Skip to main content

ಮುರಳೀ ರವಳೀ ಹಾಯಿ!

गगनं गगनाकारं सागरः सागरोपमः
मुरळी रवमाधुर्यं मुरळी मंदहासवत्

ಗಗನಂ ಗಗನಾಕಾರಂ ಸಾಗರಃ ಸಾಗರೋಪಮಃ
ಮುರಳೀ ರವಮಾಧುರ್ಯಂ ಮುರಳೀ ಮಂದಹಾಸವತ್

ಆಗಸದ ವಿಸ್ತರಕೆ ಸಾಟಿಯಾಕಾಶವದು
ಕಡಲಿಗೆಣೆಯಾಗುವುದು ಕಡಲು ಒಂದೆ!
ಬಾಲಮುರಳಿಯ ಗಾನಸುಧೆಯೀವ ಸವಿಗಂತು
ಹಾಯೆನಿಪ ಮೊಗದ ನಗುವೆ ಹೋಲಿಕೆಯು!

ಬಾಲಮುರಳೀ ಕೃಷ್ಣ ೨೦ ನೇ ಶತಮಾನದಲ್ಲಿ ಭಾರತ ಕಂಡ ಅತ್ಯದ್ಭುತ ಸಂಗೀತಗಾರರು, ಹಾಗೂ ಅತೀ ಪ್ರಭಾವಶಾಲಿ ಕಲಾವಿದರು ಎಂಬುದು ಸೂರ್ಯ ಚಂದ್ರರಷ್ಟೇ ನಿಚ್ಚಳ, ಸತ್ಯ. ತ್ಯಾಗರಾಜರ ನೇರ ಶಿಷ್ಯ ಪರಂಪರೆಯ (ಆಂಧ್ರ ಸಂಪ್ರದಾಯ)ದಲ್ಲಿ ಬೆಳೆದು ಬಂದ ಬಾಲಮುರಳಿ ಕೃಷ್ಣ  ಇಂದು ನಮ್ಮೊಡನೆ ಇಲ್ಲ ಎಂದು ನಾನು ಹೇಳಿದರೆ  ಅದು ತಪ್ಪೇ ಆಗುತ್ತದೆ! ಏಕೆಂದರೆಪೂರ್ಣಾಯಸ್ಸನ್ನು ಸಂಗೀತಕ್ಕೆ ಧಾರೆ ಎರೆದು ಕೋಟ್ಯಂತರ ರಸಿಕರ ಮನಸೂರೆಗೈದ ಬಾಲಮುರಳಿಯ ಸಂಗೀತ ಸುಧೆ ಅಮರ! ಅವರು , ನಮ್ಮಂತೆ ಅವರ ಹಾಡುಗಾರಿಕೆಯನ್ನು ಕೇಳಿ ಆನಂದಿಸುವ ರಸಿಕರು ಬದುಕಿರುವವರೆಗೂ, ಅವರ ರಚನೆಗಳನ್ನು ಇತರ ಸಂಗೀತಗಾರರು ಹಾಡುತ್ತಿರುವವರೆಗೂ, ಅವರು ಬದುಕಿಯೇ, ನಮ್ಮ ನಡುವೆಯೇ ಇದ್ದಂತೆ.

