ಸಂಕೇತಿ ನುಡಿಯ ವೈಶಿಷ್ಟ್ಯಗಳು ಮತ್ತೆ ಅದರ ಮೇಲೆ ಕನ್ನಡದ ಪ್ರಭಾವ


 ಸಂಕೇತಿ ಎಂಬ ಹೆಸರಿನಿಂದ ತಮ್ಮನ್ನು ಕರೆದುಕೊಳ್ಳುವ, ಸಂಕೇತಿ ಎಂಬ ತಮಿಳಿನ ಉಪಭಾಷೆಯೊಂದನ್ನು ನುಡಿಯುವ ಸಮುದಾಯವೊಂದು ದಕ್ಷಿಣ ಕರ್ನಾಟಕದಲ್ಲಿ ಸುಪರಿಚಿತರೇ ಆಗಿದ್ದಾರೆ. ಈ ಸಮುದಾಯವು ಸುಮಾರು ಒಂದು ಸಾವಿರ ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದರೂ, ತಮ್ಮ ಹೊರಗಿನ ಎಲ್ಲ ವ್ಯವಹಾರಗಳಿಗೂ ಕನ್ನಡವನ್ನೇ ಆಶ್ರಯಿಸಿದ್ದರೂ, ಎಲ್ಲ ಓದು ಬರವಣಿಗೆಗೂ ಕನ್ನಡವನ್ನೇ ಬಳಸುತ್ತಾ ಬಂದಿದ್ದರೂ ಮನೆಮಾತಾಗಿ ಸಂಕೇತಿಯನ್ನು ಉಳಿಸಿಕೊಂಡು ಬಂದಿರುವುದು ಗಮನಾರ್ಹವಾದ ವಿಚಾರ. ಕರ್ನಾಟಕಕ್ಕೆ ವಲಸೆ ಬಂದ  ಮೊದಲ ತಮಿಳು ಭಾಷಿಕ ಸಮುದಾಯವಾಗಿ ಈ ಸಂಕೇತಿಗಳನ್ನು ಗುರುತಿಸಬಹುದು.

೧೦೮೭ರ ವಿಕ್ರಮಾದಿತ್ಯನ ನೀಲಗುಂದ ಶಾಸನವು ತಮಿಳು ದೇಶದಿಂದ ಬಂದ ಒಂದು ಗುಂಪಿಗೆ ಆಶ್ರಯ ನೀಡಿದ ಬಗ್ಗೆ ತಿಳಿಸುತ್ತದೆಂದೂ, ಇವರೇ ಕರ್ನಾಟಕಕ್ಕೆ ಬಂದ ಮೊದಲ ಸಂಕೇತಿ ವಲಸಿಗರೆಂದೂ ಸಂಶೋಧಕ ಶ್ರೀ ಪ್ರಣತಾರ್ತಿಹರನ್ ತಮ್ಮ ಸಂಶೋಧನೆಗಳಿಂದ ತೋರಿಸಿಕೊಟ್ಟಿದ್ದಾರೆ. ಇವರಲ್ಲೇ ಕೆಲವರು ಶ್ರೀ ರಾಮಾನುಜಾಚಾರ್ಯರ ಅನುಯಾಯಿಗಳಾದ ಹೆಬ್ಬಾರ ಅಯ್ಯಂಗಾರರೆಂದೂ ಅವರ ವಾದ. ಅಂದರೆ ಸುಮಾರು ಚಾಲುಕ್ಯ ಹೊಯ್ಸಳರ ಕಾಲದಲ್ಲೇ ಸಂಕೇತಿಗಳು ಕರ್ನಾಟಕಕ್ಕೆ ಬಂದಿದ್ದಾರೆಇಂದಿನ ದಕ್ಷಿಣ ತಮಿಳುನಾಡು ಕೇರಳ ಗಡಿ ಭಾಗವಾದ ಸೆಂಗೋಟ್ಟೈ ನಿಂದ ಬಂದಿದ್ದ ಇವರನ್ನು ಸಂಕೇತಿ ಎಂದು ಕರೆಯಲಾಯಿತೆಂದೂ, ಏನೋ ಸಂಕೇತವನ್ನಿಟ್ಟುಕೊಂಡು ವಲಸೆಬಂದಿದ್ದರಿಂದ ಇವರು ಸಂಕೇತಿಗಳೆಂದೂ, ಇವರು ವಾಸ ಮಾಡುತ್ತಿದ್ದ ಹಳ್ಳಿಗಳಿಗೆ ಸಂಕೇತಂ ಎಂಬ ಹೆಸರಿದ್ದುದ್ದರಿಂದ ಇವರಿಗೆ ಸಂಕೇತಿಗಳೆಂದು ಕರೆಯುವರೆಂದೂ ಬೇರೆ ಬೇರೆ ಅಭಿಪ್ರಾಯಗಳಿದ್ದರೂ, ಸೆಂಗೋಟ್ಟೈ ನಿಂದ ಬಂದವರು ಅನ್ನುವುದೇ ಸಂಕೇತಿ ಎಂದು ಮಾರ್ಪಾಡಾಗಿದೆ ಎನ್ನುವ ಅಭಿಪ್ರಾಯಕ್ಕೆ ಹೆಚ್ಚಿನ ಬೆಂಬಲವಿದೆ

ನಂತರ, ೧೪೨೩ರ ಬುಕ್ಕರಾಯನ ಶಾಸನದಲ್ಲಿ ಬರುವ ಕೆಲವು ಹೆಸರುಗಳ ಆಧಾರದಿಂದ ಸಂಕೇತಿಗಳು ಶಿವಮೊಗ್ಗ ಸೀಮೆಯಲ್ಲಿ ಆ ವೇಳೆಗೆ ನೆಲೆಗೊಂಡಿದ್ದಿರಬೇಕೆಂದು ಊಹಿಸಲಾಗಿತ್ತು. ಈ ಸಮುದಾಯದ ವಲಸೆಯ ಹಿಂದೆ ಒಂದು ಕುತೂಹಲಕಾರಿ ಕತೆಯಿದ್ದು, ಸಂಕೇತಿಗಳು ೭೦೦ ಕುಟುಂಬಗಳ ಒಂದು ಗುಂಪು ಬಂದು ಹಾಸನ ಜಿಲ್ಲೆಯ ಕೌಶಿಕವೆಂಬ ಹಳ್ಳಿಯಲ್ಲಿ ನೆಲೆಗೊಂಡವೆಂದೂ, ೩೦೦ ಕುಟುಂಬಗಳ ಇನ್ನೊಂದು ಗುಂಪು ಕೆಲವು ವರ್ಷಗಳ ನಂತರ ಮೈಸೂರು ಜಿಲ್ಲೆಯ ಬೆಟ್ಟದ ಪುರದಲ್ಲಿ ಬಂದು ನೆಲೆನಿಂತರೆಂದೂ ಮೌಖಿಕ ಐತಿಹ್ಯವಿದೆ. ಈ ಕಥೆಯು ಮುದ್ರಣವು ಬರುವ ಮೊದಲೇ ಪರಂಪರೆಯ ಕಥೆಯಾಗಿ ೮೦೦-೯೦೦ ವರ್ಷ ಉಳಿದು ಬಂದು, ೨೦ನೇ ಶತಮಾನದ ಮೊದಲಲ್ಲಿ ದಾಖಲಾಯಿತು. ಈ ಕಥೆ ಈ ಬರಹದ ವಿಷಯಕ್ಕೆ ನೇರ ಸಂಬಂಧ ಪಡದೇ ಹೋದದ್ದರಿಂದ ಅದನ್ನು ಮತ್ತೂ ವಿವರವಾಗಿ ಇಲ್ಲಿ ಚರ್ಚಿಸಿಲ್ಲ.

