ದ್ರೌಪದೀ ಸ್ವಯಂವರ

ಇವತ್ತು ಹೋಳಿ ಹುಣ್ಣಿಮೆ. ಕಾಮನ ಹಬ್ಬ.  ಕೆಲವು ವರ್ಷಗಳ ಹಿಂದೆ ಇದೇ ದಿನ ನಾನು ಸೀತಾ ಸ್ವಯಂವರದ ಬಗ್ಗೆ ಒಂದು ನೀಳ್ಗವಿತೆಯನ್ನು ಬರೆದಿದ್ದೆ.  ಕಾಕತಾಳೀಯವಾಗಿ, ಇವತ್ತು ಅದೇ ದಿವಸ, ದ್ರೌಪದಿಯ ಸ್ವಯಂವರದ ಬಗ್ಗೆ ಬರೆಯುವ ಅವಕಾಶ ಸಿಕ್ಕಿತು!

ಅದರಲ್ಲೂ , ಗೆಳೆಯರಾದ ಕಲಾವಿದ ರಾಜೇಶ್ ಶ್ರೀವತ್ಸ ಅವರು, ಈ ಪದ್ಯಗಳಿಗೆ ಕಣ್ಣಿಗೆ ಕಟ್ಟುವಂತಹ ದ್ರೌಪದಿಯನ್ನು ಚಿತ್ರಿಸಿರುವುದು ನನ್ನ ಅದೃಷ್ಟವೇ ಸರಿ. ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ.


ಮೆಲ್ಲನಡಿಗೆಯ ಪುಲ್ಲಲೋಚನೆ ಹೆಜ್ಜೆಯಿಡುತಿರೆ ಚೆಂದದಿಂ l
ಘಲ್ಲುಘಲ್ಲನೆ ನುಡಿದಿರಲು ನಲ್ಗೆಜ್ಜೆ ಪಾದದೊಳಿಂಪಿನಿಂ l
ಝಲ್ಲುಝಲ್ಲೆನೆ ಅರಸುಕುವರರ ಗಟ್ಟಿಯದೆಯೂ ತವಕದಿಂ l
ಕೊಲ್ಲುತಿಹಳೀ ದ್ರೌಪದಿಯು ಭಾರತದ ಯುದ್ಧಕೆ ಮೊದಲಿನಿಂ ll

ಇಂಚರವು ಕೇಳಿರಲು ಘಲ್ಲೆನುತಿರುವ ಗೆಜ್ಜೆಯ ಸಂಗಡ l
ಕೊಂಚೆ ನಡಿಗೆಯ ದುರುಪದಿಯು ಕಾಣದಿರೆ ತಳಮಳಗೊಳ್ಳುತ l
ಮಿಂಚು ಬಂದುದೆ? ಬೇಸಿಗೆಯಲಿದೇನಿದುವೆ ಅಚ್ಚರಿಯನ್ನುತ l
ಕೊಂಚ ಮರುಳಾಗಿಹರು ನೆರೆದಿಹ ರಾಜ ಕುವರರು ಖಂಡಿತ ll

ತರುಣಿ ದುರುಪದಿ ಮಾಲೆ ಹಿಡಿಯುತ
ಬರುತಲಿರೆ ಮೆಲುನಡಿಗೆಯಲಿ ತಾ
ಸಿರಿಯೆ ಹೊಕ್ಕಂತಾದುದೈ ಕೇಳ್ ಸಭೆಯ ಮಂಟಪದಿ l
ಅರಸಕುವರರು ಕಣ್ಣ ಕೋರೈ-
ಸಿರುವ ಕಾಂತಿಯ ತನುವ ನೋಡುತ
ಕೊರಗಿದರು ದುಃಶಕ್ಯವೀಕೆಯ ಪಡೆಯುವುದೆನ್ನುತಲಿ ll

-ಹಂಸಾನಂದಿ

ಕೊ: ಮೊದಲೆರಡು ಪದ್ಯಗಳು ’ಭಾಮಿನೀಗತಿಯ’ ಮಾತ್ರಾ ಮಲ್ಲಿಕಾಮಾಲೆಯಲ್ಲಿದ್ದರೆ, ಕೊನೆಯ ಪದ್ಯವು ಭಾಮಿನಿ ಷಟ್ಪದಿಯಲ್ಲಿದೆ


Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?