ಸಾಮಾನ್ಯವಾಗಿ ಸಂಗೀತಗಾರರಲ್ಲಿ ಹಲವು ವಿಧ. ಕೆಲವರು ಅಪಾರ ವಿದ್ವಾಂಸರುಪ್ರೇಕ್ಷಕರಿಗೆ ಅತ್ಯುತ್ತಮ ಸಭಾ ಸಂಗೀತದ ಅನುಭವ ಮಾಡಿಸುವವರು ಕೆಲವರು, ಮತ್ತೆ ಕೆಲವರು ಪರಂಪರೆಯನ್ನು ಮುಂದುವರೆಸುವಲ್ಲಿ ಉತ್ತಮ ಶಿಷ್ಯಕೋಟಿಯನ್ನು ತಯಾರು ಮಾಡುವವರು. ಇನ್ನು ಕೆಲವರು ತಮ್ಮ ಹೊಸ ರಚನೆಗಳಿಂದ ಸಂಗೀತದ ಚೌಕಟ್ಟನ್ನು ಇನ್ನೂ ಹಿಗ್ಗಿಸಿ ಅದಕ್ಕೆ ಮೆರಗು ಕೊಡುವವರು, ಕೆಲವರು ಪಂಡಿತರಿಗೆ ಮೆಚ್ಚಿಗೆಯಾದವರು, ಕೆಲವರು ಸಂಗೀತದ ಗಂಧಗಾಳಿಯೂ ಇಲ್ಲದವರಿಗೂ ಹತ್ತಿರವಾಗಿ,  ಹಿಡಿಸುವಂತಹವರುಆದರೆ ಎಲ್ಲಕ್ಕೂ ಉದಾಹರಣೆಯಾಗಿ ನಿಲ್ಲಬಲ್ಲಂತಹವರು ಬಲು ವಿರಳ. ಅವರಲ್ಲಿ ಮುಂಚೂಣಿಯಲ್ಲಿರುವವರು ಡಾ. ಬಾಲಮುರಳಿ ಕೃಷ್ಣ.

ಸಂಗೀತ ಕುಟುಂಬದಲ್ಲಿ ಹುಟ್ಟಿದ ಬಾಲಮುರಳಿಕೃಷ್ಣ ಐದು ವರ್ಷದ ಪುಟ್ಟ ಬಾಲಕರಿದ್ದಾಗಲೆ ಹಾಡುಗಾರರಾದರು.  ಹಾಡುಗಾರಿಕೆ ಒಂದೇ ಅಲ್ಲದೆ, ಹಲವು ವಾದ್ಯಗಳಲ್ಲೂ (ಖಂಜಿರ, ಮೃದಂಗ, ವೈಯೊಲಿನ್, ವಯೋಲಾ ಇತ್ಯಾದಿ) ಪರಿಣಿತರಾದರು. ಈ ಲಯವಾದ್ಯಗಳಲ್ಲಿ ಅವರಿಗಿದ್ದ ಪರಿಣತಿಯೇ ಅವರ ಅಪರೂಪದ ಮನೋಧರ್ಮ ಸಂಗೀತಕ್ಕೆ ಮುಖ್ಯ ತಳಹದಿ ಎನ್ನಬಹುದು. ಇಂತಿಷ್ಟು ಪರಿಣತಿಯಿದ್ದ ಅವರು ಹೇಳುತ್ತಿದ್ದ ಪ್ರಕಾರ ಅವರು ಸಂಗೀತ ಅಭ್ಯಾಸ ಮಾಡುತ್ತಿದ್ದಿದ್ದೇ ಇಲ್ಲವಂತೆ.! ಬಹುಶಃ ಸಂಗೀತವೇ ಅವರ ರಕ್ತದಲ್ಲಿ ಹರಿಯುತ್ತಿದ್ದಿರಬೇಕು! ಹಾಗಾಗಿ ಯಾವಾಗಲೂ ಅದೇ ಅವರ ಮನಸ್ಸಿನಲ್ಲೂ ಹರಿದಾಡುತ್ತಿರುವ ಅವರು, ಅದಕ್ಕಾಗಿ ಕುಳಿತು ಅಭ್ಯಾಸ ಮಾಡದಿದ್ದರೆ ಆಶ್ಚರ್ಯವೇನಿದೆ


ತ್ಯಾಗರಾಜರ ನೇರ ಶಿಷ್ಯ ಪರಂಪರೆಯಲ್ಲಿ ಆರನೇ ತಲೆಮಾರಿನ ಬಾಲಮುರಳಿ ಕೃಷ್ಣ, ತ್ಯಾಗರಾಜರ ನಂತರದ ಬಂದ ವಾಗ್ಗೇಯಕಾರರಲ್ಲಿ ಶ್ರೇಷ್ಠತಮರಾಗಿ ನಿಲ್ಲುತ್ತಾರೆ ಎಂಬುದು ನನ್ನ ಅಭಿಪ್ರಾಯಚಿಕ್ಕವಯಸ್ಸಿನಲ್ಲೇ ವಾಗ್ಗೇಯಕಾರರಾದಬಾಲಮುರಳಿಯೂ ತ್ಯಾಗರಾಜರಂತೆ ಸ್ವನಾಮ ಮುದ್ರೆ ಹೊಂದಿದವರೇನೂರಾರು ರಚನೆಗಳನ್ನು ಪ್ರಸಿದ್ಧ, ಅಪ್ರಸಿದ್ಧ ರಾಗಗಳಲ್ಲಿ ಕಲ್ಪಿಸಿರುವ ಬಾಲಮುರಳಿ, ವಿಷಯದಲ್ಲೂ ತ್ಯಾಗರಾಜರನ್ನೇ ಮುಂದಾಳಾಗಿ ಇಟ್ಟುಕೊಂಡಿದ್ದಿರಬೇಕು.

