Skip to main content

Posts

Showing posts from November, 2015

ಚಲಿಸುವ ಮೋಡಗಳು

ನೀಲಿಯಾಗಸದಲ್ಲಿ ತುಂಬಿದ ಬಿಳಿಯ ಮೋಡವು ಚದುರುತ
ಹೇಳುತಿರುವುದು ನೀತಿಯೊಂದನು ಕೇಳು ನೀಮೊದಲೆನ್ನುತ
"ಗಾಳಿ ಬಂದೆಡೆ ತೂರಿಕೊಂಡರೆ ನಮ್ಮ ರೀತಿಯೆ ಕರಗುವೆ
ಬಾಳಿನಲ್ಲಿಡೆ ದಿಟ್ಟ ಹೆಜ್ಜೆಯ ಹಾದಿ ಮುಂದಕೆ ಸುಗಮವೆ "

-ಹಂಸಾನಂದಿ 

ಕೊ: ಮೂರು ವರ್ಷದ ಹಿಂದೆ ಇದೇ ದಿನ ಬರೆದ ಪದ್ಯವಿದೆಂದು ಫೇಸ್ ಬುಕ್ ದೇವರು ತೋರಿಸಿದ ಮೇಲೆ, ಅದನ್ನು ಇಲ್ಲಿ ಹಾಕಿಲ್ಲವೆನ್ನುವುದನ್ನು ಗಮನಿಸಿ ಇಲ್ಲಿಗೂ ಸೇರಿಸಿದೆ.

ಕೊ.ಕೊ: ಇದು ಹೊಸಗನ್ನಡದಲ್ಲಿ ಬಹಳ ಜನಪ್ರಿಯವೇ ಆದ ಮಾತ್ರಾ ಮಲ್ಲಿಕಾಮಾಲೆ ಎಂಬ ಛಂದಸ್ಸಿನಲ್ಲಿದೆ. ಪ್ರತಿ ಸಾಲೂ ೩/೪/೩/೪/೩/೪/೩/‍೨ ಈ ರೀತಿಯಲ್ಲಿ ಇರುತ್ತವೆ. "ಭಾಮಿನೀಗತಿಯೊಪ್ಪಿರಲ್ ನವ ಮಾಲೆಮಲ್ಲಿಕೆ ಸಂದುದೇ" ಎಂಬುದನ್ನು ಈ ಛಂದಸ್ಸಿನ ಮಟ್ಟು ಮನಸ್ಸಿಗೆ ನಿಲ್ಲಿಸಿಕೊಳ್ಳಬಹುದು. ಅದೇ ರೀತಿ, ದೋಣಿಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಎಂಬ ಹಾಡೂ ಕೂಡ.

ಚಿತ್ರ ಕೃಪೆ:  ನನ್ನ ಮಡದಿ ಪೂರ್ಣಿಮಾಳ ಕೈಚಳಕ

ಕೊಳಲನೂದುವ ಚತುರನಿಗೆ

ಇನಿಗೊಳಲಿನಿಂಪುದನಿ ಜೊತೆಯಲ್ಲೆಯೇ ನಿನ್ನ
ಸವಿನೋಟ ಬೀರುತಲಿ ಕರುಣಿಸೋ ನನ್ನ!
ನೀನು ಕೃಪೆ ತೋರಿರಲು ಇಹಪರಗಳಿಂದೇನು?
ನೀನು ಕೃಪ ತೋರದಿರೆ ಇಹಪರಗಳೇನು?

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತ, ೧-೨೯) :

ಮಯಿ ಪ್ರಸಾದಮ್ ಮಧುರೈಃ ಕಟಾಕ್ಷೈಃ ವಂಶೀ ನಿನಾದಾನುನುಚರೈಃ ವಿಧೇಹಿ ತ್ವಯಿ ಪ್ರಸನ್ನೇ ಕಿಮಿಹಾಪರೈರ್ನ್ನಃ ತ್ವಯ್ಯಪ್ರಸನ್ನೇ ಕಿಮಿಹಾಪರೈರ್ನ್ನಃ
मयि प्रसादम् मधुरैः कटाक्षैः वंशी निनादानुनुचरैः विधेहि त्वयि प्रसन्ने किमिहापरैर्न्नः त्वय्यप्रसन्ने किमिहापरैर्न्नः

-ಹಂಸಾನಂದಿ

 ಕೊ:  ಅನುವಾದವು ಪಂಚಮಾತ್ರಾ ಚೌಪದಿಯಲ್ಲಿದೆ, ಪ್ರಾಸವನ್ನಿಟ್ಟಿಲ್ಲ.

