ಪಯಣಕ್ಕೆ ಮೊದಲು


ಗಂಟೆಹೊಡೆಯುವ ಮುನ್ನವೋ ನಡುಹಗಲಲೋ ತುಸುಬಳಿಕವೋ
ಅಲ್ಲದಿರಲಿಳಿಹೊತ್ತಿಗಲ್ಲವೆ ಇನಿಯ ನೀ ಬರುವುದೆನುತ
ನೂರು ದಿನಗಳ ದೂರ ಪಯಣಕೆ ಹೊರಟುನಿಂತಿಹ ನಲ್ಲನ
ಗಮನ ತಪ್ಪಿಸುತಿಹಳು ಹುಡುಗಿಯು ಬಿಕ್ಕುತಲಿ ಕಂಬನಿಯಲಿ

ಸಂಸ್ಕೃತ ಮೂಲ ( ಅಮರುಕ ಶತಕ, ೯/೧೨):

प्रहरविरतौ मध्ये वाह्नस्ततोऽपि परेऽथवा
किमुत सकले जाते वाह्निप्रिय त्वमिहैष्यसि ।
इति दिनशतप्राप्यं देशं प्रियस्य यियासतो
हरति गमनं बालालापैः सबाष्पगलज्जलैः ॥९॥(१२)

ಪ್ರಹರವಿರತೌ ಮಧ್ಯೇ ವಾಹನಸ್ತತೋsಪಿ ಪರೇsತಥಾ
ಕಿಮುತ ಸಕಲೇ ಜಾತೇ ವಾಹಿನಪ್ರಿಯ ತ್ವಮಿಷೈಹ್ಯಸಿ
ಇತಿ ದಿನಶತಪ್ರಾಪ್ಯಂ ದೇಶಂ ಪ್ರಿಯಸ್ಯ ಯಿಯಾಸತೋ
ಹರತಿ ಗಮನಂ ಬಾಲಾಲಾಪೈಃ ಸಬಾಷ್ಪಗಲಜ್ಜಲೈಃ

-ಹಂಸಾನಂದಿ

ಕೊ: ಮೂಲವು ಹರಿಣೀ ಎಂಬ ಛಂದಸ್ಸಿನಲ್ಲೂ, ಅನುವಾದವು ಮಾತ್ರಾ ಮಲ್ಲಿಕಾಮಾಲೆಯಲ್ಲೂ ಇವೆ. ಪ್ರಾಸವನ್ನಿಟ್ಟಿಲ್ಲ

ಕೊ.ಕೊ: ವ್ಯಾಪಾರಕ್ಕೆ ಹೋಗುವ ಗಂಡಸರು, ಮತ್ತೆ ಅವರ ಅಗಲಿಕೆಯಲ್ಲಿರುವ ಪ್ರೇಯಸಿಯರ ಪ್ರಸ್ತಾವನೆ ಅಮರುಕ ಶತಕದಲ್ಲಿ ಬಹಳ ಕಡೆ ಕಂಡುಬರುತ್ತದೆ. ಆ ಕಾರಣದಿಂದ, ಏಳೆಂಟನೇ ಶತಮಾನದ ಸಮಯದಲ್ಲಿ ದೂರದ ಪ್ರಾಂತ್ಯಗಳೊಡನೆ ವ್ಯಾಪಾರ ನಮ್ಮ ದೇಶದಲ್ಲಿ ಬಹಳ ಹಾಸು ಹೊಕ್ಕಾಗಿತ್ತು ಎಂದು ತಿಳಿದುಕೊಳ್ಳಬಹುದು.

ಕೊ.ಕೊ.ಕೊ: ಈ ಪದ್ಯದಲ್ಲಿ ಬರುವ ವ್ಯಾಪಾರಿ ಹೋಗುತ್ತಿರುವ ಸ್ಥಳ ತಲುಪಲು ನೂರು ದಿನವಾಗುವಷ್ಟು ದೂರ. ಅಂತಹದರಲ್ಲಿ ಅವನ ಪ್ರೇಯಸಿ, ಅವನು ಬರುವ ಹೊತ್ತಿಗೆ ದಿನ ಕಳೆದಿರುವುದೋ, ರಾತ್ರಿ ಆಗಿರುವುದೋ ಎಂದು ಕಂಬನಿಸುರಿಸುತ್ತಿದ್ದಾಳಲ್ಲ, ಅವಳ ಮುಗ್ಧತೆ ಎಂತಹದು, ಪ್ರೀತಿ ಎಂತಹದು ಎನ್ನುವುದೇ ಸ್ವಾರಸ್ಯ.

ಚಿತ್ರ ಕೃಪೆ: ಕಲ್ಯಾಣ್ ರಾಗವನ್ನು ಸೂಚಿಸುವ ರಾಗ ಮಾಲಾ ವರ್ಣಚಿತ್ರ, http://www.mishra.net/india/kalyan.html - ಇಲ್ಲಿದ ತೆಗೆದುಕೊಂಡದ್ದು.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?