ಬಿಂಕದ ಚೆಲುವೆ


ಕಾಲ್ಗಳಿಗೆ ನಾ ಬಿದ್ದರೆನುತಲಿ ಪಾದ ಮುಚ್ಚುತ ನಿರಿಯಲಿ
ಬಂದನಸುನಗೆಯನ್ನಡಗಿಸುತ ನೇರ ನೋಟವ ತಪ್ಪಿಸಿ
ನುಡಿಯುತಿರೆ ನಾ ನಡುವೆ ಗೆಳತಿಯ ಕೂಡೆ ಮಾತಿಗೆ ತೊಡಗುವ
ಒಲವುತುಂಬಿದೆ ಚೆಲುವೆಯೀಕೆಯ ಬಿಂಕವೆನಿತಿದು ಸೊಗವಿದೆ!

ಸಂಸ್ಕೃತ ಮೂಲ (ಅಮರುಶತಕ ೪೩/೪೭):

ಆಶಂಕ್ಯ ಪ್ರಣತಿಂ ಪಟಾಂತಪಿಹಿತೌ ಪಾದೌ ಕರೋತ್ಯಾದರಾತ್
ವ್ಯಾಜೇನಾಗಮತವೃಣೋತಿ ಹಸಿತಂ ನ ಸ್ಪಷ್ಟಮುದ್ವೀಕ್ಷತೇ
ಮಯ್ಯಾಲಾಪವತಿ ಪ್ರತೀಪವಚನಂ ಸಖ್ಯಾ ಸಹಾಭಾಷತೇ
ತಸ್ಯಾಸ್ತಿಷ್ಠತು ನಿರ್ಭರಪ್ರಣತಿತಾ ಮಾನೋsಪಿ ರಮ್ಯೋದಯಃ

आशङ्क्य प्रणतिं पटान्तपिहितौ पादौ करोत्यादरात्
व्याजेनागतमावृणोति हसितं न स्पष्टमुद्वीक्षते ।
मय्यालापवति प्रतीपवचनं सख्या सहाभाषते
तस्यास्तिष्ठतु निर्भरप्रणयिता मानोऽपि रम्योदयः ॥ Amaruka || ४२॥(४७)
-ಹಂಸಾನಂದಿ


ಕೊ: ಪತ್ನಿಯರ/ಪ್ರೇಯಸಿಯರ ಕಾಲಿಗೆ ಪತಿ/ಪ್ರಿಯಕರರು ಬೀಳುವುದರ ಬಗ್ಗೆ ಅಮರು ಶತಕದ ಹಲವು ಪದ್ಯಗಳು ಹೇಳುತ್ತವೆ. ಈಗಿನ ಕಾಲಕ್ಕೆ ಇದು ಸ್ವಲ್ಪ ಆಶ್ಚರ್ಯುವಾಗಿ ಕಾಣಬಹುದೇನೋ. ಆದರೆ ಅಲ್ಲಿ, ಅದು ಉತ್ಕಟ ಪ್ರೇಮದ ಸಂಕೇತವಾಗೇ ನಿಲ್ಲುತ್ತದೆ. ಈ ಪದ್ಯದಲ್ಲಿ, ಕಾಲಿಗೆ ಬೀಳಲು ಅವಕಾಶ ಕೊಡಬಾರದೆಂದು ತನ್ನ ಪಾದಗಳನ್ನು ಸೀರೆಯ ನೆರಿಗೆಯೊಳಗೆ ಮುಚ್ಚಿಕೊಳ್ಳುವ, ಮತ್ತೆ ಬೇರೆ ಬೇರೆ ನೆಪಗಳಿಂದ ಪ್ರಿಯಕರನನ್ನು ಉಪೇಕ್ಷೆಮಾಡುವ ನಟನೆಮಾಡುವ ನಾಯಕಿ ಇದ್ದರೆ, ಇದನ್ನೆಲ್ಲ ನೋಡಿ, ಈ ಬಿಂಕವೂ ಅದೆಷ್ಟು ಸೊಗಸಾಗಿದೆ ಎಂದು ಮೆಚ್ಚುವ ನಲ್ಲನಿದ್ದಾನೆ!

ಕೊ.ಕೊ: ಜಯದೇವನ ಅಷ್ಟಪದಿಯಲ್ಲಿ, ಕೃಷ್ಣನು ರಾಧೆಗೆ, ನಿನ್ನ ಕಾಲುಗಳನ್ನು ನನ್ನ ತಲೆಯ ಮೇಲೆ ಇಡು ಎಂದು ಹೇಳುವ ಪ್ರಸಂಗವೂ ಬರುವುದನ್ನು ನಾವು ನೆನೆಯಬಹುದು.

ಕೊ.ಕೊ.ಕೊ: ಮೂಲವು ಶಾರ್ದೂಲವಿಕ್ರೀಡಿತ ವೃತ್ತದಲ್ಲಿದ್ದರೆ, ಅನುವಾದವು ಮಾತ್ರಾ ಮಲ್ಲಿಕಾ ಮಾಲೆಯಲ್ಲಿದೆ.

ಚಿತ್ರ ಕೃಪೆ:  ಪಟಮಂಜರಿಯ ರಾಗಮಾಲಾ ಚಿತ್ರ.  http://www.indianminiaturepaintings.co.uk/


Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