ಸಂಸ್ಕೃತ ಪ್ರಾಕೃತಗಳ ಸಂಬಂಧ: ಒಂದು ಒಳನೋಟ

ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳ ಸಂಬಂಧ ಬಹು ಚರ್ಚಿತ ವಿಷಯ. ಕೆಲವು ತಿಂಗಳ ಹಿಂದೆ ತುಸು ಈ ಬಗ್ಗೆ "ಸಂಸ್ಕೃತದ ಸುತ್ತ ತಪ್ಪು ಗ್ರಹಿಕೆಯ ಹುತ್ತ" ಎಂಬ ಒಂದು ಬ್ಲಾಗ್ ಬರಹದಲ್ಲಿ ವಿವರಿಸಿದ್ದೆ. ಈಚೆಗೆ ಕೆಲವು ದಿವಸಗಳ ಹಿಂದೆ ಓದಿದ ಇನ್ನೊಂದು ಬರಹದಿಂದ ಈ ಬಗ್ಗೆ ಇನ್ನೊಂದಷ್ಟು ಟಿಪ್ಪಣಿ ಹಾಕೋಣವೆನ್ನಿಸಿತು.  

ಹಿಂದಿನ ಸಂಸ್ಕೃತ ಗ್ರಂಥಗಳಲ್ಲಿ  "ಪ್ರಕೃತಿಃ ಸಂಸ್ಕೃತಮ್, ತತ್ರ ಭವೇತ್ ಪಾಕೃತಂ" ಅನ್ನುವ ವಿವರಣೆಯನ್ನು ಕಾಣಬಹುದು. ಈ ಮಾತಿನ ಅರ್ಥ ಸಂಸ್ಕೃತ ಭಾಷೆಯ ರೂಪಗಳಾಗಿ, ಅದರಿಂದ ಪ್ರಾಕೃತವು (ಗಳು) ಬಂದಿತು(ಬಂದವು) ಎಂದು. ಮಾತಾಡುವುದಕ್ಕೂ ಪುಸ್ತಕದ ಭಾಷೆಗೂ ವ್ಯತ್ಯಾಸಗಳಿರುವುದು ಹೆಚ್ಚಿನ ಭಾಷೆಗಳಲ್ಲಿ ಕಂಡುಬರುವ ವಿಷಯವೇ ಆದ್ದರಿಂದ, ಕಾಲ ದೇಶಗಳಿಗೆ ತಕ್ಕಂತೆ ಭಾಷೆ ಸ್ವಲ್ಪ ಸ್ವಲ್ಪವಾಗಿ ಮಾರ್ಪಾಡಾಗುವುದೂ ಗೊತ್ತಿರುವ ಸಂಗತಿಯೇ. ಹಾಗಾಗಿ, ಒಂದು ಭಾಷೆಗೆ (ಅಂದರೆ ಇಲ್ಲಿ ಸಂಸ್ಕೃತಕ್ಕೆ) ಹಲವಾರು ಮಾತಾಡುವ ರೂಪಗಳಿದ್ದರೆ (ಅಂದರೆ ಶೌರಸೇನಿ, ಮಾಗಧಿ, ಪಾಲಿ, ಮಹಾರಾಷ್ಟ್ರೀ ಇತ್ಯಾದಿ  ಹೆಸರುಗಳಿಂದ ಪ್ರಖ್ಯಾತವಾದ ಪ್ರಾಕೃತಗಳು) ಅದರಲ್ಲಿ  ಅಷ್ಟಾಗಿ ಅಚ್ಚರಿ ಪಡುವಂಥದ್ದೇನಿಲ್ಲ .