ಹಾಗಿದ್ದರೂ   ತ್ಯಾಗರಾಜರು ಕೈಹಾಕದೇ ಹೋದ ವರ್ಣ ಮತ್ತೆ ತಿಲ್ಲಾನಗಳು  ಬಾಲಮುರಳೀ ಕೃಷ್ಣರ ಸ್ವಂತ ರಚನೆಗಳಲ್ಲಿ ಇಂದು  ಹೆಚ್ಚು ಬೆಳಕು ಕಂಡಿವೆ. ಗಂಭೀರನಾಟದ ’ಅಮ್ಮ ಆನಂದದಾಯಿನಿ’, ನಾಟ ರಾಗದ ’ಈ ನಾದಮುಲೋ’ , ಅಮೃತವರ್ಷಿಣಿ ರಾಗದ ’ಆಬಾಲಗೋಪಾಲಮು’, ಶುದ್ಧ ತೋಡಿಯ ’ಸರಗುನ ಗಾವುಮು’  ಷಣ್ಮುಖಪ್ರಿಯದ ’ಓಂಕಾರ ಪ್ರಣವ ನಾದೋಪಾಸನ’ ಮೊದಲಾದ ವರ್ಣಗಳು ಅವರ ಕುಶಲತೆಗೆ ಸಾಕ್ಷಿ.  ಇನ್ನು ಅವರ ಕದನಕುತೂಹಲ, ಗರುಡಧ್ವನಿ, ಬೃಂದಾವನಿ ಮೊದಲಾದ ರಾಗಗಳಲ್ಲಿರುವ ತಿಲ್ಲಾನಗಳನ್ನು ಕೇಳುತ್ತಾ ಕೇಳುವವರೇ ಮನಸ್ಸಿನಲ್ಲೇ ನರ್ತಿಸುವಂತಾಗುವುದೂ ಸುಳ್ಳಲ್ಲ.  ನರ್ತನ ವೇದಿಕೆಯಲ್ಲಿ ಈ ರಚನೆಗಳು ಹೆಚ್ಚಾಗಿ ಕಾಣಿಸಿಕೊಂಡಿರುವುದರಿಂಬ ಬಹುಜನಪ್ರಿಯವೂ ಆಗಿವೆ.