ಸುಮಾರು ಸಾವಿರ ವರ್ಷಗಳಿಂದ ದೂರವಾಗಿ ಬಂದಿರುವುದರಿಂದ ತಮಿಳಿನ ಎಲ್ಲ ಸಂಬಂಧಗಳೂ ತೊರೆದು ಹೋದದ್ದರಿಂದ, ಮತ್ತೆ ಆ ಕಾಲದಲ್ಲಿ ಸಂಚಾರ ಸೌಲಭ್ಯಗಳೂ ಕಡಿಮೆ ಇದ್ದುದ್ದರಿಂದ ಇಂತಹ ಒಂದು ಸಣ್ಣ ಸಮುದಾಯದಲ್ಲೇ (ಇಂದಿನ ಒಟ್ಟು ಸಂಕೇತಿ ಸಮುದಾಯದ ಜನಸಂಖ್ಯೆ ೫೦೦೦೦ ವನ್ನು ಮೀರುವುದಿಲ್ಲ) ಆಡುವ ಮಾತಿನಲ್ಲಿ ಎರಡು ಮೂರು ಒಳನುಡಿಗಳನ್ನು ಗುರುತಿಸಬಹುದುಹಾಗಾಗಿ, ಮುಖ್ಯವಾಗಿ ಕೌಶಿಕ ಮತ್ತು ಬೆಟ್ಟದಪುರ ಎಂಬ ಹೆಸರಿನ ಸಂಕೇತಿ ಮನೆಮಾತುಗಳಿದ್ದರೂ, ಮತ್ತೆ ಕೌಶಿಕ ಸಂಕೇತಿಯ ಒಳಗೇ ಮತ್ತೂರು ಸಂಕೇತಿ, ಮಲೆನಾಡು ಸಂಕೇತಿ ಇತ್ಯಾದಿ ಪ್ರಭೇದಗಳನ್ನೂ ಗುರುತಿಸಬಹುದು. ಒಂದು ಒಳನುಡಿಯವರ ಮಾತು ಇನ್ನೊಬ್ಬರಿಗೆ ಸಾಮಾನ್ಯವಾಗಿ ತಿಳಿಯುವುದಾದರೂ ಕೆಲವು ಪದಗಳು ತೀರ ಅಪರಿಚಿತವಾಗಿರುವುದೂ ಉಂಟು. ವೈವಾಹಿಕ ಸಂಬಂಧಗಳು ತಮ್ಮ ಒಳನುಡಿಯನ್ನಾಡುತ್ತಿರುವವರ ನಡುವೆಯೇ ಆಗುತ್ತಿದ್ದ ಕಾಲವೂ ಇತ್ತು. ಈಗ ಆ ಕಟ್ಟುಪಾಡುಗಳನ್ನು ಅಷ್ಟಾಗಿ ಪಾಲಿಸದೇ ಹೋದದ್ದರಿಂದ ಕನ್ನಡವ ಪ್ರಭಾವವು ೧೯೫೦ರ ಸಮಯದಿಂದ ಬಹಳ ಹೆಚ್ಚಾಗಿರುವಂತೆ ತೋರುತ್ತದೆ.

ಕರ್ನಾಟಕದಲ್ಲಿ ವಾಸಿಸುವ ಹೆಚ್ಚಿನಂಶ ಸಂಕೇತಿಗಳು ಜನಗಣತಿಯಲ್ಲಿ ತಮ್ಮ ತಾಯಿನುಡಿ ಕನ್ನಡವೆಂದೇ ನಮೂದಿಸುವುದು ರೂಢಿ. ಸಂಕೇತಿ ಒಂದು ರೀತಿ ಕೇವಲ ಮನೆಯೊಳಗಿನ ಭಾಷೆಯಾಗಿ (ಕಿಚನ್ - ಲ್ಯಾಂಗುಯೇಜ್) ಉಳಿದುಕೊಂಡಿದೆ. ಎಲ್ಲ ಕೆಲಸ ಕಾರ್ಯ ಬರವಣಿಗೆಗೂ ಕನ್ನಡವನ್ನೇ ಆಧರಿಸುವುದನ್ನೇ ನೋಡಬಹುದು. ಕರ್ನಾಟಕದ ಹೊರಗೆ ೨-೩ ತಲೆಮಾರುಗಳಿಂದ ವಾಸಿಸುತ್ತಿರುವ ಕೆಲವು ಸಂಕೇತಿ ಕುಟುಂಬಗಳಲ್ಲಿ ಕನ್ನಡದ ಬಳಕೆ ಗೌಣವಾಗಿ, ಅದರ ಬದಲು ಅವರಿರುವ ಊರಿನ ಭಾಷೆಯನ್ನು ಬಳಸುವುದನ್ನು ನೋಡಬಹುದು. ಸಂಕೇತಿಯಲ್ಲಿ ಸಾಹಿತ್ಯ ರಚನೆಯಾಗಿಲ್ಲ. ಕೆಲವು ಸಂಪ್ರದಾಯದ ಹಾಡುಗಳು ಕನ್ನಡವನ್ನು ಅನುಕರಿಸಿ ಹುಟ್ಟಿಕೊಂಡಂತೆ ತೋರುತ್ತವೆ. ನನಗೆ ತಿಳಿದಂತೆ, ಡಾ.ಶ್ರೀಕಾಂತ್ ಮೂರ್ತಿ ಹಲವು ಸಂಗೀತ ರಚನೆಗಳನ್ನು ಮಾಡಿರುವ ವಾಗ್ಗೇಯಕಾರರಾಗಿ, ಮತ್ತು ಅಂಬಿಕಾ ಅಂದಾದಿ ಎಂಬ ಕಂದ ಪದ್ಯ ಕಾವ್ಯವನ್ನು ಬರೆದ ಮೊದಲ ಬರಹಗಾರರಾಗಿದ್ದಾರೆ. ಇತ್ತೀಚೆಗೆ ಡಾ.ಹರನ್ ಅವರು ಅನುವಾದಿಸಿರುವ ಎಸ್.ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಸಂಕೇತಿ ಅನುವಾದ  ಸಾರ್ಥು” ಅನ್ನು ಸಂಕೇತಿಯ ಮೊದಲ ಗದ್ಯ ಕೃತಿ ಎಂದು ಸದ್ಯಕ್ಕೆ ಗುರುತಿಸಬಹುದು

ಸಂಕೇತಿಯ ಮೂಲ ಸುಸ್ಪಷ್ಟವಾಗಿ ತಮಿಳು. ಆದರೂ ತಮಿಳು ಮಾತನಾಡುವವರು, ಇದನ್ನು ಕನ್ನಡದಂತಿದೆ ಎನ್ನುವುದೂ ಕನ್ನಡ ಮಾತನಾಡುವವರು ಇದು ತಮಿಳಿನಂತಿದೆ ಎನ್ನುವುದೂ ತಿಳಿದ ವಿಷಯ,

