ಶಿವ-ಶಿವೆಗೆಸಂಪಿಗೆಯ ಹೊಂಬಣ್ಣ ಮೈಯ ಸೊಬಗಿನವಳಿಗೆ
ಕರ್ಪೂರ ಬಿಳುಪಿನಾ ಮೈಯ ಸೊಬಗನಿಗೆ
ತುರುಬು ಕಟ್ಟಿರುವಳಿಗೆ ಜಟೆಯ ಬಿಟ್ಟಿರುವನಿಗೆ
ನಮಿಸುವೆನು ಶಿವೆಗೆ ನಾ ಮಣಿಯುವೆನು ಶಿವಗೆ

चाम्पॆयगौरार्धशरीरकायै
कर्पूरगौरार्धशरीरकाय ।
धम्मिल्लकायै च जटाधराय
नमः शिवायै च नमः शिवाय ॥ 1 ॥
***

ಕಸ್ತೂರಿ ಕುಂಕುಮವ ನೊಸಲಿಗಿರಿಸಿದವಳಿಗೆ
ಚಿತೆಯ ಬೂದಿಯ ದೂಳ ಹಣೆಗೆ ಬಳಿದವಗೆ
ನೆನೆಯಬೇಕೆನಿಪಳಿಗೆ ನೆನೆಯೆ ಭಯವಾಗುವಗೆ
ನಮಿಸುವೆನು ಶಿವೆಗೆ ನಾ ಮಣಿಯುಬೆನು ಶಿವಗೆ

कस्तूरिकाकुङ्कुमचर्चितायै
चितारजःपुञ्ज विचर्चिताय ।
कृतस्मरायै विकृतस्मराय
नमः शिवायै च नमः शिवाय ॥ 2 ॥
***

ಝಲ್ಲೆನುವ ಗೆಜ್ಜೆಗಳ ಬಳೆಯ ತೊಟ್ಟಿರುವಳಿಗೆ
ಹಾವನ್ನೆ ಕಾಲ್ಗೆಜ್ಜೆ ಮಾಡಿಕೊಂಡವಗೆ
ಚಿನ್ನದಾ ತೋಳ್ಬಳೆಯ ಹಾವ ಭಾಪುರಿಯನ್ನು
ತೊಟ್ಟ ಶಿವೆ ಶಿವರನ್ನು ನಾನೀಗ ಮಣಿವೆ

झणत्क्वणत्कङ्कणनूपुरायै
पादाब्जराजत्फणिनूपुराय ।
हॆमाङ्गदायै भुजगाङ्गदाय
नमः शिवायै च नमः शिवाय ॥ 3 ॥
***

ಕನ್ನೈದಿಲೆಯ ಪೋಲ್ವ ಕಂಗಳಿರುವಳಿಗೆ
ಅರಳಿರುವ ಕಮಲದಂತಿಹ ಕಣ್ಣವನಿಗೆ
ಮಂಗಳದ ಕಣ್ಗಳಿಹ ವಿಷಮ ಕಣ್ಣುಗಳಿಹ
ಶಿವೆಗೆ ಮಣಿವೆನು ನಾನು ನಮಿಸುವೆನು ಶಿವಗೆ

विशालनीलॊत्पललॊचनायै
विकासिपङ्कॆरुहलॊचनाय ।
समॆक्षणायै विषमॆक्षणाय
नमः शिवायै च नमः शिवाय ॥ 4 ॥
***

ಮಂದಾರಮಾಲೆ ನಲಿವಂಥ ಕುರುಳಿರುವಳಿಗೆ
ತಲೆಬುರುಡೆ ಸರವ ಧರಿಸಿರುವ ಕೊರಳಿಹಗೆ
ಸೊಗದ ವಸ್ತ್ರವನುಟ್ಟ ಬಟ್ಟೆಯನ್ನುಡದಿರುವ
ಶಿವೆಯ ನಮಿಸುವೆ ನಾನು ಮಣಿಯುವೆನು ಶಿವಗೆ

मन्दारमालाकलितालकायै
कपालमालाङ्कितकन्धराय ।
दिव्याम्बरायै च दिगम्बराय
नमः शिवायै च नमः शिवाय ॥ 5 ॥
***

ಕಾರ್ಮೊಡದಂತಿರುವ ನೀಳನಿಡುಜಡೆಯವಳಿಗೆ
ಮಿಂಚಿನಂತಿರುವ ಕೆಂಜಟೆಯವನಿಗೆ
ಒಡೆಯರಿಲ್ಲದವಳಿಗೆ ಎಲ್ಲರೊಡಯನಿಗಿಂದು
ನಮಿಸುವೆನು ಶಿವೆಗೆ ನಾ ಮಣಿಯುವೆನು ಶಿವಗೆ

अम्भॊधरश्यामलकुन्तलायै
तटित्प्रभाताम्रजटाधराय ।
निरीश्वरायै निखिलॆश्वराय
नमः शिवायै च नमः शिवाय ॥ 6 ॥
***