ಇದರ ಜೊತೆಗೆ ’ಕೃತಿ’ ಎಂಬ ಪ್ರಕಾರದಲ್ಲೂ ಅವರ ಸಾಧನೆ ಸಾಟಿಯಿಲ್ಲದ್ದು. ದುರದೃಷ್ಟವಶಾತ್ ಹೆಚ್ಚಾಗಿ ಎಲ್ಲ ಮೇಳಕರ್ತರಾಗಗಳಲ್ಲೂ ರಚನೆ ಮಾಡಿದ ಕೆಲವರಲ್ಲಿ ಬಾಲಮುರಳಿ ಒಬ್ಬರು ಎಂದು ಹೇಳಿಮುಗಿಸಿಬಿಡುವುದು ರೂಢಿ.  ಆದರೆ ಅದೊಂದೇ ಅಲ್ಲ ಅವರ ಸಾಧನೆ!  ಸಂಗೀತಕ್ಕೆ ತಕ್ಕುದಾದ ಸಾಹಿತ್ಯ ಚಮತ್ಕಾರ, ಸ್ವರಾಕ್ಷರ ಬಳಕೆ ಇಂಥ ವಿಷಯಗಳು ಅವರ ರಚನೆಗಳಲ್ಲಿ ಹೆಜ್ಜೆ ಹೆಜ್ಜೆಗೂ ಕಾಣುತ್ತವೆ. ಅದರಲ್ಲೂ ಸಾಹಿತ ಸಂಗೀತಗಳ ಸರಿಯಾದ ಪರಿಮಾಣದಲ್ಲಿ ಮಿಳಿತಕೇಳಲು ಹಿತವಾದಪದಗಳ ಬಳಕೆ ಇಂತಹವುಗಳಿಗೆ ಬಾಲಮುರಳಿಯವರ ರಚನೆಗಳು ಒಳ್ಳೇ ಉದಾಹರಣೆ. ಮೊದಮೊದಲು ಅವರು ತಮ್ಮ ಸಂಗೀತ ಕಚೇರಿಗಳಲ್ಲಿ ಸ್ವಂತ ರಚನೆಗಳನ್ನು ಹಾಡುತ್ತಿರಲಿಲ್ಲವಂತೆ. ಆದರೆ ನಮ್ಮ ಪುಣ್ಯ, ನಂತರದ ದಿನಗಳಲ್ಲಿ ಅವರು ತಮ್ಮ ರಚನೆಗಳನ್ನೂ ವೇದಿಕೆಯ ಮೇಲೆ ಹಾಡಲಾರಂಭಿಸಿದ್ದು ಕೇಳುಗರಿಗೂ, ಇತರೆ ಸಂಗೀತಗಾರರಿಗೂ ಭಾಗ್ಯವಾಗಿಯೇ ಪರಿಣಮಿಸಿತು. ಇಲ್ಲದೇ ಹೋಗಿದ್ದರೆ, ಎಷ್ಟೋ ಅನರ್ಘ್ಯ ರತ್ನಗಳು ಯಾವ ಗಣಿಯಲ್ಲೇ ಉಳಿದುಕೊಂಡು ಬಿಡುತ್ತಿದ್ದವೋ!

ಹೆಚ್ಚಾಗಿ ಸಂಸ್ಕೃತ , ತೆಲುಗು  ಭಾಷೆಗಳಲ್ಲಿ, ಅಪರೂಪಕ್ಕೆ ತಮಿಳು ಭಾಷೆಯಲ್ಲಿ ಸರಳ, ಸುಂದರ ಸಾಹಿತ್ಯ ಭಾಗಗಳನ್ನು ಹೊಂದಿರುವ ಬಾಲಮುರಳಿ ಅವರ ರಚನೆಗಳೂ ತ್ಯಾಗರಾಜರ ರಚನೆಗಳಂತೆ , ಮೇಲೆ ಸರಳವಾಗಿ ಕಂಡರೂ ಒಳಗೆ ಅಗಾಧವಾದ ಹೂರಣವನ್ನು ತುಂಬಿಸಿಕೊಂಡಿರುತ್ತವೆ. ತ್ಯಾಗರಾಜರಂತೆಯೇ ಪ್ರಯೋಗ ಶಾಲಿಯಾದ ಬಾಲಮುರಳಿ   ಮಹತೀ, ಲವಂಗಿ, ಮನೋರಮಾ, ರೋಹಿಣಿ, ಚಂದ್ರಿಕಾ ಹೀಗೆ ಹತ್ತು ಹಲವು ಹೊಸ ರಾಗಗಳನ್ನೂ ಸಂಗೀತಕ್ಕೆ ಬಳುವಳಿಯಾಗಿತ್ತಿದ್ದಾರೆ. ಇನ್ನು  ಹಿಂದಿನ ಮೈಸೂರು ವಾಸುದೇವಾಚಾರ್ಯ, ಸ್ವಾತಿ ತಿರುನಾಳ್ ಮೊದಲಾದ ವಾಗ್ಗೇಯಕಾರರ ರಚನೆಗಳಿಗೆ ಜೀವ ತುಂಬಿದ್ದೂ ಬಾಲಮುರಳಿ ಕೃಷ್ಣರೇ. ಅವರ ದನಿಯಲ್ಲಿ ಸುನಾದ ವಿನೋದಿನಿ ರಾಗದದೇವಾದಿದೇವ , ಅಭೇರಿ ರಾಗದನಗುಮೋಮು ಗನಲೇನಿ , ಆಹಿರ್ ಭೈರವ್ ರಾಗದಪಿಬರೇ ರಾಮರಸಂ , ಮತ್ತೆ ತ್ಯಾಗರಾಜರ ಘನರಾಗ ಪಂಚರತ್ನಗಳು  ಮೊದಲಾದ ಕೃತಿಗಳ ಸೌಂದರ್ಯಕ್ಕೆ ಮನಸೋಲದವರಾರು?