ಕಳೆದ ಸುಮಾರು ಸಾವಿರ ವರ್ಷಗಳಲ್ಲಿ ಸಂಕೇತಿಯ ಮೇಲೆ ತನ್ನ ಸುತ್ತಲಿನ ಕನ್ನಡದ ಪ್ರಭಾವ ಹೇಗೆ ಆಗಿರಬಹುದೆಂದು ನನಗನಿಸಿದ ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ . ಹಾಗೇ ಸಂಕೇತಿ ಭಾಷೆಯ ಕೆಲವು ವೈಷಿಷ್ಟ್ಯಗಳನ್ನೂ ಅಲ್ಲಲ್ಲಿ ಹೇಳುತ್ತೇನೆ. ಈ ಟಿಪ್ಪಣಿಗಳಲ್ಲಿ ಕೊಟ್ಟಿರುವ ಉದಾಹರಣೆಗಳಲ್ಲಿ ತಮಿಳನ್ನು () ಎಂದೂ, ಸಂಕೇತಿಯನ್ನು (ಸಂ) ಎಂದೂ, ಕನ್ನಡವನ್ನು () ಎಂದೂ ಗುರುತಿಸಿದ್ದೇನೆ. ಸಂಸ್ಕೃತವನ್ನು ಪೂರ್ತಿ ಹೆಸರಿನಿಂದ ಸೂಚಿಸಿದೆ

೧) ಸಂಕೇತಿಯಲ್ಲಿ ಅರೆ ಉಕಾರ:

ತಮಿಳಿನಲ್ಲಿರುವ ಅರೆ ಉಕಾರವನ್ನು ಸಂಕೇತಿ ಉಳಿಸಿಕೊಂಡಿದೆ. ತಮಿಳಿನಲ್ಲಿ ಪದದ ಕೊನೆಗೆ ಬರುವ ಉಕಾರವು ಪೂರ್ಣವಾಗಿ ಉಚ್ಚರಿಸಲ್ಪಡುವುದಿಲ್ಲ. ಈ ಉಕಾರವು, ವ್ಯಂಜನಾಕ್ಷರಕ್ಕೂ, ಪೂರ್ಣ ಉಕಾರಕ್ಕೂ ನಡುವೆ ಇರುತ್ತೆ. ಅಂದರೆ, ವಂದು, ಪೋಚು ಇಂತಹ ಪದಗಳು, ವಂದ್, ಪೋಚ್ ಎಂದೂ ಅಲ್ಲದೆ, ವಂದು, ಪೋಚು ಎಂದೂ ಅಲ್ಲದೆ ಇವೆರಡಕ್ಕೂ ನಡುವೆ ಉಚ್ಚರಿಸಲ್ಪಡುತ್ತವೆ. ಈ ಬರಹದಲ್ಲಿ ಅರೆ-ಉಕಾರವನ್ನು ~ ಗುರುತು ಸೇರಿಸಿ ತೋರಿಸಲಾಗಿದೆ (ವಂದು~, ಪೋಚು~ ಇತ್ಯಾದಿ):

) ಸಂಕೇತಿಯಲ್ಲಿ ಮಹಾಪ್ರಾಣಗಳ ಬಳಕೆ:

ತಮಿಳಿನಲ್ಲಿ ಮಹಾಪ್ರಾಣಗಳ ಬಳಕೆ ಉಚ್ಚಾರದಲ್ಲಿ ಹೆಚ್ಚಾಗಿ ಇಲ್ಲವೆಂಬುದೂ, ಬರಹದಲ್ಲಿ ಇಲ್ಲವೇ ಇಲ್ಲವೆಂಬುದು ತಿಳಿದ ಮಾತೇ. ಕನ್ನಡದಲ್ಲಿ ಸಂಸ್ಕೃತ ಪ್ರಾಕೃತ ಮೂಲದ ಪದಗಳ ವ್ಯಾಪಕ ಬಳಕೆಯಿರುವುದರಿಂದ ಆಡುಮಾತಿನಲ್ಲೂ, ಬರವಣಿಗೆಯಲ್ಲೂ ಮಹಾಪ್ರಾಣಗಳ ಬಳಕೆಯಿದೆ. ಸಂಕೇತಿ ನುಡಿಯು ತಮಿಳು ಮೂಲವಾದರೂ, ಮಹಾಪ್ರಾಣಗಳ ಬಳಕೆ ಕನ್ನಡದಲ್ಲಿರುವಂತೆ, ಅಥವಾ ಅದಕ್ಕೂ ಇನ್ನೂ ಹೆಚ್ಚಾಗಿರುವುದು ಒಂದು ಗಮನಿಸಬೇಕಾದ ಸಂಗತಿಹೀಗಾಗಿ ಮಳಾಖಾಯಿ ( ಮೆಣಸಿನಕಾಯಿ), ಖರ್ಮೊ (ಕರ್ಮ), ಧಾಷ್ಟಿಕೊ (ದಾಷ್ಟಿಕ), ಘಳಿಗೆ (ಗಳಿಗೆ), ಫೆರೀ (ಪೆರಿಯ = ದೊಡ್ಡ), ಛೆರಿ (ಸಿರಿ() = ಸಣ್ಣ), ಪೀಖಡೆ (ಪಿಂತಿಕಡೆ- ಹಿಂದುಗಡೆ), ಮೂಖಡೆ (ಮುಂತಿಕಡೆ - ಮುಂದುಗಡೆ) , ವಾರ್ಥೆ ( ವಾರ್ತೆ/ ಇದನ್ನು ಕನ್ನಡದ ಸುದ್ದಿ ಎನ್ನುವ ಅರ್ಥದಲ್ಲದೆ ಮಾತು, ಅದರಲ್ಲೂ ಸಂಕೇತಿ ಮಾತಿಗೆ ಮಾತ್ರ "ನಮ್ಮ ಮಾತು" "ನಮ್ಡೆ ವಾರ್ಥೆ" ಎಂದು ಹೇಳುವುದು ಸಂಕೇತಿ ನುಡಿಯ ರೂಢಿ. ಹೀಗೆ ಸಂಸ್ಕೃತ ತಮಿಳು ಮೂಲದ ಹಲವು ಪದಗಳಲ್ಲಿ ಮಹಾಪ್ರಾಣದ ಬಳಕೆ ತಪ್ಪಾಗಿಯೇ ರೂಢಿಸಿಕೊಂಡಿರುವುದರ ಉದಾಹರಣೆಗಳನ್ನೂ ಸಂಕೇತಿಯಲ್ಲಿ ಕಾಣಬಹುದು.. ಇದಲ್ಲದೆ, ಬೇರೆ ಕನ್ನಡದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಮಹಾಪ್ರಾಣ ಪದಗಳು - ಉದಾ: ಸುಖ, ಘಂಟೆ, ಅರ್ಥ  ಮೊದಲಾದುವು ಸುಖೊ, ಘಂಟ, ಅರ್ಥೊ, ಈ ರೀತಿ ರೂಪಗಳನ್ನು ತಾಳಿವೆ.

