ಸಂಗೀತ ಕಲಾನಿಧಿಗೊಂದು ನಮನ

ಇವತ್ತು ಫೆಬ್ರುವರಿ ೧೮, ೨೦೧೬. ಸಂಗೀತ ಕಲಾನಿಧಿ ಡಾ. ಆರ್. ಕೆ. ಶ್ರೀಕಂಠನ್ ಅವರು ದಿವಂಗತರಾಗಿ ಎರಡು ವರ್ಷವಾಗಿವೆ. ಆದರೆ ಅವರ ಸಂಗೀತದ ಕಂಪು ಇನ್ನೂ ಮಾಸಿಲ್ಲ, ಮಾಸುವುದೂ ಇಲ್ಲ.


ಒಂದು ಮಾಘದ ತಂಪಿರುಳಲಾ
ನಂದದಲಿ ಸೇರಿರುವ ಸುರಗಣ
ಚಂದದಲಿ ಕುಳಿತಿರಲು ಗಾಯನದಿಂಪ ಸವಿಯಲಿಕೆ
ಇಂದದೇಕೋ ತನ್ನ ಹಾಡ
ಲ್ಲೊಂದು ಸೊಗಸೂ ಕಾಣದೆಯೆ ಕರೆ-
ತಂದ ನಾರದ ನಾಕದೊಳು ಕನ್ನಡದ ಕೋಗಿಲೆಯ!

1920 ರಲ್ಲಿ ಜನಿಸಿದ ಡಾ.ಶ್ರೀಕಂಠನ್ ಅವರರು ತಮ್ಮ 94 ವರ್ಷಗಳ ವಯಸ್ಸಿನಲ್ಲೂ, ತಮ್ಮ ಕೊನೆಯ ದಿನಗಳವರೆಗೆ ಸಂಗೀತ ಕಛೇರಿಗಳನ್ನು ಕೊಡುತ್ತಲೇ ಬಂದವರು. ಅವರು ಕಡೆಯವರೆಗೂ, ತಮ್ಮ ಕಂಠದ ಸೊಗಸನ್ನು ದಶಕಗಳ ಹಿಂದೆ ಹೇಗಿತ್ತೋ ಹಾಗೇ ಇಟ್ಟುಕೊಂಡದ್ದು ಸಂಗೀತಗಾರರೇ ಅಚ್ಚರಿ ಪಟ್ಟು ಮೆಚ್ಚಿದಂತಹ ವಿಷಯ. 

ಸಂಪ್ರದಾಯಬದ್ಧ ಸಂಗೀತವನ್ನು ಉಳಿಸಿಕೊಂಡು ಬಂದ 20ನೇ ಶತಮಾನದ ಸಂಗೀತಗಾರರಲ್ಲಿ ಶ್ರೀಕಂಠನ್ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಹಾಸನ ಜಿಲ್ಲೆಯ ರುದ್ರಪಟ್ಟಣದವರಾದ ಶ್ರೀಕಂಠನ್ ಅವರು ತ್ಯಾಗರಾಜರ ನೇರ ಶಿಷ್ಯ ಪರಂಪರೆಗೆ ಸೇರಿದದವರು. ಅತಿ ಶುದ್ಧವಾದ ಪಾಠಾಂತರ, ಉತ್ಕೃಷ್ಟ ಶೈಲಿಯ ಮನೋಧರ್ಮ ಮತ್ತೆ ಪ್ರತಿ ರಚನೆಯ ಹಾಡುಗಾರಿಕೆಯಲ್ಲೂ ಇರುವಂತಕ ಚೊಕ್ಕತನಕ್ಕೆ ಶ್ರೀಕಂಠನ್ ಅವರು ಕರ್ನಾಟಕ ಸಂಗೀತವಿರುವ ಕಡೆಯಲ್ಲೆಲ್ಲಾ ಬಹಳ ಹೆಸರುವಾಸಿ. ಸಂಗೀತವು ಯಾವಾಗಲೂ ಒಂದು ಚೌಕಟ್ಟಿನಲ್ಲಿದ್ದು, ಅದಕ್ಕೆ ತಕ್ಕ ಮನೋಧರ್ಮವಿದ್ದರೆ ಮಾತ್ರ ಸಂಗೀತವು ಕಳೆಕಟ್ಟುವುದೆನ್ನುವುದು ಅವರ ನಿಲುವು. ಮತ್ತೆ ಇದೇ ನಿಲುವನ್ನು ಕಡೆಯತನಕ ಪಾಲಿಸುತ್ತಾ ಬಂದವರು ಡಾ ಶ್ರೀಕಂಠನ್.

ಹಾಡುವಾಗ ಅಂಥ ಕಂಚಿನ ಕಂಠವಿದ್ದ ಡಾ ಶ್ರೀಕಂಠನ್, ಈ ಕಂಠವನ್ನು ಅದೇ ರೀತಿಯಲ್ಲಿ ಉಳಿಸಿಕೊಳ್ಳಲು ಬಹಳ ಶಿಸ್ತಿನ ಜೀವನ ನಡೆಸಿದವರು. ಎಷ್ಟು ಬೇಕೋ ಅಷ್ಟೇ ಮಾತು. ದಾಸರ, ಶರಣರ ಮತ್ತಿತರ ಸಂತರ ಸಾಹಿತ್ಯಗಳನ್ನೇ ಹಾಡುತ್ತಿದ್ದ ಅವರು, ಆ ಮಹಾನುಭಾವರುಗಳ ಮಾತುಗಳಲ್ಲಿರುವ ಸಾರವನ್ನು ತಿಳಿದು ಅಂತೆಯೇ ನಡೆದುಕೊಂಡಿದ್ದರಲ್ಲಿ ಆಶ್ಚರ್ಯವೇನಿದೆ?