ತ್ಯಾಗರಾಜರಂತೆ, ತಮ್ಮ ಜೀವನದ ವಿವರಗಳನ್ನೂ ತಮ್ಮ ರಚನೆಗಳಲ್ಲಿ ಅಲ್ಲಲ್ಲಿ ದಾಖಲಿಸಿರುವ (ಉದಾ: ಭಾವಮೇ ಮಹಾಭಾವಮುನ, ಶುದ್ಧ ಧನ್ಯಾಸಿ ರಾಗ), ಅವರಂತೆಯೇ ಪ್ರಾಸಾನುಪ್ರಾಸ ಗಳುಳ್ಳ ಸಾಹಿತ್ಯವನ್ನು ಬರೆದಿರುವ, ಅವರಂತೆಯೇ ಹೊಸ ರಾಗಗಳನ್ನು ಸೃಷ್ಟಿಸಿದ ಬಾಲಮುರಳಿಕೃಷ್ಣ, ಇನ್ನೊಂದು ಕಡೆ ಮುತ್ತುಸ್ವಾಮಿ ದೀಕ್ಷಿತರಂತೆ, ಪದಚಮತ್ಕಾರಗಳನ್ನೂ, ವಿವಿಧ ಯತಿಪ್ರಯೋಗಗಳನ್ನು ಮಾಡುವುದರಲ್ಲೂ   (ಉದಾ: ಚಿಂತಯಾಮಿ ಸಂತತಂ, ಸುಚರಿತ್ರ ರಾಗ) , ಸಾಹಿತ್ಯದಲ್ಲಿ ಸುಂದರವಾಗಿ ರಾಗಮುದ್ರೆಯನ್ನು ಸೇರಿಸುವುದರಲ್ಲೂ ಸಿದ್ಧ ಹಸ್ತರು. ತಮ್ಮದೇ ಹೊಸ ರಚನೆಗಳಲ್ಲದೆ,  ಭದ್ರಾಚಲ ರಾಮದಾಸ, ಅನ್ನಮಯ್ಯ, ಪುರಂದರದಾಸ, ಸದಾಶಿವ ಬ್ರಹ್ಮೇಂದ್ರ ಮೊದಲಾದವರ ರಚನೆಗಳನ್ನು ತಕ್ಕ ಸಂಗೀತವೊದಗಿಸಿ ಹಾಡಿ ಜನಪ್ರಿಯಗೊಳಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತೆಪುರಂದರದಾಸರ ಹಲವು ದೇವರನಾಮಗಳನ್ನು ಅವರು ತೆಲುಗಿಗೆ ಅನುವಾದಿಸಿ, ಅವನ್ನೂ ಹಾಡಿದ್ದಾರೆಅಂತೆಯೇ ಸಂಗೀತದ ಮಟ್ಟು ಸಿಗದೇ ಹೋದ ಸ್ವಾತಿ ತಿರುನಾಳರ ಹಲವು ರಚನೆಗಳ ಸಾಹಿತ್ಯಗಳಿಗೂ, ಜಯದೇವನ ಅಷ್ಟಪದಿಗಳಿಗೂ ರಾಗ ಸಂಯೋಜಿಸಿದ್ದಾರೆ. ಒಂದು ರೀತಿ ಪುರಂದರ, ಅನ್ನಮಯ್ಯ  ಮೊದಲಾದವರ ರಚನೆಗಳಿಗೆ, ಮಹಾತ್ಮರು ಹದಿನೈದನೇ ಶತಮಾನದಲ್ಲಿ ಹಾಡುತ್ತಿದ್ದಿರಬಹುದಾದ ರೀತಿಯ ಸಂಗೀತವನ್ನೂ ಕಲ್ಪಿಸಿ, ಅವಕ್ಕೂ ಮರುಹುಟ್ಟು ಕೊಟ್ಟಿದ್ದಾರೆ ಅಂದರೆ ಸಲ್ಲುವ ಮಾತೇ.