) ಬಳಕೆ ತಪ್ಪಿದ ಱ ಮತ್ತು ೞ ಕಾರಗಳು:

ಕೇಶಿರಾಜನ ಕಾಲಕ್ಕೆ ೞ ಕಾರವು ಕನ್ನಡದಲ್ಲಿ ದುರ್ಬಲವಾಗಿದ್ದೂ, ಹರಿದಾಸರ ಕಾಲಕ್ಕೆ  ಱ ಕಾರವು ಬಳಕೆ ತಪ್ಪಿದ್ದೂ ತಿಳಿದ ವಿಷಯವೇ. ಬಹುಶಃ ಇದನ್ನು ಅನುಸರಿಸುತ್ತಲೇಕನ್ನಡನಾಡಿನಲ್ಲಿದ್ದ ಸಂಕೇತಿಗಳೂ ತಮ್ಮ ಮಾತಿನಲ್ಲಿ ಈ ವರ್ಣಗಳ ಉಚ್ಚಾರವನ್ನು ರ ಮತ್ತು ಳ ಕಾರಗಳೊಡನೆ ಸೇರಿಸಿಬಿಟ್ಟಿರುವುದು ಕಾಣುತ್ತದೆ. ಹಾಗಾಗಿ ತಮಿಳಿನ ಮೂಲದ್ದೇ ಆದ ವಾೞಪೞಮ್ (ಬಾಳೆಹಣ್ಣು) ಎಂಬ ಪದವು ವಾಳಪ್ಳೊ  ಎಂಬ ರೂಪವನ್ನೂ ಅಱುವಾಳ್ ಎಂಬ ಪದವು ಅರ್ವಾಳು (ಕುಡುಗೋಲು) ಎಂಬ ರೂಪವನ್ನೂ, ವೞಿ (ದಾರಿ) ಎಂಬುದು ವಳಿ ಎಂದು ರೂಢಿಸಿರುವುದನ್ನೂ ಇಲ್ಲಿ ಉದಾಹರಿಸಬಹುದು

) -ಶ ಮತ್ತೆ ಚ ಕಾರಗಳ ಉಚ್ಚಾರ:

ತಮಿಳಿನಲ್ಲಿ ಪದದ ಮೊದಲು ಬರುವ ಚ ಮತ್ತು ಸ ಕಾರಗಳಲ್ಲಿ ವ್ಯತ್ಯಾಸವಿಲ್ಲ. ಹಾಗೇ ಸಂದರ್ಭಕ್ಕೆ ತಕ್ಕಂತೆ, ಪದದ ನಡುವಿನಲ್ಲಿ ಚ ಮತ್ತು ಜ ಕಾರಕ್ಕೂ ವ್ಯತ್ಯಾಸವಿಲ್ಲ. ಸಂಕೇತಿಯು ಹೆಚ್ಚಿನ ಪದಗಳಲ್ಲಿ ಸ ಕಾರದ ಬದಲು ಚಕಾರವನ್ನೇ ಇಟ್ಟುಕೊಂಡಿರುವುದನ್ನು ನೋಡಬಹುದು - ಉದಾ: ತಮಿಳು: ಸೀರಗೈ ಕನ್ನಡ: ಜೀರಿಗೆ ಸಂಕೇತಿ: ಚೀಲಹಾ.  ಮೂಲ ತಮಿಳಿನಲ್ಲಿ ಶ ಕಾರವಿಲ್ಲದಿದ್ದರೂ, ಕೆಲವೆಡೆ ಸ ಮತ್ತು ಶ ಗಳನ್ನು ಒಂದರ ಸ್ಥಾನದಲ್ಲಿ ಇನ್ನೊಂದನ್ನು ಬಳಸುವ ಸಾಧ್ಯತೆಯಿರುತ್ತದೆ. ಇಂಥ ಕಡೆಗಳಲ್ಲಿ ಸಂಕೇತಿಯು ಸ ಬದಲು ಶ ಕಾರವನ್ನು ಹೆಚ್ಚು ಬಳಸುತ್ತದೆ. ಉದಾ: ಪಸಿ (), ಪಶಿ (ಸಂ) (ಹಸಿ ()) - ಪುದುಸು(ತ) -> ಪುದು~ಶ್ಶು~ (ಸಂ) - ಹೊಸತು (ಕ), ಪಸ (ತ) -> ಪಶ್ಶ (ಸಂ) - ಮಗು/ಮಗ (ಕ)  ; ಇಂತಹದೇ ಬದಲಾವಣೆಗಳನ್ನು ಕನ್ನಡ/ಸಂಸ್ಕೃತ ಮೂಲದ ಪದಗಳಲ್ಲೂ ಸಂಕೇತಿ ಮಾಡಿಕೊಳ್ಳುತ್ತದೆ - ವಾಸಿ () -> ವಾಶಿ (ಸಂ);  ಮಾಸಿಕ (/ಸಂಸ್ಕೃತ) -> ಮಾಶ್ಕೊ (ಸಂ),

) , ಗ ಮತ್ತು ಹ ಕಾರಗಳು:

ತಮಿಳಿನಲ್ಲಿ ಕ ಮತ್ತು ಹ ಕಾರಗಳಿಗೂ (ಅದೇ ಕಾರಣದಿಂದ ಗ ಮತ್ತು ಹ ಕಾರಗಳೂ ) ಒಂದರ ಸ್ಥಳದಲ್ಲಿ ಇನ್ನೊಂದು ಬಳಕೆಯಲ್ಲಿವೆ. ಸಂಕೇತಿಯಲ್ಲಿ ಗ/ಹ ಎರಡೂ ಉಳಿದುಕೊಂಡು ಬಳಸಲ್ಪಡುತ್ತಿವೆ. ವಿಶೇಷವೆಂದರೆ ಬೇರೆ ಬೇರೆ ಸೀಮೆಯ ಸಂಕೇತಿ ಭಾಷಿಗರಲ್ಲಿ ಈ ವ್ಯತ್ಯಾಸವನ್ನು ಚೆನ್ನಾಗಿ ಗಮನಿಸಬಹುದಾಗಿದೆ. ಉದಾ: ಮಿಳಗು () - ಮಳಹು/ ಮಳಗು.  ತಮಿಳಿನಲ್ಲಿ ಇರುವಂತೆ ಕ--ಹ ಗಳ ಅಭೇದವನ್ನೂ ಕೆಲವು ಸಂಕೇತಿ ಮಾತುಗಳಲ್ಲಿ ಕಾಣಬಹುದು ಉದಾ: ಪರಂಬ್ ಗಡೆ, ಪರಂಬ್ ಹಡೆ, ಪರಂಭಡೆ, ಪರಂಬ್ ಕಡೆ (ಹೊರಗಡೆ); ಮಳಹು~/ಮಳಗು~ ಇವೆಲ್ಲವೂ ಒಂದೇ ಎಂದು ಪರಿಗಣಿಸಲಾಗುವುದು.

