ಅರ್ಧನಾರೀಶ್ವರತಿನ್ನಲಿಕೆ ಬಿಕ್ಕೆಯಲಿ ಇಬ್ಬರ ಜೀವ ಸಾಗುವುದೆಂತಿದು?
ಎನ್ನುತಲಿ ಯೋಚಿಸುತ ಕೂಡಲೆ ಮುಡಿವನೊಂದನು ಮಾಡುತ
ಮುನ್ನವೊಂದಾಗಿಹೆವು ಎಂತೋ ಪ್ರೀತಿತುಂಬಿದೆ ಮನದಲಿ
ಇನ್ನು ಒಂದೇ ದೇಹವಿರಲೆಂದೆಂಬ ಜೋಡಿಯೆ ಕಾಯಲಿ

ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ.ಶಂಕರ್ ರಾಜಾರಾಮನ್ ಅವರದ್ದು) :

इयत्या भिक्षया नेया लोकयात्रा द्वयोरिति ।
हृदयैक्यमनु प्राप्तौ शरीरैक्यं शिवौ नुमः ॥

ಇಯತ್ಯಾ ಭಿಕ್ಷಯಾ ನೇಯಾ ಲೋಕಯಾತ್ರಾ ದ್ವಯೋರಿತಿ |
ಹೃದಯೈಕ್ಯಮನು ಪ್ರಾಪ್ತೌ ಶರೀರೈಕ್ಯಂ ಶಿವೌ ನುಮಃ ||

-ಹಂಸಾನಂದಿ

ಕೊ: ಶಿವನು ಭಿಕ್ಷಾಪಾತೆಯನ್ನು ಹಿಡಿದವನೆಂಬುದು ತಿಳಿದ ವಿಷಯವೇ. ಇವನು ಮದುವೆಯಾದ ಮೇಲೆ ಇಬ್ಬರಿಗೂ ಭಿಕ್ಷೆ ಬೇಡಿ ಜೀವ ಸಾಗಿಸುವುದು ಕಷ್ಟವೋ ಎಂಬಂತೆ , ಆ ಶಿವಪಾರ್ವತಿಯರು ಒಂದೇ ದೇಹದಲ್ಲಿ ಅರ್ಧ ಅರ್ಧ ರೂಪ ಹೊಂದಿದ ಶರೀರಿಯಾದರು ಎಂಬುದು ಕವಿಯ ಆಶಯ.

ಕೊ.ಕೊ: ಮೂಲವು ಅನುಷ್ಟುಪ್ ಛಂದಸ್ಸಿನಲ್ಲಿದೆ. ಅನುವಾದವು ಮಾತ್ರಾ ಮಲ್ಲಿಕಾಮಾಲೆಯಲ್ಲಿದೆ.

ಕೊ.ಕೊ.ಕೊ: ಮೂಲವು ಎರಡೇ ಸಾಲಿನಲ್ಲಿ ಇದ್ದರೆ ಅನುವಾದವು ನಾಲ್ಕು ಸಾಲುಗಳಲ್ಲಿರುವುದನ್ನು ನೀವು ಗಮನಿಸಿರಬಹುದು. ಸಂಸ್ಕೃತದಲ್ಲಿ ಕೆಲವು ವಿಷಯಗಳನ್ನು ಬಹಳ ಚಿಕ್ಕದಾಗಿ ಹೇಳಲು ಸಾಧ್ಯ. ಅದೇ ಅಂಶವನ್ನು ಬೇರೆ ಭಾಷೆಗಳಲ್ಲಿ ಹೊರತರುವಾಗ ಅಷ್ಟು ಚಿಕ್ಕದಾಗಿ ಮಾಡುವುದು ಕಷ್ಟ. ಹಾಗಾಗಿ ಕೆಲವು ಅಂಶಗಳನ್ನು ವಿಸ್ತರಿಸಿ ಹೇಳಿದ್ದೇನೆ. ಅಲ್ಲದೇ ಮೂಲದಲ್ಲಿ ಶಿವ ಪಾರ್ವತಿಯರಿಗೆ ಕವಿ ತಲೆಬಾಗುತ್ತಿದ್ದರೆ, ಕನ್ನಡದಲ್ಲಿ ಅದು ಶಿವಪಾರ್ವತಿಯರು ಎಲ್ಲರನ್ನೂ ಕಾಪಾಡಲಿ ಎಂಬ ಆಶಯವಾಗಿ ಬದಲಾಗಿದೆ. ಇಂತಹ imperfect  ಅನುವಾದಗಳಿಗೆ "ಛಾಯೆ" ಎಂದು ಹೆಸರು. ಅಂದರೆ ಮೂಲದಲ್ಲಿ ಇರುವುದನ್ನೇ, ಅದರ ನೆರಳಿನಂತೆ , ಆದರೆ ನೇರ ಮೂಲದಲ್ಲಿ ಇರುವಂತೆ ಅಲ್ಲದೇ ಹೇಳುವುದು ಎಂದರ್ಥ. 

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?