ತಂಗಿಯಾದಳು ಜಾನಕಿಯು ಪಾಂಚಾಲ ನಂದನೆಗೆ!

ಇವತ್ತು ಬೆಳಗ್ಗೆ ಮಿತ್ರರೊಬ್ಬರು ಹೀಗೊಂದು ಸಾಲು ಕಳಿಸಿ, ಇದು ನಿಜವೇ? ಅಥವಾ ಇದು ಸರಿಯೇ ಅಂತ ಕೇಳಿದರು. ಸಾಲು ಹೀಗಿತ್ತು:
"ತಂಗಿಯಾದಳು ಜಾನಕಿಯು ಪಾಂಚಾಲ ನಂದನೆಗೆ"

ನೋಡಿದೊಡನೆ ಇದು ಏನಿರಬೇಕೆಂದು ಹೊಳೆಯಿತಾದರೂ, ಎಲ್ಲಿ ಸಿಕ್ಕಿತು ಇದು ಅಂತ ಕೇಳಿದೆ. ಇದು ವಾಟ್ಸಪ್ ನಲ್ಲಿ ಹರಿದಾಡುತ್ತಿದೆ, ಇಬ್ಬರು ಮೂರು ಜನ ಇದನ್ನು ಕಳಿಸಿದ್ದಾರೆ, ಹೀಗೇನಾದರೂ ಮಹಾಭಾರತ ರಾಮಾಯಣಗಳಲ್ಲಿ ಕಥೆ ಇದೆಯೇನು ಅಂತ ಕೇಳಿದರು..

ಧಾಟಿ ನೋಡಿದೊಡನೆ ಇದು ಸಮಸ್ಯಾಪೂರಣದ ಸಾಲು, ಭಾಮಿನಿಷಟ್ಪದಿಯಲ್ಲಿದೆ ಅಂತ ಗೊತ್ತಾಗಿದ್ದರಿಂದ ಆಫೀಸಿಗೆ ಡ್ರೈವ್ ಮಾಡುತ್ತ ಸ್ವಲ್ಪ ಯೋಚಿಸುತ್ತಾ ಪ್ರಾಸದ ಪದಗಳನ್ನಿಡುತ್ತಾ ಬಂದೆ. ಬಂದಕೂಡಲೆ ಬರೆದ ಪದ್ಯವಿದು:

ಅಂಗಿತೊಟ್ಟಿರೆ ಸಿಂಗದಾ ಮರಿ
ಮಂಗವಿಕ್ಕಿರೆ ರಂಗವಲ್ಲಿಯ
ಸಂಗತಿಯು ಕೇಳ್ವುದಕೆ ಸೈ! ದಿಟದಲ್ಲಿ ನಡೆಯುವುದೆ?
ಪುಂಗಿ ಬಾರಿಸಿ ಕರಿಯ ಪಳಗಿಸೆ
ಹೊಂಗೆಮರದಲ್ಲಿಂಗು ಬೆಳೆದಿರೆ
ತಂಗಿಯಾದಳು ಜಾನಕಿಯು ಪಾಂಚಾಲ ನಂದನೆಗೆ!