ಈಚೆಗೆ, ಅಂದರೆ ಒಂದು ಸುಮಾರು ೨೦೦ ವರ್ಷಗಳ ಹಿಂದಿನಿಂದ ಪ್ರಾಕೃತವೇ (ಗಳೇ) ಮೊದಲು, ಅವುಗಳನ್ನು "ಸಂಸ್ಕರಿಸಿ" ಸಂಸ್ಕೃತವನ್ನು "ಕಟ್ಟ"ಲಾಯಿತು ಎಂಬ ವಾದ ಬಂದಿರುವುದು ತಿಳಿದ ವಿಷಯವೇ.  ಎಷ್ಟೋ ಜನರು (ಸಂಸ್ಕೃತ  ಅಥವಾ ಪ್ರಾಕೃತ ಎರಡೂ ತಿಳಿಯದೇ ಇದ್ದವರೂ ಇದರಲ್ಲಿ ಸೇರಿದ್ದಾರೆ ಅನ್ನುವುದೂ ಗಮನಿಸಬೇಕಾದ ವಿಷಯ), ಸಂಸ್ಕೃತ ಅನ್ನುವ ಭಾಷೆ ಇರಲೇ ಇಲ್ಲ,  ಆ ಕಾಲದಲ್ಲು ಜನರು ಆಡುತ್ತಿದ್ದ ಪ್ರಾಕೃತವೆಂಬ (ಗಳೆಂಬ) ಭಾಷೆಯನ್ನು ಜರಡಿಯಾಡಿ ಸೋಸಿ ಶುದ್ಧೀಕರಿಸಿ ಒಂದು ಸಂಸ್ಕೃತವೆಂಬ ಕೃತಕವಾದ ಭಾಷೆಯನ್ನು "ಕಟ್ಟಿದರು" ಅನ್ನುವ ಒಂದು ಮೊಂಡು ವಾದವನ್ನು ಮಂಡಿಸಿರುವುದನ್ನೂ ಕಾಣಬಹುದು! ಈ ವಾದ ಹೊಸತಲ್ಲವಾದರೂ,  ಸಾಮಾಜಿಕ ತಾಣಗಳಲ್ಲಿ ಜನರು ಓಡಾಡುವುದು ಹೆಚ್ಚಾಗಿರುವುದರಿಂದ, ಅಲ್ಲೆಲ್ಲಾ ಈ ವಾದಗಳು ಹರಿದಾಡುವುದನ್ನು ನೋಡಿರುವುದರಿಂದ, ಹೆಚ್ಚು ಜನಗಳಿಗೆ ಈ ವಾದ ಈಗ ಪರಿಚಯವಾಗಿದೆ ಅನ್ನಬಹುದು.

ನನ್ನ ಮಟ್ಟಿಗೆ ಹೇಳುವುದಾದರೆ,  ಇವೆಲ್ಲ ಕೇವಲ ಇಂಗ್ಲಿಷ್  ನಲ್ಲಿರುವ ಅನುವಾದಗಳನ್ನು, ಅಥವಾ ವಾದಗಳನ್ನು ಓದಿಕೊಂಡು, ಯಾವುದೇ ಮೂಲಗಳನ್ನೂ ನೋಡದೇ ಮಾಡದೇ, ಅರೆ ತಿಳುವಳಿಕೆಯೆಂವ ತಲುಪಿರುವ ತಪ್ಪು ತೀರ್ಮಾನವಲ್ಲದೇ, ಮತ್ತೇನೂ ಅಲ್ಲ.

ಕಳೆದ ಬುದ್ಧ ಪೂರ್ಣಿಮೆಯಂದು ಗೆಳೆಯ ಸೂರ್ಯಪ್ರಕಾಶ್ ಪಂಡಿತ್ ಅವರು ತಮ್ಮ ಒಂದು ಬರಹವನ್ನು ಅವರ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ತ್ರಿಪಿಟಕದ ಕೆಲವು ಸೂಕ್ತಗಳನ್ನು ಕೊಟ್ಟಿದ್ದರು. ಬೌದ್ಧರ  ತ್ರಿಪಿಟಕ ವಿರುವುದು ಪಾಲಿ ಭಾಷೆಯಲ್ಲಿ. ಬೌದ್ಧ ಧರ್ಮವು ಜನ ಸಾಮಾನ್ಯರನ್ನು ತಲುಪಲು ಜನರಾಡುತ್ತಿದ್ದ ಪಾಲಿ ಭಾಷೆಯಲ್ಲಿ ತನ್ನ ತತ್ವಗಳನ್ನು ಹೇಳಿತು ಎಂದು ಹೇಳಲಾಗಿದೆ.