ಈ ಜಗವ ಸೃಷ್ಟಿಸುವ ನರ್ತನವ ಮಾಳ್ಪಳಿಗೆ
ತನ್ನತಾಂಡವದಲ್ಲಿ ಪ್ರಳಯ ತರುವನಿಗೆ
ಜಗಕೆ ತಾಯಾಗಿರುವ ಜಗಕೋರ್ವ ತಂದೆಯೀ
ಶಿವೆಗೆ ಜೊತೆಯಲಿ ಶಿವಗೆ ನಾನೀಗ ನಮಿಪೆ

प्रपञ्चसृष्ट्युन्मुखलास्यकायै
समस्तसंहारकताण्डवाय ।
जगज्जनन्यै जगदॆकपित्रॆ
नमः शिवायै च नमः शिवाय ॥ 7 ॥
***

ಫಳಫಳನೆ ಕೋರೈಪ ಓಲೆ ತೊಟ್ಟಿರುವಳಿಗೆ
ಹೆಡೆಯೆತ್ತಿರುವ ಹಾವಿನೊಡವೆ ತೊಟ್ಟವಗೆ
ಶಿವನ ಜೊತೆಯಿರುವಳಿಗೆ ಶಿವೆಯ ಜೊತೆಯಿರುವನಿಗೆ
ಶಿವೆಗೆ ನಮಿಸುವೆ ನಾನು ನಮಿಸುವೆನು ಶಿವಗೆ

प्रदीप्तरत्नॊज्ज्वलकुण्डलायै
स्फुरन्महापन्नगभूषणाय ।
शिवान्वितायै च शिवान्विताय
नमः शिवायै च नमः शिवाय ॥ 8 ॥


****************************

ಕೊ: ಇದು ನಾನು ಇಂದು ಮಾಡಿದ ಆದಿ ಶಂಕರಾಚಾರ್ಯರ ಅರ್ಧನಾರೀಶ್ವರ ಸ್ತೋತ್ರದ ಅನುವಾದ

ಕೊ: ಈ ಅನುವಾದ ಗೆಳೆಯ ಲೋಕೇಶ್ ಆಚಾರ್ಯ ಅವರ ಚಿತ್ರದಿಂದಲೇ ಪ್ರೇರೇಪಿತವಾಗಿದ್ದು.  ಅಂತಹ ಸೊಗಸಾದ ಚಿತ್ರಕ್ಕೆ ತಕ್ಕ ಪದ್ಯ ಬೇಕೆಂದು ಹುಡುಕಿದಾಗ ಸಿಕ್ಕಿದ್ದೇ  ಈ ಸುಂದರವಾದ ಸ್ತುತಿ. ಜೈ ಗೂಗಲೇಶ್ವರ! ಆಸಕ್ತರಿಗೆ ಮೂಲ ಸಂಸ್ಕೃತ ಶ್ಲೋಕಗಳು ಇಲ್ಲಿವೆ.  http://sanskritdocuments.org/doc_devii/ardhanArI_mean.pdf.

ಕೊ.ಕೊ.ಕೊ: ಮೂಲದಲ್ಲಿ ಪ್ರತಿ ಪದ್ಯವೂ "ನಮಃ ಶಿವಾಯೈ ಚ ನಮಃ ಶಿವಾಯ" ಎಂಬ ಪಾದದಲ್ಲಿ ಮುಗಿಯುತ್ತದೆ. ಕನ್ನಡದ ಅನುವಾದದಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದೇನಾದರೂ, ಅರ್ಥದಲ್ಲಿ ಏನೂ ಬದಲಾವಣೆ ಇಲ್ಲ. ಅನುವಾದವು ಪಂಚಮಾತ್ರಾ ಚೌಪದಿಯಲ್ಲಿ ಇದೆ. ಪ್ರಾಸವನ್ನಿಟ್ಟಿಲ್ಲ. ಪ್ರತೀ ಪದ್ಯದ ಕೆಳಗೂ ಸಂಸ್ಕೃತದ ಮೂಲವನ್ನೂ ಆಸಕ್ತರಿಗೆಂದು ಹಾಕಿರುವೆ. ಸಂಸ್ಕೃತಕ್ಕೇ  ವಿಶಿಷ್ಟವಾದ ಕೆಲವು ನುಡಿಗಟ್ಟುಗಳನ್ನು ಅಷ್ಟೇ ಪ್ರಭಾವಶಾಲಿಯಾಗಿ ಕನ್ನಡಕ್ಕೆ ತರಲಾಗಲಿಲ್ಲವಾದರೂ ( ಉದಾ: ಸಮೇಕ್ಷಣ, ವಿಷಮೇಕ್ಷಣ ಇತ್ಯಾದಿ), ಒಟ್ಟಾರೆ ಅಂದವನ್ನು ಉಳಿಸಿಕೊಂಡಿದ್ದೇನೆಂದು ಭಾವಿಸಿದ್ದೇನೆ. ನನಗೆ ಅನುವಾದಿಸುವಾಗ ಅತಿ ಹೆಚ್ಚಿನ ಸಂತೋಷ ಕೊಟ್ಟ ಪದ್ಯಗಳಲ್ಲಿ ಇವು ಸೇರಿವೆ ಎಂದರೆ ತಪ್ಪಾಗಲಾರದು!


Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