ಪಂಚವಟಿಯಲ್ಲಿ ಮೊದಲ ದಿನರಾಮ ಸೀತೆ ಲಕ್ಷ್ಮಣರು ಪಂಚವಟಿಯಲ್ಲಿ ಕೆಲಕಾಲವಿದ್ದ ಕಥೆ ಯಾರಿಗೆ ಗೊತ್ತಿಲ್ಲ?  ಕಲಾವಿದ ರಮೇಶ್ ಆಚಾರ್ಯ ಅವರ, "ಪಂಚವಟಿಯಲ್ಲಿ" ಚಿತ್ರವನ್ನು ನೋಡಿ ಬರೆದ  ನಾಲ್ಕು ಭಾಮಿನಿ ಷಟ್ಪದಿಗಳು ಇಲ್ಲಿವೆ:

ತರುಣಿ ಹರಿಯುವ ನದಿಯ ನೋಡುತ
ಲರುಹಿದಳು ತನ್ನಿನಿಯ ರಾಮಗೆ
ಹರುಷ ತರುವೀ ತಾಣವಿದು ಬಲು ಸೊಗಸುಕಾಣುತಿದೆ|
ಸುರಗಿ ಹೂಗಳು ಬಿರಿದು ಸುತ್ತಲು
ಪರಿಮಳವ ಹರಡಿಹವು ಕೇಳ್ ನಾ-
ವಿರಲಿಕಿದುವೇ ಸೊಗದ ನೆಲೆಯಹುದೆಂದಳಾ ಸೀತೆ || 1 ||

ಇಳೆಯ ತನುಜೆಯ ಕೂಡೆ ರಾಮನು
ಬಳಿಯ ಗೋದಾವರಿಯ ದಡದ-
ಲ್ಲಿಳಿದು ನಿಂತನು ಮೆಚ್ಚಿದನು ಎಡೆ ತಕ್ಕುದಹುದೆನುತ |
ಉಳಿದಿರುವ ವನವಾಸ ಕಾಲವ
ಕಳೆಯೆ ಸೊಗವಿದೆನುತಿರೆ ಸುತ್ತಣ
ಗಿಳಿಯವಿಂಡುಗಳಳಿಸಮೂಹವು ಹರ್ಷ ತೋರಿದವು || 2 ||

ಮಡದಿಯಾಸೆಯ ಕೇಳಿ ರಾಮನು
ಸಡಗರವ ತೋರುತಲಿ ಲಕ್ಷ್ಮಣ
ನೊಡನೆ ಅಲ್ಲೇ ಪರ್ಣಕುಟಿಯನು ನಿರ್ಮಿಸಲು ಹೇಳಿ |
ಎಡದ ಕಡೆಯಲಿ ಗೌತಮೀ ನದಿ
ಯೆಡೆಗೆ ಹೆಂಡತಿಯನ್ನು ಕರೆದೊ-
ಯ್ದುಡುಗೊರೆಯನಿತ್ತಿಹನು ಮುಡಿಯಲಿ ಕೇದಗೆಯ ಹೂವ || 3 ||

ಸುಗುಣಿ ಲಕ್ಷ್ಮಣನಣ್ಣನಾಣತಿ
ತೆಗೆದು ಹಾಕುವನೇನುಯೆಂದಿಗು?
ಹೆಗಲ ಮೇಗಡೆ ಹೊತ್ತು ತಂದನು ರೆಂಬೆಕೊಂಬೆಗಳ |
ಹಗಲು ಮೀರುವ ಮುನ್ನ ಕಟ್ಟುತ
ಮುಗಿಸಿ ಹೊಸ ಕುಟಿಯನ್ನು ಕರೆದಿಹ
ಹಗುರ ಮನದಲ್ಲಣ್ಣ ಅತ್ತಿಗೆಯನ್ನೊಳಕೆ ಬರಲು || 4 ||
-ಹಂಸಾನಂದಿ

ಚಿತ್ರ ಕೃಪೆ: ಕಲಾವಿದ ರಮೇಶ್ ಆಚಾರ್ಯ ಅವರ "ಪಂಚವಟಿಯಲ್ಲಿ" ವರ್ಣ ಚಿತ್ರ. 

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