ಸನಾತನ ಧರ್ಮಕ್ಕೆ ವಿರೋಧವಾಗಿ ನಿಂತಿತೆನ್ನಲಾದ ಬೌದ್ಧ ಧರ್ಮ, ಸಂಸ್ಕೃತಕ್ಕೆ ವಿರೋಧವಾಗಿ ಪಾಲಿಯಲ್ಲಿ ಬರೆದು ಒಂದು ಕ್ರಾಂತಿಯನ್ನೇ ಮಾಡಿತು ಎಂದು ನೀವಂದುಕೊಂಡಿದ್ದರೆ, ಆ ತೀರ್ಮಾನಕ್ಕೆ ಬರುವ ಮೊದಲು ಒಂದು ನಿಮಿಷ ತಾಳಿ! ಸಂಸ್ಕೃತಕ್ಕೆ ಪಾಲಿಯು ವಿರುದ್ಧವಾಗಿ ನಿಂತದ್ದು ಅನ್ನುವ ಅಭಿಪ್ರಾಯ ಏಕೆ ಸರಿಯಲ್ಲ ಅನ್ನುವುದಕ್ಕೆ, ಸೂರ್ಯಪ್ರಕಾಶ ಪಂಡಿತರ ಬರಹದಲ್ಲಿದ್ದ  ಪಾಲಿ ಸೂಕ್ತಗಳನ್ನೇ  ಏಕೆ  ಉದಾಹರಣೆಯಾಗಿ ತೋರಿಸಬಾರದು ಎಂದೆನ್ನಿಸಿದ್ದರಿಂದಲೇ ನಾನು ಈ ಕಿರುಬರಹವನ್ನು ಬರೆಯ ಹೊರಟಿದ್ದು.

ಪಾಲಿಯನ್ನು ನಾನು ಈ ಮೊದಲು ಮೂಲದಲ್ಲಿಯೇ ಆಗಲಿ, ಅನುವಾದದಲ್ಲೇ ಆಗಲಿ ತುಸುವೂ ಓದಿಕೊಂಡವನಲ್ಲ, ಆದರೂ, ಈ ಸೂಕ್ತಗಳನ್ನು ನೋಡಿದ ಕೂಡಲೆ, ಅವುಗಳ ಸಂಸ್ಕೃತ ಅವತರಣಿಕೆ ಏನಿರಬೇಕೆಂದು ಕೂಡಲೆ ಹೊಳೆಯಿತು ಅಂದರೆ, ಸಂಸ್ಕೃತ-ಪಾಲಿಗಳ ನಡುವೆ ಎಂತಹ ಹತ್ತಿರದ ಸಂಬಂಧವಿದೆ ಅನ್ನುವುದು ತಿಳಿಯುತ್ತೆ.

ಉದಾಹರಣೆ  ಪಾಲಿಯಲ್ಲಿರುವ ಸೂಕ್ತವೊಂದು ಹೀಗಿದೆ :

ನ ಭಜೇ ಪಾಪಕೇ ಮಿತ್ತೇ
ನ ಭಜೇ  ಪುರಿಸಾಧಮೇ
ಭಜೇಥಾ ಮಿತ್ತೇ ಕಲ್ಯಾಣೇ
ಭಜೇಥಾ ಪುರಿಸುತ್ತಮೇ

ನನ್ನ  ಸಂಸ್ಕೃತ ಸಂಸ್ಕೃತ ಛಾಯೆ  ( ಪಾಲಿ ಸೂಕ್ತ ನೋಡಿದೊಡನೆ ಬರೆದದ್ದರಿಂದ ತಪ್ಪು ನುಸುಳಿರಲೂಬಹುದು, ನಾನೇನೂ ಸಂಸ್ಕೃತ ಪಂಡಿತನಲ್ಲ! ) :

ನ ಭಜೇ ಪಾಪಕೇ ಮಿತ್ರೇ
ನ ಭಜೇ ಪುರುಷಾಧಮೇ
ಭಜೇಥಾ ಮಿತ್ರೇ ಕಲ್ಯಾಣೇ
ಭಜೇಥಾ ಪುರುಷೋತ್ತಮೇ

ಇನ್ನೊಂದು  ಪಾಲಿ ಸೂಕ್ತ :

