ಗ್ರಹಣ ಚಕ್ರ


ಇವತ್ತು, ಅಂದರೆ, ಮಾರ್ಚ್ ೮/೯, ೨೦೧೬, ಪೂರ್ಣ ಸೂರ್ಯ ಗ್ರಹಣ ಆಗ್ನೇಯ ಏಷ್ಯಾದಲ್ಲಿ ಕಾಣುತ್ತೆ. ಭಾರತಕ್ಕೆ ಪೂರ್ಣ ಸೂರ್ಯಗ್ರಹಣದ ಭಾಗ್ಯವಿಲ್ಲದಿದ್ದರೂ ಭಾಗಶಃ ಗ್ರಹಣವಾಗಿರುವ ಸೂರ್ಯ ಹುಟ್ಟುವುದೇ ವಿಶೇಷ. ಪೂರ್ವಾಕಾಶ ಕಂಡರೆ, ಮೋಡವಿಲ್ಲದಿದ್ದರೆ ಬೆಳಗ್ಗೆ ಬೇಗನೆದ್ದು ನೋಡುವುದನ್ನು ಮರೆಯದಿರಿ, ಮರೆತು ನಿರಾಶರಾಗದಿರಿ!

ಈ  ಸೂರ್ಯ ಗ್ರಹಣ ಆಗೋದು ಭೂಮಿ ಮೇಲಿರೋವರ ಸೌಭಾಗ್ಯ. ಯಾಕಂದ್ರೆ, ಎರಡು ಉಪಗ್ರಹಗಳಿರೋ ಮಂಗಳನಲ್ಲೇ ಆಗಲಿ, ಎಂಟು ಹತ್ತು ಇಪ್ಪತ್ತು ಉಪಗ್ರಹಗಳಿರೋ ಗುರು ಶನಿ ಅಂತಹ ಗ್ರಹಗಳಲ್ಲೇ ಆಗಲಿ ಈ ರೀತಿ ಸೂರ್ಯ ಗ್ರಹಣ ಆಗೋದಿಲ್ಲ.

ಸೂರ್ಯ ಚಂದ್ರನಿಗಿಂತ ಸುಮಾರು ನಾನೂರರಷ್ಟು ದೊಡ್ಡವನು. ಹಾಗೇ ಚಂದ್ರ ಭೂಮಿಗಿರೋ ದೂರ ಲೆಕ್ಕ ಹಾಕ್ಕೊಂಡ್ರೆ, ಸುಮಾರು ನಾನೂರರಷ್ಟು ಹೆಚ್ಚು ದೂರದಲ್ಲಿದ್ದಾನೆ. ಹಾಗಾಗಿ ಭೂಮಿಯಿಂದ ನೋಡಿದಾಗ ಈ ಎರಡೂ ಕಾಯಗಳು ನಮಗೆ ಸುಮಾರು ಒಂದೇ ಅಳತೆಯಲ್ಲಿ ಕಾಣುತ್ತವೆ. ಅಲ್ಲದೆ, ಅವೆರಡರ ಪಾತಳೀನೂ ಒಂದಕ್ಕೊಂದು ಓರೆಯಾಗಿದ್ರೂ, ಒಂದನ್ನೊಂದು ಅಡ್ಡ ಹಾಯೋ ಸಮಯದಲ್ಲಿ ಎರಡೂ ಒಂದೇ ಕಡೆಯಲ್ಲಿದ್ದರೆ  ಗ್ರಹಣ ಆಗುತ್ತೆ. ಬೇರೆ ಗ್ರಹಗಳಲ್ಲಿ, ಅವುಗಳ ಉಪಗ್ರಹಗಳಿಗೂ, ಸೂರ್ಯನಿಗೂ ಈ ರೀತಿಯ  ಕರಾರುವಾಕ್ಕಾದ ಸಂಬಂಧ ಇಲ್ಲದಿರುವುದರಿಂದ ಇಂತಹ ಸೂರ್ಯ ಗ್ರಹಣಗಳು ಆಗೋಲ್ಲ!