) ಸಂಕೇತಿಯ ಸಂಬೋಧನೆಗಳು:

ತಮಿಳು ಮೂಲದ ಡಾ, ಡೀ ಎಂಬ ಸಂಬೋಧನೆಗಳು ಸಂಕೇತಿಯಲ್ಲಿ ಡೋ, ಡೇ ಎಂದು ಬದಲಾಗಿವೆ. ಕೆಲವೊಮ್ಮೆ ಇದನ್ನು ಮಹಾಪ್ರಾಣಯುಕ್ತವಾಗಿ, ಢೋ, ಢೇ ಎಂದೂ ಬಳಸಲಾಗುತ್ತೆ. ಇದು ಬಹುಶಃ ಕನ್ನಡದ ಲೋ, ಲೇ, ಏನೋ, ಏನೇ ಇಂತಹ ಸಂಬೋಧನೆಗಳ ಪ್ರಭಾವವಿರಬಹುದೇನೋ ಎಂದು ನನ್ನೆಣಿಕೆ. ಹಾಗಾಗಿ ವಾಡಾ, ವಾಡೀ, ಪೋಡಾ ಪೋಡೀ ಎಂಬ ತಮಿಳು ಸಂಬೋಧನೆಗಳು ಸಂಕೇತಿಯಲ್ಲಿ ವಾಡೋ ವಾಡೇ, ಪೋಡೋ ಪೋಡೇ ಎಂದು ಬದಲಾಗಿರುವುದಕ್ಕೂ ಬಾರೋ ಬಾರೇ, ಹೋಗೋ ಹೋಗೇ ಅನ್ನುವಂಥಾ ಪ್ರಯೋಗಗಳೇ ಕಾರಣವಿರಬಹುದೆಂದು ಊಹಿಸಬಹುದು.

) ಏಕಾರದಿಂದ ಓಕಾರಕ್ಕಾದ ಬದಲಾವಣೆಗಳು:

ತಮಿಳು ಮೂಲದ ( ಹಲವು ಬಾರಿ ಕನ್ನಡದಲ್ಲಿಯೂ ಇರುವ ) ಏ ಕಾರವುಳ್ಳ ಪದಗಳು ಸಂಕೇತಿ ಮಾತಿನಲ್ಲಿ ಓ ಕಾರಕ್ಕೆ ಬದಲಾಗುತ್ತವೆ - ಉದಾ: ಕೇಟ್ಟು (ತಮಿಳು) -> ಕೋಟು~ (ಸಂಕೇತಿ) (ಕೇಳಿ - ಕನ್ನಡ); ತೇಂಗಾಯ್ () -> ತೋಂಗಾಯ್ (ಸಂ) (ತೆಂಗಿನಕಾಯಿ ()) , ಎದು^ () -> ಓದು~ (ಸಂಕೇತಿ) - ಏನು (ಕನ್ನಡ) ;  ಏೞು() -> ಓಳು~ (ಏಳು - ), ಏಂದ್ರ್ ()-> ಓಂದ್ರು~ (ಸಂ) ಹೀಗೆ  ಈ ಬದಲಾವಣೆಗಳಲ್ಲಿ ಕನ್ನಡದ ಹೆಚ್ಚು ಪ್ರಭಾವ ಕಾಣುತ್ತಿಲ್ಲ.

೮) ಒಕಾರದಿಂದ ಉಕಾರಾಕ್ಕಾಗಿರುವ ಬದಲಾವಣೆಗಳು:

ಹಳೆಗನ್ನಡ, ತಮಿಳಿಲ್ಲಿರುವ ಉಕಾರಗಳು ಹೊಸಗನ್ನಡದಲ್ಲಿ ಒಕಾರಗಳಾಗಿರುವುದು ಗೊತ್ತಿರುವ ವಿಷಯ. ಪುದು - ಹೊಸ - ಪುದುಕುರಲ್ -> ಕೊರಳು , ಉರುಲ್ -> ಒರಳು , ಕುಡು -> ಕೊಡು ಇತ್ಯಾದಿ. ಇಂತಹ ಕಡೆಗಳಲ್ಲಿ ಸಂಕೇತಿಯು ಸಾಮಾನ್ಯವಾಗಿ, ಹಳೆಯ ಉಕಾರದ ರೂಪಗಳನ್ನು ಉಳಿಸಿಕೊಂಡಿದೆ.

) ಕೆಲವು ನಿತ್ಯ ಬಳಕೆಯ ಕನ್ನಡ ಪದಗಳು ಸಂಕೇತಿಗೆ ಸೇರಿರುವ ಬಗ್ಗೆ

ತಮಿಳಿನಲ್ಲಿಲ್ಲದ ಕೆಲವು ಅಚ್ಚಕನ್ನಡ ಪದಗಳು ಸಂಕೇತಿಯ ಪದಸಂಪದಕ್ಕೆ ಸೇರಿ ಹೋಗಿವೆ. ಉದಾ: ತಾಳದ. ಪಲ್ಯ ಅನ್ನುವ ಅರ್ಥದಲ್ಲಿ ತಮಿಳಿನಲ್ಲಿ ಕರಿಎನ್ನುವ ಪದವಿದೆ. ಕನ್ನಡದಲ್ಲಿ ಪಲ್ಯ, ಕರಿ ಹೀಗೆ ಎರಡೂ ಅಲ್ಲಲ್ಲಿ ಬಳಕೆಯಲ್ಲಿದ್ದರೂ , ಸಂಕೇತಿಯಲ್ಲಿ ಹೆಚ್ಚಾಗಿ ಅಚ್ಚಕನ್ನಡದ ತಾಳದ ಎನ್ನುವ ಪದವೇ ಹೆಚ್ಚು ಬಳಕೆಯಲ್ಲಿದ್ದು ಕೆಲವು ಕಡೆ ಮಾತ್ರ ಕರಿ ಎಂಬ ಬಳಕೆಯಿದೆ. ಇದೇ ರೀತಿ, ದಕ್ಷಿಣ ಕರ್ನಾಟಕದಲ್ಲಿ ಬಳಕೆಯೆ ತರಕಾರಿ, ಉಪ್ಪಿಟ್ಟು ಇಂತಹ ಪದಗಳನ್ನೇ ಸಂಕೇತಿಯಲ್ಲಿ ಉಳಿಸಿಕೊಂಡು, ಉಪ್ಮಾ, ಕಾಯ್ಕರಿ ಮೊದಲಾದ ತಮಿಳು ಪದಗಳನ್ನು ಕೈಬಿಡಲಾಗಿದೆ. ಇನ್ನು ಕೆಲವೆಡೆ, ಕನ್ನಡದ ಅನುಕರಣೆಯನ್ನು ತಮಿಳು ಪದದ ಮೂಲಕ್ಕೆ ಮಾಡಲಾಗಿದೆ - ಉದಾ: ಹುಣಿಸೇಹಣ್ಣಿಗೆ ತಮಿಳಿನಲ್ಲಿ ಬರಿ ಪುಳಿ ಎಂದರೆಸಂಕೇತಿಯಲ್ಲಿ ಪುಳಿಯಂಪಳೊ   ಅನ್ನುವ ಕನ್ನಡದ ಅನುಕರಣೆಯ ಪದವು ಸಿಗುತ್ತೆ. ಹಾಗೇ ಹುಳಿ (ಖಾದ್ಯಪದಾರ್ಥ) ಕ್ಕೆ ತಮಿಳಿನಲ್ಲಿ ಮೂಲವು ಕಾಣದ ಪುಳ್ಕೀರಿ ಎಂಬ ಪದವಿದೆ. ಹಾಗೇ ಕನ್ನಡದ ಮಜ್ಜಿಗೆ ಹುಳಿಯು, ಸಂಕೇತಿಯಲ್ಲಿ ಮೋರ್ ಪುಳಿಯಾಗಿದೆ (ತಮಿಳಿನಲ್ಲಿ ಇದನ್ನೆ ಸಮಾಂತರವಾಗಿ, ಮೋರ್ ಕೊಳಂಬು ಎಂಬ ಪದವಿರುವುದನ್ನು ಗಮನಿಸಬಹುದು). ಹಾಗೇ ಕರಿಬೇವು, ಕೊತ್ತಂಬರಿ ಮೊದಲಾದವುಗಳೂ ತಮಿಳಿನ ಕರಿವೇಪೆಲೆ, ಕೊತ್ತಮಲ್ಲಿ ಮೊದಲಾದವುಗಳನ್ನಲ್ಲದೇ, ಅವುಗಳ ಕನ್ನಡ ರೂಪದಲ್ಲೇ ಸಂಕೇತಿ ವ್ಯವಹಾರದಲ್ಲಿ ಕಾಣುತ್ತವೆ.