ಮನೋಪುಬ್ಬಂಗಮಾ ಧಮ್ಮಾ
ಮನೋಸೇಟ್ಠಾ ಮನೋಮಯಾಃ
ಮನಸಾ ಚೇ ಪದುಟ್ಠೀನ
ಭಾಸತಿ ವಾ ಕರೋತಿ ವಾ
ತತೋ ನಙ್ ದುಕ್ಖಣ್ ಅನ್ವೇತಿ
ಚಕ್ಕಂ ವ ವಹತೋ ಪದಙ್

ಈ ಮೇಲಿನ ಸೂಕ್ತದ ಸಂಸ್ಕೃತ ಅನುವಾದ :

ಮನೋ ಪೂರ್ವಂಗಮಾ ಧರ್ಮ
ಮನಸೇಷ್ಟಾ ಮನೋಮಯಾಃ
ಮನಸೋ ಚೇತ್ ಪ್ರದುಷ್ಟೇನ
ಭಾಸತಿ ವಾ ಕರೋತಿ ವಾ
ತತೋ ನಹಿ ದುಃಖಮನ್ವೇತಿ
ಚಕ್ರಂ ವೋ ವಹತೋ ಪದಾನ್

ಇವುಗಳನ್ನು ಓದಿದ ಯಾರಿಗೇ ಆಗಲಿ, ಇವು ಒಂದೇ ಭಾಷೆಯ ಎರಡು ರೂಪ ಅನ್ನಿಸುವುದರಲ್ಲಿ ಅನುಮಾನವಿಲ್ಲ!

ಇದೇ ರೀತಿ, ಇದಕ್ಕೆ ಸಮಾಂತರವಾಗಿ ಕನ್ನಡದಲ್ಲಿ ರತ್ನನ ಪದದ ಉದಾಹರಣೆ ತೆಗೆದುಕೊಂಡು ನೋಡೋಣ:

ಬ್ರಮ್ಮ ನಿಂಗೆ ಜೋಡುಸ್ತೀನಿ ಯೆಂಡ ಮುಟ್ಟಿದ್ಕೈನ
ಬೂಮ್ಯುದ್ದಕ್ಕೂ ಬೊಗ್ಗುಸ್ತೀನಿ ಯೆಂಡ ತುಂಬಿದ್ಮೈನ

ಈ ಮೇಲಿನ ಪದ ದಕ್ಷಿಣ ಕರ್ನಾಟಕದ ಹಳ್ಳಿಯ ಕಡೆಯ, ಹೆಚ್ಚು ಓದು ಬರಹಬಾರದ ಕುಡುಕನೊಬ್ಬನ ಭಾಷೆ ಎಂದುಕೊಂಡರೆ, ಅದರ ಬರಹದ ಶುದ್ಧ  ರೂಪ ಹೇಗಿರಬಹುದು?

ಬ್ರಹ್ಮ ನಿನಗೆ ಜೋಡಿಸುತ್ತೇನೆ ಹೆಂಡ ಮುಟ್ಟಿದ ಮೈಯನ್ನು
ಭೂಮಿಯುದ್ದಕ್ಕೂ ಬಗ್ಗಿಸುತ್ತೇನೆ ಹೆಂಡ ತುಂಬಿದ ಮೈಯನ್ನು