ಈ ಗ್ರಹಣಗಳು ಹದಿನೆಂಟು ವರ್ಷ ೧೦ ದಿನಕ್ಕೆ ಮತ್ತೆ ಮರಳಿ ಬರುತ್ತವೆ ಅನ್ನುವ ವಿಷಯ ಗೊತ್ತಿತ್ತೇ ನಿಮಗೆ? ಇದಕ್ಕೆ ಸೆರಾಸ್ ಸೈಕಲ್ (Saros Cycle) ಎಂದು ಹೆಸರು. ಸೂರ್ಯ ಗ್ರಹಣ ಆಗುವಾಗ, ಸೂರ್ಯ ಚಂದ್ರರಿಬ್ಬರೂ  ರಾಹು ಅಥವಾ ಕೇತು ಬಿಂದುಗಳಲ್ಲಿ ಒಟ್ಟಿಗೇ ಇರಬೇಕು. ಈ ರಾಹು ಕೇತು ಬಿಂದುಗಳೂ ಸುಮಾರು ಹದಿನೆಂಟೂವರೆ ವರ್ಷದಲ್ಲಿ ಅಪ್ರದಕ್ಷಿಣವಾಗಿ ಆಕಾಶದಲ್ಲಿ ಸುತ್ತುತ್ತಾ ಇರುವಂತೆ ಕಾಣುತ್ತವೆ. ಸೂರ್ಯ ಆಕಾಶದಲ್ಲಿ ನಕ್ಷತ್ರಗಳ ಹಿನ್ನಲೆಯಲ್ಲಿ ಒಂದು ಪ್ರದಕ್ಷಿಣೆ ಮಾಡುವ ಕಾಲವೇ ಒಂದು ವರ್ಷ ( ೩೬೫,.೨೫ ದಿನ). ರಾಹು ಕೇತು ಬಿಂದುಗಳು ಅಪ್ರದಕ್ಷಿಣವಾಗಿ ಸುತ್ತಿದಂತೆ ಕಾಣುವುದರಿಂದ, ಈ ವರ್ಷ ಸೂರ್ಯನ ಜೊತೆಯಲ್ಲಿದ್ದ ರಾಹು ಮತ್ತೆ ಸೂರ್ಯ ಸುತ್ತಿ ಬರುವ ಹೊತ್ತಿಗೆ ಸ್ವಲ್ಪ ಹಿಂದೆ ಹೋಗಿರುತ್ತದೆ ( ಸುಮಾರ ೧/೧೮ * ೩೬೦ ಅಂಶಗಳಷ್ಟು). ಅದಕ್ಕೇ ಇವತ್ತು ಸೂರ್ಯ ರಾಹು/ಕೇತುವಿನಲ್ಲಿ (ಅಥವಾ ರಾಹುವಿನ ಮುಂದೆ/ಹಿಂದೆ ಇದಾನೆ ಅಂದ್ಕೊಂಡ್ರೆ, ಮತ್ತೆ ಅವನು ರಾಹು/ಕೇತುವಿಗೆ ಸಿಗೋ ಹೊತ್ತಿಗೆ ಒಂದು ವರ್ಷಕ್ಕಿಂತ ಕಮ್ಮಿ ವೇಳೆ ಆಗಬೇಕು ಅನ್ನುವುದು ಎಲ್ಲರಿಗೂ ತಿಳಿಯುವ ವಿಚಾರವೇ. ಇದು ಸುಮಾರಾಗಿ ೩೪೬.೬ ದಿವಸಕ್ಕೇ ಆಗತ್ತೆ. ಇದನ್ನ ಡ್ರೆಕೋನಿಯನ್ ವರ್ಷ ಅಂತಾರೆ - ಕನ್ನಡದಲ್ಲಿ ನಾವು ಸರಳವಾಗಿ, ರಾಹು-ಕೇತುವರ್ಷ ಅನ್ಬಹುದೇನೋ.

ಇನ್ನು ಚಂದ್ರ-ಸೂರ್ಯ ಒಟ್ಟಿಗೆ ಬರೋದು ಅಮಾವಾಸ್ಯೆಯ ದಿವಸ ಅನ್ನೋದು ಎಲ್ಲರಿಗೂ ಗೊತ್ತು. ಇದೇ ಒಂದು ಚಾಂದ್ರಮಾನ ತಿಂಗಳು. ಈ ಅವಧಿ ಸುಮಾರಾಗಿ ೨೯.೫ ದಿವಸದಷ್ಟು ಉದ್ದ ಇರತ್ತೆ. ಹಾಗೇ, ಚಂದ್ರ, ಒಂದು ನಕ್ಷತ್ರದಿಂದ ಹೊರಟು ಮತ್ತೆ ಮರಳಿ ಅಲ್ಲಿಗೇ ಬರೋದಕ್ಕೆ, ಮತ್ತೆ ಇಲ್ಲಿ ರಾಹು (ಅಥವಾ ಕೇತು)ವಿನಿಂದ ಹೊರಟು ಮತ್ತೆ ಅಲ್ಲಿಗೇ ಬರೋದಕ್ಕೆ ಬರೋ ಕಾಲ ೨೭.೨ ದಿವಸ. (ನಿಂತಿರೋ ನಕ್ಷತ್ರಕ್ಕೆ ಹೋಲಿಸಿದರೆ, ರಾಹು/ಕೇತುವನ್ನ ಮುಟ್ಟೋ ಅವಧಿ  ಇನ್ನೊಂದು  ಸ್ವಲ್ಪ ಕಡಿಮೆ ಇರುತ್ತೆ. ಯಾಕೆ ಅನ್ನೋದನ್ನ ನೀವೇ ಯೋಚಿಸಿ! ಇದನ್ನ ನಾವು ರಾಹುಕೇತು ಮಾಸ ಅನ್ನೋಣ (ಡ್ರೆಕೋನಿಕ್ ಮಂತ್).