ಇದೇ ರೀತಿ ಕೆಲವು ದಿನ ಬಳಕೆಯ ಪದಗಳಲ್ಲಿ ತಮಿಳು ಮೂಲದ ಪದಗಳ ಬದಲು  ಕನ್ನಡದ (ಅಥವಾ ಕನ್ನಡದಲ್ಲಿ ಹೆಚ್ಚು ಬಳಕೆಯಿರುವ ಬೇರೆ ಮೂಲದ) ಪದಗಳನ್ನು ಸಂಕೇತಿಯು ಇಟ್ಟುಕೊಳ್ಳುವುದನ್ನು ಗಮನಿಸಬಹುದು. ಉದಾ: ವೇಷ್ಟಿ ಎಂಬ ತಮಿಳಿನಲ್ಲಿ ಬಳಕೆಯ ಪದದ ಬದಲಿಗೆ ಪಂಚೆ ಅನ್ನುವ ಕನ್ನಡದ ದಿನಬಳಕೆಯ ಪದ. ಹಾಗೇ ಪೊಡವೈ ಎಂಬ ತಮಿಳು ಪದದ ಬದಲು, ಕನ್ನಡದ ಸೀರೆಯ ಜ್ಞಾತಿಯಾದ ಚೀರ. (ಚೀರವೆಂಬ ಸಂಸ್ಕೃತ ಪದವೇ ಕನ್ನಡದಲ್ಲಿ ಸೀರೆಯಾಗಿದೆ. ಸಂಕೇತಿಯು ಇದನ್ನು ನೇರವಾಗಿ ಸಂಸ್ಕೃತದಿಂದ ಪಡೆದಿದೆ ಅನ್ನುವುದಕ್ಕಿಂತ ಉಚ್ಚಾರ ಸಾದೃಶ್ಯದಿಂದ , ಸುಡು -> ಚುಡು, ಸತ್ತು -> ಚತ್ತು, ಸಾರು -> ಚಾರು, ಸುತ್ತು-> ಚುತ್ತು , ಹೀಗೆ ಸೀರೆಯನ್ನೂ ಚೀರ ಎಂದು ಬದಲಾಯಿಸಲಾಗಿದೆ ಎಂಬುದು ನನ್ನ ಎಣಿಕೆ.

೧೦) ಸಂಕೇತಿಯ ಒಂದು ವೈಶಿಷ್ಟ್ಯವಾದ ನಪುಂಸಕ () ಲಿಂಗ:

ಕನ್ನಡ ತಮಿಳು ಸಂಸ್ಕೃತ ಎಲ್ಲ ಭಾಷೆಗಳಲ್ಲೂ ಪುಲ್ಲಿಂಗ ಸ್ತ್ರೀಲಿಂಗ ನಪುಂಸಕಲಿಂಗದ  ಸರ್ವನಾಮಗಳಿವೆ. ಸಂಕೇತಿಯಲ್ಲಿ ಕೆಲವು ಪುಲ್ಲಿಂಗ (ಪು) ಸ್ತ್ರ್ರೀಲಿಂಗ(ಸ್ತ್ರೀ) ಸರ್ವನಾಮಗಳನ್ನು ನಪುಂಸಕಲಿಂಗದಲ್ಲಿ ಹೇಳುವುದೊಂದು ವೈಶಿಷ್ಟ್ಯ. ಇಲ್ಲಿ ಕೆಳಗಿನ ಉದಾಹರಣೆಯಲ್ಲಿ * ಚಿಹ್ನೆಯು ಅನುನಾಸಿಕ ಸಹಿತ ಉಚ್ಚಾರವನ್ನು ತೋರಿಸಿದರೆ, ~ ಎಂಬುದು ಅರೆ ಉಕಾರವನ್ನು ಸೂಚಿಸುತ್ತೆ

ಉದಾ: ಕನ್ನಡದಲ್ಲಿ ಅವನು (ಪು), ಅವಳು (ಸ್ತ್ರೀ) , ಅದು (), ಅವರು (ಪು/ಸ್ತ್ರೀ/ಗೌರವಾರ್ಥಕ), ಅವು(ಗಳು) () - ಇಂತಹ ಪದಗಳಿವೆ. ಇದೇ ಸಂಬಂಧಗಳಿಗೆ ಸಂಕೇತಿಯಲ್ಲಿ ನಾವು ಹೇಳುತ್ತಿರುವುದು ಯಾರಬಗ್ಗೆ ಎಂಬುದನ್ನು ಅನುಸರಿಸೆ ಬೇರೆ ಬೇರೆ ರೀತಿಯ ಬಳಕೆಗಳುಂಟು.

ಅದು~ : ಅದು, ಅವನು, ಅವಳು ( ಇಲ್ಲಿ ನಾವು ಹೇಳುತ್ತಿರುವ ವ್ಯಕ್ತಿ ನಮಗಿಂತ ವಯಸ್ಸಿನಲ್ಲಿ ಬಹಳ ಕಿರಿಯರೋ ಅಥವಾ ನಮಗೆ ಬಹಳ ಹತ್ತಿರದವರೋ ಆಗಿರುತ್ತಾರೆ) ಈ ಮೂರೂ ಅರ್ಥದಲ್ಲಿ ಬಳಸಬಹುದು. ಅಂದರೆ ಯಾರನ್ನ ನಾವು ಹೋಗು/ಬಾ ಹೀಗೆ ಏಕವಚನದಲ್ಲಿ ಕರೆಯುತ್ತೇವೋ, ಅವರಿಗೆಲ್ಲ ಸಂಕೇತಿಯಲ್ಲಿ ನಪುಂಸಕಲಿಂಗದ ಸರ್ವನಾಮ ಬಳಸಲಾಗುತ್ತೆ. ಉದಾ: ಅವನು ಬಂದಿದ್ದಾನೆ (ಅದು~ ವಂದ್ರಾಂದು), ಅವಳು ನನ್ನ ಸ್ನೇಹಿತೆ (ಅದು~ ಎಂದೇ ಸ್ನೇಹಿತೆ) ಹೀಗೆ. ಇಂತಹ ಬಳಕೆಯಲ್ಲಿ, ಅದಕ್ಕೆ ತಗಲುವ ಕ್ರಿಯಾಪದವೂ ನಪುಂಸಕ ಲಿಂಗದಲ್ಲೇ ಇರುತ್ತೆ.