ಕೊ.ಕೊ: ಈ ಅನುವಾದ ಮಾಡಲು ಸಹಾಯ ಮಾಡಿದ ಹಿರಿಯ ಮಿತ್ರ ಶ್ರೀ ಕೃಷ್ಣಪ್ರಿಯ ಅವರಿಗೆ ನಾನು ಆಭಾರಿ

ಕೊ.ಕೊ: ಕೊಳಲನೂದುವ ಚದುರನಾರೇ ಪೇಳಮ್ಮ ಅನ್ನುವುದು ವ್ಯಾಸರಾಯರ ಒಂದು ಸುಪರಿಚಿತ ದೇವರನಾಮ.

ಚಿತ್ರ: ಬೆಳವಾಡಿ ದೇವಾಲಯ ಮುದ್ದು ಮುರಳೀ ಕೃಷ್ಣ, http://www.indyachalo.com/hoysala.html ಪುಟದಿಂದ ತೆಗೆದುಕೊಂಡದ್ದು.

ಕಮಲ ಮುಖಿಗೆ

ಕಮಲದಲಿ ಕುಳಿತವಳೆ ಕಮಲವನೆ ಪಿಡಿದವಳೆ
ಪರಿಮಳದಹಾರ ಬಿಳಿಸೀರೆಯಲಿ ಮೆರೆಯುವಳೆ
ಭಗವತೀ ಹರಿಯೊಡತಿ ಸೊಬಗಿ ನೆಮ್ಮದಿಯನ್ನು
ಮೂಲೋಕಕೀಯುವಳೆ ನನ್ನ ಕಾಪಾಡೇ

ಸಂಸ್ಕೃತ ಮೂಲ (ಶಂಕರಾಚಾರ್ಯರ ಕನಕಧಾರಾ ಸ್ತೋತ್ರ, ೧೮)

ಸರಸಿಜನಿಲಯೇ ಸರೋಜಹಸ್ತೇ
ಧವಲತಮಾಂಶುಕಗಂಧಮಾಲ್ಯ ಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೇ
ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್ ||18||

सरसिजनिलये सरोजहस्ते
धवलतमांशुकगंधमाल्य शोभे ।
भगवति हरिवल्लभे मनोज्ञे
त्रिभुवनभूतिकरि प्रसीद मह्यम्

- ಹಂಸಾನಂದಿ

ಕೊ: ಅನುವಾದವು ಪಂಚಮಾತ್ರಾ ಚೌಪದಿಯ ಛಂದಸ್ಸಿನಲ್ಲಿದೆ, ಆದರೆ ಪ್ರಾಸವನ್ನಿಟ್ಟಿಲ್ಲ

ಕೊ.ಕೊ: ಲಕ್ಷ್ಮಿಯನ್ನು ಮನೋಜ್ಞೆ ಎಂದು ಕರೆದಿದ್ದಾರೆ. ಮನಸ್ಸಿಗೆ ತಿಳಿದವಳು,  ಸೊಬಗಿನವಳು ಅನ್ನುವುದಷ್ಟೇ ಅಲ್ಲದೆ, ಹೊನ್ನಾವರಿಕೆ ಹೂವು ಎಂಬ ಅರ್ಥವೂ ಇದೆ. ಲಕ್ಷ್ಮಿ  ಹೊಂಬಣ್ಣದವಳು ಎಂದು ಹೇಳುತ್ತಿದ್ದಾರೆಯೇ ಇಲ್ಲಿ ಅನ್ನುವುದು ನನಗೆ ಸರಿಯಾಗಿ ತಿಳಿದಿಲ್ಲವಾದರೂ , ದೀಪಾವಳಿಯ ಸಮಯದಲ್ಲಿ  ಹೊನ್ನೋ ಹೊನ್ನೋ ಅಂತ ಹೊನ್ನಾವರಿಕೆ ಹೂವನ್ನು ಮನೆ ಸುತ್ತ ಹಾಕುತ್ತಿದ್ದ ಸಂಪ್ರಾಯ ನೆನಪಾಗಿದ್ದರಿಂದ, ಈ ಪದ್ಯವನ್ನು ಇಂದು ಅನುವಾದಿಸಿದ್ದಾಯಿತು.

