕರಸ್ಥಿತಕನೀನಿಕ ಪದ್ಮನೇತ್ರಂ
ಭೂತ್ಯೈ ಭವನ್ಮಮ ಭುಜಂಗಶಯಾಂಗನಾಯಾಃ ||

ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಲೀವ ಹರಿ ನೀಲಮಯೀ ವಿಭಾತಿ |
ಕಾಮಪ್ರದಾ ಭಗವದೋಪಿ ಕಟಾಕ್ಷ ಮಾಲಾ
ಕಲ್ಯಾಣಮಾವಹತು ಮೇ ಕಮಲಾಲಯಾಯಾಃ ||

-ಹಂಸಾನಂದಿ

ಕೊ: ಇಂದು ವೈಶಾಖ ಶುದ್ಧ ಪಂಚಮಿ - ಶಂಕರ ಜಯಂತಿಯೆಂದು ಆಚರಿಸುವ ಈ ದಿನದಲ್ಲಿ ಶಂಕರರ ಕನಕಧಾರಾ ಸ್ತೋತ್ರದ ಕೆಲವು ಪದ್ಯಗಳ ಅನುವಾದವನ್ನು ಹಾಕುತ್ತಿದ್ದೇನೆ. ಕೆಲವು ಈ ಮೊದಲೇ ಮಾಡಿದ್ದು.  ಒಟ್ಟಿಗೆ ಇರಲೆಂದು ಹಾಕಿದ್ದೇನೆ.

ಕೊ.ಕೊ: ಇದು ಭಾವಾನುವಾದವೆಂದು ಹೇಳಬೇಕಾದ್ದೇ ಇಲ್ಲ. ಮೂಲದ ಪದ್ಯಗಳು ವಸಂತತಿಲಕ ವೃತ್ತದಲ್ಲಿವೆ. ಕನ್ನಡ ಅನುವಾದವು ಐದು ಮಾತ್ರೆಯ ನಡಿಗೆಯಲ್ಲಿವೆ. ಪ್ರಾಸವನ್ನಿಟ್ಟಿಲ್ಲ. ಮತ್ತು ಹಲವಾರು ಲಗಂ ದೋಷಗಳೂ ಇದ್ದರೂ, ಪೂರ್ತಿಯಾಗಿ ಚೌಪದಿಯ ಛಂದಸ್ಸನ್ನು ಪಾಲಿಸಿಲ್ಲದಿರುವುದರಿಂದ ಅದನ್ನೂ ಲೆಕ್ಕಕ್ಕಿಡಲಿಲ್ಲ.

ಚಿತ್ರ ಕೃಪೆ: http://www.dollsofindia.com/product/folk-art-paintings/vishnu-resting-on-sheshnaga-with-lakshmi-accompanied-by-lord-brahma-and-saraswati-orissa-paata-painting-on-canvas-BZ36.html


Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?