ಈ ರೀತಿ ಸಮಸ್ಯಾ ಪೂರಣಗಳಲ್ಲಿ ಅರ್ಥವಿಲ್ಲದಂತಹ ಸಾಲನ್ನು ಕೊಟ್ಟು ಅದನ್ನು ಸಮರ್ಥಿಸುವಂತೆ ಕೇಳುವುದೇ ವಿಶೇಷ. ಇದರಲ್ಲಿ ಮೊದಲ ಪದಕ್ಕೆ ಪದವೊಂದನ್ನೋ, ಅಕ್ಷರವೊಂದನ್ನೋ ಸೇರಿಸಿ ಅರ್ಥ ಬದಲಾಯಿಸುವುದು ಒಂದು ವಿಧಾನವಾದರೆ ( ಉದಾ: ಕಂತಿಯ ಪ್ರಸಿದ್ಧ ಪೂರಣ - ಇಲಿಯಂ ತಿಂಬುದ ಕಂಡೆ ಜೈನರ ಮನೆಯೊಳ್ ಅನ್ನು ಚೆಕ್ಕಿಲಿಯಂ ತಿಂಬುದ ಕಂಡೆ ಜೈನರ ಮನೆಯೊಳ್ ಎಂದು ಬದಲಾಯಿಸಿದಂತೆ), ಅನರ್ಥಕಾರಿಯಾದ ಸಾಲಿನಂತಹದ್ದೇ ಇನ್ನೊಂದಷ್ಟು ಉದಾಹರಣೆಗಳನ್ನು ಸೇರಿಸಿ ಅವುಗಳನ್ನು ಬೆಸೆಯುವುದು ಇನ್ನೊಂದು ಬಗೆಯ ಪೂರಣ ವಿಧಾನ (ಕುಂತೀ ಸುತೋ ರಾವಣ ಕುಂಭಕರ್ಣಃ, ಅಥವಾ ತಕ್ರಂ ಶಕ್ರಸ್ಯ ದುರ್ಲಭಂ ಎಂಬ ಪ್ರಸಿದ್ಧ ಪೂರಣಗಳಂತೆ, ಅಥವಾ ’ಕನ್ನಡ ಬರ್ದೋನು ಕೋಡಂಗಿ’ ಎಂಬ ಅಪ್ರಸಿದ್ಧ ಪೂರಣದಂತೆ wink emoticon ).
ಇಂಥ ಪೂರಣಗಳನ್ನು ಮಾಡುವಾಗ ಇದು ಅಂತಹದ್ದೇನೂ ಘನವಾದ ವಸ್ತುವಲ್ಲದಿದ್ದರೂ ಕೆಲವು ಶಬ್ದಾಲಂಕಾರಗಳನ್ನು ಬಳಸಿದ್ದರೆ, ಗಿಲೀಟು ಒಡವೆಗೆ, ಚಿನ್ನದ ನೀರು ಹಾಕಿ ಹೊಳಪು ಕೊಟ್ಟಂತೆ ಎಂದು ಅಂಗಿ-ಸಿಂಗ, ಮಂಗ-ರಂಗ, ಹೊಂಗೆ-ಇಂಗು ಮೊದಲಾದ ಅನುಪ್ರಾಸಗಳನ್ನೂ ಬಳಸಿದ್ದೇನೆ.

ಕಾಡಿನಲ್ಲಿರುವ ಸಿಂಹದ ಮರಿ ಬಟ್ಟೆ ತೊಟ್ಟಿದೆ ಎಂದರೆ, ಮರದ ಮೇಲಿನ ಮಂಗ ಮನೆಯಮುಂದೆ ರಂಗೋಲಿ ಹಾಕಿತು ಎಂದರೆ, ಇವನ್ನೆಲ್ಲ ಸುಮ್ಮನೆ ತಮಾಷೆಯೆಂದು ಕೇಳಬಹುದಷ್ಟೇ ಅಲ್ಲದೆ ನಿಜದಲ್ಲಿ ನಡೆಯುವುದೇನು? ಹಾಗೇ ಹಾವನ್ನು ಪುಂಗಿ ಊದಿ ತಲೆಆಡಿಸುವಂತೆ ಮಾಡಬಹುದೇ ಹೊರತು ಆನೆಯನ್ನು ಮಾಡಬಹುದು ಎಂದರೆ, ಹೊಂಗೆಯ ಮರದಲ್ಲಿ ಇಂಗು ಬಿಡುತ್ತದೆ ಎಂದರೆ (ಇಂಗು ಕೂಡ ಒಂದು ಸಸ್ಯದ ಬೇರಿಂದ ಬರುವಂತಹುದೇ), ಆಗ ಸೀತೆಯೂ ದ್ರೌಪದಿಯ ತಂಗಿ ಅನ್ನುವುದನ್ನೂ ನಂಬಬಹುದು ಪದ್ಯದ ಭಾವ.

-ಹಂಸಾನಂದಿ

ಕೊ: ಪಾಂಚಾಲ ನಂದನೆ = ಪಾಂಚಾಲ ರಾಜ್ಯದ ರಾಜ ದ್ರುಪದನ ಮಗಳು, ದ್ರೌಪದಿ)

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?