ಮಸುಕು ಬೆಟ್ಟದ ದಾರಿ

ಮಸುಕು ಬೆಟ್ಟದ ದಾರಿ - ದತ್ತಾತ್ರಿ  ಎಂ ಆರ್ ಅವರ  ಎರಡನೇ ಕಾದಂಬರಿ.

ಇವರ ಮೊದಲ   ಕಾದಂಬರಿಯಾದ "ದ್ವೀಪವ ಬಯಸಿ" ಆರ್ಥಿಕ ಕುಸಿತದ ಹಿನ್ನಲೆಯಲ್ಲಿ, ಬೇಲೂರಿನ ಬಳಿಯ ಹಳ್ಳಿಯೊಂದರಲ್ಲಿ ಮತ್ತೆ ಲಾಸ್ ಏಂಜಲೀಸ್ ಸುತ್ತಮುತ್ತ ನಡೆಯುವ ಕಥೆಯಾಗಿದ್ದರೆ, ಈ ಎರಡನೆಯ ಪುಸ್ತಕದಲ್ಲಿ, ಮರೆಯಲಾರದ ಖಾಯಿಲೆ (ಮರೆವಿನ ಖಾಯಿಲೆ ಅಲ್ಲ) ಇರುವ ಒಬ್ಬಾತನನ್ನ ಕೇಂದ್ರವಾಗಿರಿಸಿಕೊಂಡ ಕಾದಂಬರಿ.

 ಜೀವನದ ಸಣ್ಣಪುಟ್ಟ ವಿವರಗಳೂ ಎಷ್ಟೇ ವರ್ಷಗಳು ಕಳೆದರೂ ಮರೆಯದೇ ಹೋಗುವ ನಿರಂಜನ ಈ ಕಥೆಯ ನಾಯಕ. ಆ ಕಾರಣದಿಂದಲೇ ಶಾಲಾ ಕಾಲೇಜುಗಳಲ್ಲಿ ಬೇರೆಯವರಂತೆ ಯಶಸ್ವಿಯಾಗದೇ ಹೋಗುವ ನಿರಂಜನನ ಐದಾರು ವರ್ಷದ ಬಾಲ್ಯದಿಂದ ಸುಮಾರು ೧೯೭೦ರ ವೇಳೆಗೆ ಆರಂಭವಾಗುವ ಕಥೆ, ಅವನ ಕುಟುಂಬ, ಅವನ ನೆರೆಹೊರೆ, ಗೆಳೆಯರ ಕಥೆಗಳೊಂದಿಗೆ ಬೆಸೆದುಕೊಳ್ಳುತ್ತಾ ಬೆಳೆದು, ಹೊಸ ಶತಮಾನ ಆರಂಭವಾಗುವ ಸಮಯದಲ್ಲಿ ಮಗಿತಾಯ ಹೊಂದುತ್ತೆ. ಇದಕ್ಕಿಂತ ಹೆಚ್ಚು ಹೇಳೋಲ್ಲ, ಓದಿ ನೋಡಿ!

ಕಾದಂಬರಿ ಚಿಕ್ಕಮಗಳೂರಿನ ರತ್ನಗಿರಿ ಬೋರೆ, ಮತ್ತೆ ಮುಳ್ಳಯ್ಯನ ಗಿರಿ ಎರಡನ್ನೂ ಜೀವತುಂಬಿದ ಪಾತ್ರಗಳನ್ನಾಗಿಸಿರುವುದು ಬಹಳ ಹಿಡಿಸಿತು. ಎಪ್ಪತ್ತರ ದಶಕದ ಬೆಳೆಯುತ್ತಿರುವ ಬೆಂಗಳೂರು, ಮತ್ತೆ ಶತಮಾನದಂಚಿನ ಧಾವಿಸುವ ವೇಗದ ಬೆಂಗಳೂರು, ಜೀವನದಲ್ಲಿ ಕಾಣಸಿಗುವ ನ್ಯಾಯಾನ್ಯಾಯಗಳು - ಒಳ್ಳೆಯ, ಕೆಟ್ಟ, ಎಲ್ಲ ರೀತಿಯ ಪಾತ್ರಗಳ ಚಿತ್ರಣ , ಕತೆಯನ್ನು ವೈವಿಧ್ಯಮಯವಾಗಿ, ಸುಲಭವಾಗಿ ಓದಿಸಿಕೊಂಡು ಹ…