ಒಂದು ಪ್ರೇಮದ ಕಥೆಹುಬ್ಬು ಗಂಟಿಕ್ಕುವುದ ಕಲಿತಾಯ್ತು ಕಣ್ಗಳಿಗೆ
ಮುಚ್ಚಿರುವ ಕಲೆಯನ್ನು ರೂಢಿಸಿದ್ದಾಯ್ತು
ಅತ್ತು ಸೊರಗುವುದನ್ನು ಮೌನದಲಿ ನಗುವನ್ನು
ಒತ್ತಟ್ಟಿಗಿರಿಸುವುದನೊಟ್ಟು ಕಲಿಸಾಯ್ತು
ದಿಟ್ಟವಾಗಿರಲಿಕ್ಕೆನ್ನ ಮನಸನು ಹೇಗೊ
ಗಟ್ಟಿಮಾಡಿರಿಸಾಯ್ತು ನಾನೀಗಲೇ
ಹಮ್ಮು ತೋರುವುದಕೆಲ್ಲವನು ಅಣಿಮಾಡಿ
ಬಿಟ್ಟಿಹೆನು ಗೆಲುವನ್ನು ಆ ದೈವಕೇ!

ಸಂಸ್ಕೃತ ಮೂಲ (ಅಮರುಕ ಶತಕ ೯೨/೯೭):
ಭ್ರೂಭೇದೋ ರಚಿತಶ್ಚಿರಂ* ನಯನಯೋರಭ್ಯಸ್ತಮಾಮೀಲನಂ
ರೋದ್ಧುಂ ಶಿಕ್ಷಿತಮಾದರೇಣ ಹಸಿತಂ ಮೌನೇಭಿಯೋಗಃ ಕೃತಃ
ಧೈರ್ಯಂ ಕರ್ತುಮಪಿ ಸ್ಥಿರೀಕೃತಮಿದಂ ಚೇತಃ ಕಥಂಚಿತ್ ಮಯಾ
ಬಧ್ದೋ ಮಾನಪರಿಗ್ರಹೇ ಪರಿಕರಃ ಸಿದ್ಧಿಸ್ತು ದೈವಸ್ಥಿತಾ

भ्रूभेदो रचितश्चिरं नयनयोरभ्यस्तमामीलनं
रोद्धुं शिक्षितमादरेण हसितं मौनेऽभियोगः कृतः ।
धैर्यं कर्तुमपि स्थिरीकृतमिदं चेतः कथञ्चिन्मया
बद्धो मानपरिग्रहे परिकरः सिद्धिस्तु दैवस्थिता ॥९२॥(९७)

-ಹಂಸಾನಂದಿ

ಕೊ:  *ಭ್ರೂಭಂಗೋ ಗುಣಿತಶ್ಚಿರಂ ಅನ್ನುವ ಪಾಠಾಂತರವೂ ಇದೆ. ಅರ್ಥದಲ್ಲಿ ಹೆಚ್ಚು ವ್ಯತ್ಯಾಸವಾಗದು.

ಕೊ.ಕೊ: ಮೂಲವು ಶಾರ್ದೂಲವಿಕ್ರೀಡಿತ ವೃತ್ತದಲ್ಲಿದೆ. ಅನುವಾದವನ್ನು ಪಂಚಮಾತ್ರಾ ಚೌಪದಿಯ ಎರಡು ಪದ್ಯಗಳಲ್ಲಿ ಅಳವಡಿಸಿದ್ದೇನೆ. ಪ್ರಾಸವನ್ನು  ಇಡದಿದ್ದರೂ, ಪ್ರಾಸವು ಬರಬೇಕಾದ ಕಡೆಯಲ್ಲೆಲ್ಲ ಒತ್ತಕ್ಷರಗಳನ್ನು ಬಳಸಿದ್ದೇನೆ)

ಕೊ.ಕೊ.ಕೊ: ಇದೇ ಪದ್ಯವನ್ನೇ ಹಿಂದೆ ಛಂದಸ್ಸಿನ ಕಟ್ಟಿಲ್ಲದೇ ಅನುವಾದಿಸಿದ್ದೆ. ಅದನ್ನು ಇಲ್ಲಿ ಓದಬಹುದು : ಅವಳ ಅಂತರಂಗ 

ಚಿತ್ರ ಕೃಪೆ : ಖಂಡಿತಾ ನಾಯಕಿಯನ್ನು ಚಿತ್ರಿಸುವ ಜೈಪುರ ಶೈಲಿಯ ರಾಗಮಾಲಾ ಚಿತ್ರ (ರಾಗ ಗುಜರಿ ತೋಡಿ). ಈ ಕೆಳಗಿನ ತಾಣದಿಂದ ತೆಗೆದುಕೊಂಡದ್ದು  :http://www.indianminiaturepaintings.co.uk/Jaipur%20Gujari%2…

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?