ಅವೊ*, ಅವೆ* - ಆತ, ಆಕೆ (ಇಲ್ಲಿ ನಾವು ಹೆಚ್ಚಿನ ಗೌರವ ಕೊಡದೇ ಹೋದರೂ, ತೀರಾ ಹತ್ತಿರದವರಲ್ಲವೆಂಬುದನ್ನು ಸೂಚಿಸುತ್ತದೆ) - ಉದಾ: ಆತ ಬಂದಿದ್ದಾನೆ (ಅವೊ* ವಂದ್ರಾಣ), ಆಕೆ ನನ್ನ ಸ್ನೇಹಿತೆ (ಅವೆ ಎಂದೆ ಸ್ನೇಹಿತೆಹೀಗೆ.

ಅವ - ಅವರು (ಸ್ತ್ರೀ/ಪು ಹಾಗೂ ಗೌರವಾರ್ಥಕ) - ಅವರು ಬಂದಿದ್ದಾರೆ ( ಅವ ವಂದ್ರಾಂಡ), ಅವರು ನನ್ನ ಸ್ನೇಹಿತೆ ( ಅವ ಎಂದೆ ಸ್ನೇಹಿತೆ) ಹೀಗೆ.

ಅವ್ಯಾಅವರು(ಗಳು);  ಯಾರನ್ನು ಸಂಕೇತಿಯಲ್ಲಿ ಅದು* ಎಂದು ಕರೆಯುವೆವೊ, ಅವರು ಹೆಚ್ಚು ಸಂಖ್ಯೆಯಲ್ಲಿದ್ದಾಗ, ಅವರುಗಳು ಎನ್ನುವುದಕ್ಕೆ ಅವ್ಯಾ ಎಂಬ ಪದವಿದೆ. : ಅವರುಗಳು ನನ್ನ ಸ್ನ್ಯೇಹಿತರು (ಅವ್ಯಾ ಎಂದೆ ಸ್ನೇಹಿತಂಗ). ಇದೇ ಗೌರವಾನ್ವಿತರು ಬಹು ಸಂಖ್ಯೆಯಲ್ಲಿದ್ದಾಗ ಇದೇ ಸಾಲು ಅವಾಳೆಲ್ಲ ಎಂದೆ ಸ್ನೇಹಿತ ಅನ್ನುವ ರೂಪ ತಾಳುತ್ತೆ.

೧೧) ಸಂಕೇತಿಯ ಸಂಬಂಧವಾಚಕಗಳು:

ಸಂಕೇತಿಯ ಸಂಬಂಧವಾಚಕಗಳು ಕನ್ನಡ ಅಥವಾ ತಮಿಳಿಗಿಂತ ಹೆಚ್ಚು ವೈವಿಧ್ಯಮಯವಾಗಿವೆತಂದೆಯ ಬಗ್ಗೆ ಮಾತಾಡುವಾದ "ತೋಪನಾ" ( :ತಗಪ್ಪನರ್) ಎಂದು ಹೇಳುವುದಾದರೂ, ಕರೆಯುವಾಗ ಅಪ್ಪ, ಅಥವಾ ಅಣ್ಣ ಎಂದು ಕರೆಯುವುದುಹಾಸನ ಜಿಲ್ಲೆಯ ಸಂಕೇತಿಗಳು "ಅಣ್ಣ" ಎಂದೇ  ಕರೆಯುವುದು ದಕ್ಷಿಣ ಕರ್ನಾಟಕದ ಕನ್ನಡಿಗರ ಮಾತಿನಿಂದ ಪ್ರೇರಿತರಾಗಿ ಎಂದು ತೋರುತ್ತದೆ. ತಾಯಿಯನ್ನು ಕನ್ನಡದಂತೆಯೇ ಅಮ್ಮ ಎಂದು ಕರೆಯಲಾಗುತ್ತೆಅದೇ ರೀತಿ, ತಮಿಳಿನ ಚಿತ್ತಿ ಎಂಬ ಪದಕ್ಕೆ ಬದಲಾಗಿ, ತಾಯಿಯ ತಂಗಿಯನ್ನು ಚಿಕ್ಕಮ್ಮ ಎಂಬ ಕನ್ನಡ ಪದದಲ್ಲೇ ಕರೆಯಲಾಗುತ್ತೆ.

ಕನ್ನಡದಲ್ಲಿ ಹೆಂಡತಿಯ ತಂದೆಗೂ, ತಾಯಿಯ ಸೋದರನಿಗೂ "ಮಾವ" ಎಂಬ ಒಂದೇ ಹೆಸರಿನಿಂದಲೂ, ತಾಯಿಯ ಸೋದರನನ್ನು ಸೋದರಮಾವನೆನ್ನುವುದೂ ರೂಢಿಯಲ್ಲುಂಟು. ಸಂಕೇತಿಯಲ್ಲಿ ಹೆಂಡತಿಯ ತಂದೆಯನ್ನು ಮಾಮ್ನಾ (: ಮಾಮನಾರ್, ಮಾವನವರು) ಎಂದೂ, ಸೋದರಮಾವನನ್ನು ಬರೀ ಮಾವ ಎಂದೂ ಕರೆಯುತ್ತಾರೆ. ಕನ್ನಡದಲ್ಲಿ ಸೋದರಮಾವನ ಹೆಂಡತಿಯನ್ನೂ, ತಂದೆಯ ಸೋದರಿಯನ್ನೂ ಅತ್ತೆ ಎಂದೇ ಕರೆದರೆ ಸಂಕೇತಿಯಲ್ಲಿ ಸೋದರ ಮಾವನ ಹೆಂಡತಿಯನ್ನು ಅಮ್ಮಾಮಿ ಎಂದೂ, ತಂದೆಯ ಸೋದರಿಯನ್ನು ಅತ್ತೆ ಎಂದೂ ಕರೆಯುತ್ತಾರೆ. ಮತ್ತೆ, ತಂದೆಯ ತಂದೆತಾಯಿಯರನ್ನು ಅಜ್ಜ ಅಜ್ಜಿ ಎಂದೂ, ತಾಯಿಯ ತಂದೆತಾಯಿಯರನ್ನು ಮಾಯಪ್ಪ, ಮಾಯಮ್ಮ ( ಮಾವನ ಅಪ್ಪ, ಅಪ್ಪ) ಎಂದೂ ಕರೆಯುವ ಪದ್ಧತಿ ಶಿವಮೊಗ್ಗ ಜಿಲ್ಲೆಯ ಸಂಕೇತಿಗಳಲ್ಲಿದೆ. ಇದಲ್ಲದೆ ಸೋದರತ್ತೆಯ ಮಗ, ಮಗಳು (ಅತ್ತಾನ್, ಅತ್ತಂಗೆ), ಸೋದರ ಮಾವನ ಮಗ ಮಗಳು (ಅಮ್ಮಾಂಬು, ಅಮ್ಮಂಗೆ) ಹೀಗೆ ಸೋದರ ಸಂಬಂಧಿಗಳಿಗೂ ಸಂಬಂಧವಾಚಿಗಳಿರುವುದು ಸಂಕೇತಿಯ ವೈಶಿಷ್ಟ. ಇದು ಯಾವ ಮಟ್ಟದ ವರೆಗೆ ಹೋಗಿದೆಯೆಂದರೆ, ! ಸೋದರತ್ತೆ, ವಯಸ್ಸಾದ ಮೇಲೆ, ಅವಳ ಸೊಸೆಯನ್ನು ತಾನೇ ಎಲ್ಲಕ್ಕೂ ನೆನೆಯಬೇಕಾಗುತ್ತದೆ ಎಂಬ ಅರ್ಥದಲ್ಲಿ ಸೋದರತ್ತೆಯ ಮಗನ ಹೆಂಡತಿಗೆ ಅತ್ನೆಂಚೋಳೇ ( ಅತ್ತೆ ನೆನೆಯುವವಳೇ) ಎಂಬ ಹೆಸರೂ ಇದೆ!