ಕನ್ನಡದಲ್ಲಿರುವ ಹರಿದಾಸರ ಅನೇಕ ರಚನೆಗಳಿಗೆ ತಕ್ಕ ರಾಗವನ್ನು ಅಳವಡಿಸಿ ಅವುಗಳನ್ನು ಕರ್ನಾಟಕದ ಹೊರಗಡೆಯಲ್ಲೂ ಪ್ರಚಾರಕ್ಕೆ ತಂದಿದ್ದರಲ್ಲಿ ಡಾ.ಶ್ರೀಕಂಠನ್ ಅವರದು ಮುಖ್ಯ ಪಾತ್ರ. ಅದಲ್ಲದೇ, ಹಲವಾರು ಉತ್ತಮ ಸಂಗೀತಗಾರರು ಇವರ ಗರಡಿಯಲ್ಲೇ ಪಳಗಿದವರು - ಅವರ ಮಗ ಆರ್ ಎಸ್ ರಮಾಕಾಂತ್, ದಿ.ಎಚ್ ಕೆ ನಾರಾಯಣ, ಎಮ್ ಎಸ್ ಶೀಲಾ, ಟಿ ಎಸ್ ಸತ್ಯವತಿ ಮೊದಲಾದ ವಿದ್ವಾಂಸ ವಿದುಷಿಯರು ಶ್ರೀ ಆರ್ ಕೆ ಶ್ರೀಕಂಠನ್ ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬಲ್ಲ ಸಮರ್ಥರು.

ಶ್ರೀಕಂಠನ್ ಅವರ ಸಂಗೀತವನ್ನು ಮೊದಲು ನಾನು ಕೇಳಿದ್ದು ನಾನು ಚಿಕ್ಕ ಹುಡುಗನಾಗಿದ್ದಾಗಲೇ. ಆಕಾಶವಾಣಿಯ 'ಗಾನವಿಹಾರ' ಸಂಗೀತ ಪಾಠದಲ್ಲಿ. ನಂತರ ನಮ್ಮೂರಿನಲ್ಲಿ ಗಣಪತಿ ಉತ್ನವ ಅಥವಾ ರಾಮನವಮಿ ಉತ್ಸವಗಳಲ್ಲಿ ಶ್ರೀಕಂಠನ್ ಅವರ ಹಲವು ಕಛೇರಿಗಳನ್ನು ಕೇಳಿದ್ದರೂ, ಅವರನ್ನು ಹತ್ತಿರದಿಂದ ಕಂಡು ಮಾತಾಡಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೇ ಎಂದು ನನ್ನೆಣಿಕೆ. 2008ರಲ್ಲಿ ಕನ್ನಡಕೂಟದ ಸ್ವರ್ಣಸೇತುವಿಗಾಗಿ, ಅವರ ಸಂದರ್ಶನವನ್ನೂ ಮಾಡಿದ್ದು ಇನ್ನೂ ಮನದಲ್ಲಿ ಅಚ್ಚೊತ್ತಿದೆ.

ಶ್ರೀಕಂಠನ್ ಅವರನ್ನು ಕಳೆದುಕೊಂಡ ಸಂಗೀತ ಪ್ರಪಂಚ ಬಡವಾಗಿದ್ದು ನಿಜ, ಆದರೆ.  ಶ್ರೀಕಂಠನ್ ಅವರ ಸಂಗೀತ ಎಂದಿಗೂ ನಿಲ್ಲುವಂತಹದು ಎನ್ನುವುದೂ ಅಷ್ಟೇ ನಿಜ! ಒಂದು ತಲೆಮಾರಿಗೆಲ್ಲ ಇಂಥಾ ಸಂಗೀತಗಾರರು ಒಬ್ಬರೋ ಇಬ್ಬರೋ ಸಿಕ್ಕಬಹುದು. ಅಂಥವರ ಕಾಲದಲ್ಲೇ ನಾವೂ ಇದ್ದೇವೆ ಅನ್ನುವುದೇ ಸಂತೋಷಕ್ಕೆ ಕಾರಣವಲ್ಲವೇ?

ಒಂದು ಸುಂದರ ದೇವರನಾಮದ ಮುದ್ರಿಕೆಯನ್ನು ಈಗ ಕೇಳಿ, ಆನಂದಿಸಿ!ಹಿಂದೆ ಡಾ. ಶ್ರೀಕಂಠನ್ ಅವರೊಡನೆ ಮಾಡಿದ ಎರಡು ಸಂದರ್ಶನಗಳು ಇಲ್ಲಿವೆ - ಆಸಕ್ತರಿಗೆಂದು ಕೊಂಡಿಯನ್ನು ಹಂಚಿಕೊಳ್ಳುತ್ತಿದ್ದೇನೆ.

ಕನ್ನಡದಲ್ಲಿ:


-ಹಂಸಾನಂದಿ


Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?