ಈಗ ಈ ಎರಡನ್ನೂ ಹೋಲಿಸಿದರೆ, ಅವೆರಡಕ್ಕೂ ಇರುವ ವ್ಯತ್ಯಾಸವೂ ಮೇಲೆ ಇರುವ ಪಾಲಿ-ಸಂಸ್ಕೃತಗಳ ವ್ಯತ್ಯಾಸದಷ್ಟೇ ಅನ್ನುವುದು ನಿಚ್ಚಳ. ಅಂದರೆ, ಪ್ರಾಕೃತವೂ ಸಂಸ್ಕೃತವೂ ಕನ್ನಡದ ಆಡುಮಾತುಗಳು, ಮತ್ತು ಸಾಮಾನ್ಯ ಬರಹದ ಮಾತುಗಳಷ್ಟೇ ಸಂಬಂಧವಿರುವುವು ಹೊರತು ಬೇರೆ ಭಾಷೆಗಳಲ್ಲ ಅನ್ನುವ ನಿರ್ಧಾರಕ್ಕೆ ಬರುವುದು ಸುಲಭ. ಈ ಮೇಲಿನ ರತ್ನನ ಪದದಲ್ಲಿ ಎರಡನೆಯ ವರಸೆಯನ್ನು "ಕಟ್ಟಿದ" ಸುಳ್ಳು ಭಾಷೆ, ನಿಜವಾದ ಭಾಷೆ ಅಲ್ಲ ಅಂತ ಹೇಳುವುದು ಎಷ್ಟು ಅರ್ಥ ಹೀನ ಎನ್ನುವುದನ್ನು ನಾನು ಮತ್ತೆ ಹೊಸದಾಗಿ ವಿವರಿಸಬೇಕಾಗಿಲ್ಲ.

ಸರಿ,ಇಷ್ಟರಿಂದಲೇ ಪಾಲಿಯಿಂದ ಸಂಸ್ಕೃತ ಬಂದಿಲ್ಲ ಅಂತ ಹೇಗೆ ಹೇಳುವಿರಿ ಅನ್ನಬಹುದು. ಆದರೆ ಪಾಲಿಯೊಂದೇ ಪ್ರಾಕೃತವಲ್ಲ. ದಕ್ಷಿಣ ಪ್ರಸ್ಥಭೂಮಿಯಲ್ಲಿ ಪ್ರಚಲಿತವಿದ್ದ ಮಹಾರಾಷ್ಟ್ರೀ,  ಗಂಗಾ ಯಮುನಾ ಬಯಲಿನ ಶೌರಸೇನೀ ಮೊದಲಾದ ಹಲವು ಪ್ರಾಕೃತಗಳೂ ಇವೆ.  ಅಲ್ಲಿ ಗಮನಿಸಬೇಕಾದ್ದೇನೆಂದರೆ ಎಲ್ಲ ಈ ಎಲ್ಲ ಪ್ರಾಕೃತಗಳಿಗೂ ಮತ್ತು ಸಂಸ್ಕೃತಕ್ಕೂ ನಾನು ಈಗ ಮೇಲೆ ತೋರಿಸಿದ ರೀತಿಯೇ ಸಂಬಂಧವನ್ನು ಬಹಳ ಸುಲಭವಾಗಿ ತೋರಿಸಬಹುದು.  ಹಾಗಿದ್ದಮೇಲೆ ಅದನ್ನು ಹೇಗೆ ವಿವರಿಸಬಹುದು?  ಒಂದೇ  ಭಾಷೆಯ ಬೇರೆ ಬೇರೆ ರೂಪಗಳು ಎಂದೆನ್ನುವುದು ಅತೀ ನೇರವಾದ ವಿವರಣೆ.

ಮಹಾರಾಷ್ಟ್ರಿ ಬಳಕೆಯಲ್ಲಿ ಇದ್ದದ್ದು ನರ್ಮದಾ ಗೋದಾವರಿ ನದೀಬಯಲಿನ ಪ್ರದೇಶದಲ್ಲಿ. ಮಾಗಧಿ ಪಾಲಿಗಳಿದ್ದದ್ದು ಸೋನ್, ಗಂಗಾ ಪ್ರದೇಶದ ಬಿಹಾರದಲ್ಲಿ. ಶೌರಸೇನಿಯಿದ್ದದ್ದು ಗಂಗಾ ಯಮುನಾ ಪ್ರದೇಶದ ಹರಿಯಾನಾ ಪಶ್ಚಿಮ ಉತ್ತರ ಪ್ರದೇಶಗಳ ಭಾಗದಲ್ಲಿ - ಈ ಎಲ್ಲ ಸ್ಥಳಗಳೂ ನೂರಾರು ಮೈಲಿ ಅಂತರದಲ್ಲಿವೆ ಅನ್ನುವುದನ್ನು ನೆನೆಯೋಣ. ಹೀಗೆ ನೂರಾರು ಮೈಲಿ ದೂರದಲ್ಲಿದ್ದ ಭಾಷೆಗಳನ್ನೆಲ್ಲ "ಒಟ್ಟು ಸೇರಿಸಿ, ಶುದ್ಧೀಕರಣ ಮಾಡಿ ಸಂಸ್ಕೃತವನ್ನು" ಕಟ್ಟಿದರು ಅನ್ನುವುದು ಒಪ್ಪಲಾಗದ ಮಾತು. ಅಂತಹ ವಾದಕ್ಕಿಂತ, ಬರವಣಿಗೆಯಲ್ಲಿ ಬಳಕೆಯಲ್ಲಿದ್ದ ಒಂದು  ಭಾಷೆಯ ಒಳನುಡಿಗಳು (dialect) ಎಂದರೆ ಆ ವಿವರಣೆ ಅಷ್ಟೇ ಸರಳವಾಗುತ್ತದೆ.