೧೨) ಸಂಕೇತಿಯ ಕೆಲವು ವಿಶೇಷ ಬಳಕೆಗಳು:
 
ಸಂಕೇತಿಯ ಪದ ಸಂಪದದಲ್ಲಿ ಕೆಲವು ಮಲೆಯಾಳದ ಪದಗಳನ್ನೂ ಗುರುತಿಸಲಾಗಿದೆ. ಇವು, ತಮಿಳು ಮಲೆಯಾಳ ಕವಲೊಡೆಯುವ ಮೊದಲು ಸಂಕೇತಿಗಳು ಶೆಂಗೋಟ್ಟೈ ಪ್ರದೇಶದಿಂದ ಹೊರಬಂದಿದ್ದರ ಸೂಚಕವಿರಬೇಕು. ಸಂಕೇತಿಯು ಮಲೆಯಾಳದಷ್ಟು ಹೆಚ್ಚು ಸಂಸ್ಕೃತ ಪದಗಳನ್ನು ಆಡುಮಾತಿನಲ್ಲಿಟ್ಟುಕೊಂಡಿಲ್ಲ. ಆದರೂ ಕೆಲವೊಮ್ಮೆ ಸಂಸ್ಕೃತ ಪದಗಳ ಬಳಕೆಯು ಸಂದರ್ಭವನ್ನು ಸೂಚಿಸುವುದುಂಟು (ಉದಾ: ಕುಡಿಯುವ ನೀರಿಗೆ ತೀರ್ಥೊ ಎಂದರೆ, ಉಳಿದೆಲ್ಲ ನೀರಿಗೆ ನೀರು ಎನ್ನುವುದು). ಹಾಗೇ ಯಾವುದೇ  ಹೊಳೆಗೂ ನದಿಗೂ ಕಾವೇರಿ ಎನ್ನುವುದೂ , ಮೊದಮೊದಲು ಇವರು ಕನ್ನಡನಾಡಿಗೆ ಬಂದಾಗ ಕಾವೇರಿ ಬಯಲಿಗೆ ಬಂದಿರುವ ಸಾಧ್ಯತೆಯನ್ನೂ ಸೂಚಿಸಬಹುದು.


ಈ ಬರಹವು ಯಾವುದೇ ದೃಷ್ಟಿಯಿಂದ ಪೂರ್ಣವೆನಿಸದಿದ್ದರೂ, ಸಂಕೇತಿ ಭಾಷೆಯ ಪರಿಚಯವಿಲ್ಲದವರಿಗೆ, ಅದರ ಬಗ್ಗೆ ಸ್ವಲ್ಪವಾದರೂ ಕುತೂಹಲ ಮೂಡಿಸಿದರೂ ಈ ಬರಹದ ಆಶಯ ಸಾರ್ಥಕ. ೨೧ನೇ ಶತಮಾನದಲ್ಲಿ, ವೈವಾಹಿಕ ಸಂಬಂಧಗಳು ಸಂಕೇತಿ ಸಮುದಾಯಗಳಿಂದ ಹೊರಗಡೆಯಲ್ಲಿ ಆಗುತ್ತಿರುವ ಕಾರಣದಿಂದ ಸಂಕೇತಿ ಆಡು ಮಾತಿಗೆ ಸುಮಾರು ೩೦-೪೦ ವರ್ಷಗಳ ಹಿಂದೆ ಇದ್ದ ಸತ್ವ ಕಾಣದಾಗಿದೆ. ಹಿಂದೆಯೂ ಇದು ಕಿಚನ್-ಲ್ಯಾಂಗ್ಯೇಜ್ ಆಗಿದ್ದರೂ, ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಬರುತ್ತಾ ಸುಮಾರು ೧೦೦೦ ವರ್ಷ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿತ್ತು. ಆದರೆ ಜಾಗತೀಕರಣದ ಈ ಸಂದರ್ಭದಲ್ಲಿ ಕನ್ನಡದಂತಹ ಆರೇಳು ಕೋಟಿ ಮಾತಾಡುವರಿರಿವ ಭಾಷೆಗೇ ಅಪಾಯವಿದೆಯೆಂದಾದರೆ, ಐವತ್ತು ಸಾವಿರಕ್ಕೂ ಕಡಿಮೆ ಜನರಾಡುವ ಸಂಕೇತಿಯಂತಹ ಮನೆ ನುಡಿಗಳು ಮತ್ತೂ ನೂರಾರು ವರ್ಷ ಬಾಳಿಯಾವೇ ಇಲ್ಲವೇ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ.

-ಹಂಸಾನಂದಿ

ಕೊ: ’ಪದಾರ್ಥ ಚಿಂತಾಮಣಿ’ ಎನ್ನುವ ಫೇಸ್ ಬುಕ್ ಬಳಗವೊಂದಿದೆ. ( https://www.facebook.com/groups/padarthachintamani/).  ಈ ಬಳಗ ೨೦೧೬ರ ಜನವರಿ ತಿಂಗಳಲ್ಲಿ ನಡೆಸಿದ ’ಪದಕಮ್ಮಟ’ ಕಾರ್ಯಕ್ರಮದ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ ಬರಹವಿದು. 

ಕೊ.ಕೊ:  ಈ ಪ್ರಬಂಧದಲ್ಲಿನ ಹೆಚ್ಚಿನ ಅಂಶಗಳು ನನ್ನ ಅನುಭವಕ್ಕೆ ಬಂದವುಗಳೇ ಆಗಿದ್ದರೂ, ಡಾ.ಪ್ರಣತಾರ್ತಿಹರನ್ ಅವರ ಸಂಶೋಧನಾಗ್ರಂಥಗಳಲ್ಲಿ ಓದಿದ್ದ ಕೆಲವು ವಿವರಗಳನ್ನು ಸಂದರ್ಭಕ್ಕೆ ಸೂಕ್ತವಾಗಿ, ಆಕರಸ್ಮರಣೆಯೊಂದಿಗೆ ಬಳಸಿಕೊಂಡಿದ್ದೇನೆ.

ಕೊ.ಕೊ.ಕೊ: ಸಂಸ್ಮರಣದ ಸಂಚಿಕೆಯ ಮುಖಪುಟ ವಿನ್ಯಾಸ - ಕಲಾವಿದ ರಾಜೇಶ್ ಶ್ರೀವತ್ಸ


Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?