ಹತ್ತು ಕೋತಿ ಮರಿಗಳು!


ಪುಟ್ಟದೊಂದು ಸಣ್ಣದೊಂದು ಚಿಕ್ಕದೊಂದು ಕೋತಿಮರಿ
ಕುಳ್ಳದೊಂದು ಡುಮ್ಮದೊಂದು ತೆಳ್ಳದೊಂದು ಕೋತಿಮರಿ ||
ಬೆಳ್ಳದೊಂದು ಕಪ್ಪಗೊಂದು ಕೆಂಚಗೊಂದು ಕೋತಿ ಮರಿ
ಮಳ್ಳನಂತೆ ಸುಳ್ಳನಂತೆ ಕೊನೆಯ ಕಳ್ಳ ಕೋತಿ ಮರಿ ||
ಮರದ ಮೇಲೆ ಕುಣಿಯುತಿದ್ದವೊಟ್ಟು ಹತ್ತು ಕೋತಿ ಮರಿ
ಒಟ್ಟು ಹತ್ತು ಕೋತಿ ಮರಿ! ಒಟ್ಟು ಹತ್ತು ಕೋತಿ ಮರಿ ||

ಹತ್ತು ಕೋತಿ ಮರಿಗಳು
ಬಾಳೆ ಹಣ್ಣು ತಿನ್ನಲು
ಒಂದಕುಸಿರು ಕಟ್ಟಿ ಉಳಿದ
ವೊಂಬತ್ತು ಕೋತಿ ಮರಿ!  || ೧||

ಒಂಬತ್ತು ಕೋತಿ ಮರಿಗಳು
ರಾತ್ರಿ ಮಲಗಿಕೊಂಡವು
ಒಂದು ಮತ್ತೆ ಏಳದೇನೆ
ಉಳಿದುವೆಂಟು ಕೋತಿ ಮರಿ! ||೨||

ಎಂಟು ಕೋತಿ ಮರಿಗಳು
ಆಟವಾಡುತಿದ್ದವು
ಒಂದು ಹೊರಗೆ ಕುಳಿತುಕೊಂಡು
ಒಳಗೆ ಏಳೆ ಕೋತಿ ಮರಿ! ||೩||

ಏಳು ಕೋತಿ ಮರಿಗಳು
ಬತ್ತ ಕುಟ್ಟ ಹೊರಟವು
ಒನಕೆ ಏಟಿಗೊಂದು ಸಿಕ್ಕಿ
ಈಗ ಆರು ಕೋತಿ ಮರಿ! ||೪||

ಆರು ಕೋತಿ ಮರಿಗಳು
ಬಟ್ಟೆ ಹೊಲೆಯುತಿದ್ದವು
ಒಂದಕ್ಕೆ ಸೂಜಿ ಚುಚ್ಚಿ
ಉಳಿದವೈದು ಕೋತಿ ಮರಿ ||೫||

ಐದು ಕೋತಿ ಮರಿಗಳು
ಪಟಾಕಿ ಹಚ್ಚುತಿದ್ದವು
ಕೈಯೊಳಗೇ ಸಿಡಿದುಬಿಡಲು
ಇನ್ನು ನಾಲ್ಕೆ ಕೋತಿ ಮರಿ ||೬|||

ನಾಲ್ಕು ಕೋತಿ ಮರಿಗಳು
ಪಗಡೆ ಕಾಯಿ ಕೊಲ್ಲಲು
ಕೋಡಗನ್ನ ಕೋಳಿ ನುಂಗಿ
ಈಗ ಮೂರೆ ಕೋತಿ ಮರಿ ||೭||

ಮೂರು ಕೋತಿ ಮರಿಗಳು
ಜೂಟಾಟವನಾಡಲು
ಒಂದು ಎಡವಿ ತಲೆಯು ಒಡೆದು
ಉಳಿಯಿತೆರಡು ಕೋತಿ ಮರಿ ||೮||

ಎರಡು ಕೋತಿಮರಿಗಳು
ಜಗಳವಾಡುತಿದ್ದವು
ಒಂದನೊಂದು ಸುಟ್ಟುಬಿಟ್ಟು
ಇನ್ನು ಒಂದೆ ಕೋತಿ ಮರಿ ||೯||

ಉಳಿದ ಕೊನೆಯ ಕೋತಿ ಮರಿ
ಒಂಟಿ ತನವ ತಾಳದೇ
ನೇಣು ಹಾಕಿಕೊಂಡು ಸತ್ರೆ
ಒಂದೂ ಇಲ್ಲ ಕೋತಿ ಮರಿ ||೧೦||

ಈ ಪದ್ಯವನ್ನು ಹಾಡೋದು ಹೇಗೆ ಅಂತ ಕೇಳಿದಿರಾ? ಈ ಕೆಳಗಿನ ವಿಡಿಯೋ ನೋಡಿ! 

-ಹಂಸಾನಂದಿ

ಕೊ: ಮಕ್ಕಳಿಗೆ ಅಂಕಿಗಳನ್ನು, ಕೂಡಿ-ಕಳೆಯೋದನ್ನು ಹೇಳಿಕೊಡುವ ಸಮಯದಲ್ಲಿ ಹೇಳಿಕೊಡಬಹುದಾದ ಹೊಸದೊಂದು ಪದ್ಯ, ನಾನೇ ಬರೆದದ್ದು :) 

ಕೊ.ಕೊ: ಈ ಪದ್ಯ ಇತ್ತೀಚೆಗೆ ಪ್ರದರ್ಶಿತವಾದ ನಾನು ಬರೆದ ನಾಟಕ "ಗಾಜಿನ ಮನೆ" ಗೆಂದು ಬರೆದಿದ್ದು - ಆ ಕಥೆಯ ಬೆನ್ನೆಲುಬು ಎಂದರೂ ತಪ್ಪಿಲ್ಲ! 

ಕೊ.ಕೊ.ಕೊ:  ಈ  ಪದ್ಯಕ್ಕೆ ಸ್ಫೂರ್ತಿ Ten Little Indians ಎನ್ನುವ ಇಂಗ್ಲಿಷ್ ಪದ್ಯ 

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