ಇದೆಲ್ಲ ಸರಿ, ಕನ್ನಡಿಗರಿಗೆ ಪ್ರಾಕೃತ ಆದರೇನು ಸಂಸ್ಕೃತ ಆದರೇನು ಏನು ಉಪಯೋಗ ಅಂತ ಕೇಳ್ತೀರಾ? ನಿಜ ಹೇಳಬೇಕೆಂದರೆ ಪ್ರಾಕೃತಕ್ಕೂ , ಅದರಲ್ಲೂ ಮಹಾರಾಷ್ಟ್ರೀ ಎಂಬ ಪ್ರಾಕೃತಕ್ಕೂ, ಮತ್ತು ಕನ್ನಡಕ್ಕೂ ಸಾವಿರಾರು ವರ್ಷಗಳ ಸಂಬಂಧವಿದೆ. ರಾಷ್ಟ್ರಕೂಟ ಚಾಲುಕ್ಯ ಮೊದಲಾದವರ ರಾಜ್ಯದಲ್ಲಿ ಕನ್ನಡವನ್ನೂ , ಮಹಾರಾಷ್ಟ್ರೀಯನ್ನೂ ಮಾತಾಡುತ್ತಿದ್ದವರು ನೂರಾರು ವರ್ಷ ಒಟ್ಟಿಗೇ ಇದ್ದುದ್ದನ್ನು ನಾವು ಮರೆಯುವಂತಿಲ್ಲ. ಇಂದಿಗೂ,  ನಾವು  ಪ್ರತಿದಿನವೂ ಬಳಸುವ ನೂರಾರು "ಕನ್ನಡ’ ಪದಗಳು ಈ ಮಹಾರಾಷ್ಟ್ರೀ ಪ್ರಾಕೃತದಿಂದಲೇ ಬಂದಿವೆ. ಅದರಂತೆಯೇ ಕನ್ನಡದ ಪದಗಳೂ ಮಹಾರಾಷ್ಟ್ರೀ ಪ್ರಾಕೃತವನ್ನು, ಅದರಿಂದ ಇಂದಿನ ಮರಾಠಿಯಲ್ಲೂ ಸೇರಿ ಹಾಸುಹೊಕ್ಕಾಗಿರುವುದೂ ಆ ಒಡನಾಟದಿಂದಲೇ ಅನ್ನುವುದೂ ನಿರೂಪಿತವಾದ ಸಂಗತಿ.

-ಹಂಸಾನಂದಿ

ಕೊ: ಇದು ಕೆಲವು ದಿನಗಳ ಹಿಂದೆ ಫೇಸ್ ಬುಕ್ ನಲ್ಲಿ ಯಾವುದೋ ಒಂದು ಚರ್ಚೆಗೆ ನಾನು ಹಾಕಿದ್ದ ಟಿಪ್ಪಣಿಯ ಹಿಗ್ಗಿಸಿದ ರೂಪ. ಅಲ್ಲಿ ಕಳೆದುಹೋಗುತ್ತದೆಂದು ಇಲ್ಲಿ ಬರೆದದ್ದಾಯಿತು

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?