ಈಗ ನೋಡಿ ತಮಾಷೆ:

೧೯ ರಾಹುಕೇತುವರ್ಷಗಳು = ೧೯ * ೩೪೬.೪ = ೬೫೮೫.೭೮ ದಿನ
೨೪೨ ರಾಹುಕೇತುಮಾಸಗಳು = ೨೪೨ * ೨೭.೨ = ೬೫೮೫.೩೬ ದಿನ
೨೨೩ ಚಾಂದ್ರಮಾನಮಾಸಗಳು= ೨೨೩ *೨೯.೫ = ೬೫೮೫.೩೨ ದಿನ

ಈ ಮೂರೂ ಸುಮಾರು ಹತ್ತು ಗಂಟೆಯೊಳಗಿನ ಅವಧಿಯೊಳಗೇ ಬರುತ್ತದೆ ಅಲ್ಲವೇ?

ನೋಡಿ ಈಗ ಏನಾಯ್ತು. ಇವತ್ತು ಸೂರ್ಯ ಚಂದ್ರ ಎರಡೂ ರಾಹು ಬಿಂದುವಿನಲ್ಲಿದ್ರು ಅಂದ್ಕೊಳಿ. ಅಂದ್ರೆ ಇವತ್ತು ಅಮಾವಾಸ್ಯೆ ಆಗಿತ್ತು. ಆಗ ೬೫೮೫ ದಿವಸ ಆದಮೇಲೆ ಮತ್ತೆ ಸೂರ್ಯ ಚಂದ್ರ ಎರಡೂ ರಾಹುವಿನಲ್ಲೇ ಇರ್ತಾರೆ, ಮತ್ತೆ ಅಮಾವಾಸ್ಯೆಯೇ ಆಗಿರುತ್ತದೆ. ಇದೇ ನೋಡಿ ಗ್ರಹಣ ಚಕ್ರದ ಒಳಗುಟ್ಟು.

ಇಷ್ಟೆಲ್ಲಾ ವಿವರ ಯಾಕಂದ್ರೆ, ಕರ್ನಾಟಕದಲ್ಲಿ ಹಿಂದಿನ ಬಾರಿ ಪೂರ್ಣಸೂರ್ಯ ಗ್ರಹಣ ಆಗಿದ್ದು ೧೯೮೦ ಫೆಬ್ರವರಿ ೧೬ರಂದು.  ಆ ದಿವಸ ಕಾರವಾರ ಹುಬ್ಬಳ್ಳಿ ರಾಯಚೂರು ಮೊದಲಾಗಿ ಉತ್ತರ ಕರ್ನಾಟಕದ ಹಲವು ಊರುಗಳಲ್ಲಿ ಪೂರ್ಣಗ್ರಹಣದ ಸುಂದರ ನೋಟ ಕಂಡಿತ್ತು. ಆ ಗ್ರಹಣದಿಂದ ಇವತ್ತಿನ ಗ್ರಹಣಕ್ಕೆ ಎರಡು ಸೆರಾಸ್ ಸೈಕಲ್ ಆಗಿವೆ. ( ೩೬ ವರ್ಷ, ೨೦ ದಿನ) - ಮತ್ತೆ ಇವತ್ತು ಕೂಡ ಗ್ರಹಣ ನಡೆಯುತ್ತಿದೆ. ಇದೇ ಚಕ್ರದ ಮುಂದಿನ ಗ್ರಹಣ ೨೦೩೪ರ ಮಾರ್ಚ್ ೨೦ರಂದು ನಡೆಯಲಿದೆ.

-ಹಂಸಾನಂದಿ

ಕೊ: ಇದು ಹಿಂದೆ ಬರೆದಿದ್ದ ಬರಹವೊಂದರ ಸಂಕ್ಷಿಪ್ತ ರೂಪ, ಇಂದು ನಡೆಯುವ ಗ್ರಹಣದ ಸಂದರ್ಭದಲ್ಲಿ, ಸ್ವಲ್ಪ ಹೆಚ್ಚಿನ ಮಾಹಿತಿಗಳನ್ನು ಸೇರಿಸಿದ್ದೇನೆ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