ಭಾರತೀಯ ಸಂಗೀತದ ಒಂದು ಪ್ರಮುಖ ಭಾಗ ಮನೋಧರ್ಮ ಸಂಗೀತ. ಇದರಲ್ಲಿ ಬಾಲಮುರಳಿಯವರ ಶೈಲಿ, ಸರಳವೆಂದು ಕಂಡರೂ, ಅನುಕರಿಸಲು ಬಹಳ ಕಷ್ಟವಾದ ಶೈಲಿ. ಅವರ ಕಲ್ಪನಾಸ್ವರಗಳೂ, ಅವರ ಆಲಾಪನೆಗಳೂ ಅತಿ ಸುಂದರ. ಲೆಕ್ಕಾಚಾರವಿದ್ದರೂ ಲೆಕ್ಕಾಚಾರ ಮಾಡದಂತೆ ಕಾಣುವ ಸ್ವರಗಳು, ಕೆಲವೊಮ್ಮೆ ರಾಗದ ನೆರಳು ಕಂಡರೂ ಕಾಣದಿರುವಂತಹ ಆಲಾಪ. ಇವುಗಳ ಸವಿ ಸವಿದಷ್ಟೂ ಹೆಚ್ಚುತ್ತಿರುತ್ತೆ. ಧ್ವನಿಯಲ್ಲಿರುವ ಪಲುಕು, ಹಾಡುಕಾರಿಕೆಗೆ ಎಷ್ಟು ಬೇಕೋ ಅಷ್ಟು ತೂಕ, ಎಷ್ಟು ಬೇಕೋ ಅಷ್ಟು ಹಗುರ. ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ಎಂಬ ಮಾತಿನಂತೆ ಹಾಡುಗಾರಿಕೆಯಲ್ಲಿ ಎಲ್ಲಿ ಬೇಕೋ ಅಲ್ಲಿ ಅಷ್ಟು ಗಟ್ಟಿತನ, ಎಲ್ಲಿ ಬೇಕೋ ಅಲ್ಲಿ ಅಷ್ಟು ಮೃದುತ್ವಇದಕ್ಕೆಲ್ಲ ಬಾಲಮುರಳಿಗಿಂತ ಒಳ್ಳೆಯ ಉದಾಹರಣೆ ದೊರೆವುದುಂಟೇ?

ಇನ್ನು ಇವರ ಇನ್ನೊಂದು ಮುಖ -  ಚಿತ್ರ ನಟ, ಹಿನ್ನೆಲೆ ಗಾಯಕಚಲನಚಿತ್ರ ಸಂಗೀತ ನಿರ್ದೇಶಕ ಆಗಿಯೂ ಹಲವು ಭಾಷೆಗಳಲ್ಲಿ ಪ್ರಖ್ಯಾತಿ ಹೊಂದಿದ್ದರಿಂದ  ಬಾಲಮುರಳಿ ಅವರು ಶಾಸ್ತ್ರೀಯ ಸಂಗೀತದ ಅಭಿರುಚಿ ಇಲ್ಲದವರಿಗೂ ಹತ್ತಿರವಾದರು. ಕನ್ನಡದ ಮಟ್ಟಿಗೆ ಹೇಳುವುದಾದರೆಅವರು ಹಾಡಿದ ’ನಟವರ ಗಂಗಾಧರ’, ’ಧರ್ಮವೆ ಜಯವೆಂಬ ದಿವ್ಯ ಮಂತ್ರ’ , ’ಕೇಳನೋ ಹರಿ ತಾಳನೋ’, ’ಈ ಪರಿಯ ಸೊಬಗು’, ’ದೇವರು ಹೊಸೆದ ಪ್ರೇಮದ ದಾರ’, ’ನಂಬಿದೆ ನಿನ್ನ ನಾದ ದೇವತೆಯೆ’, ಮತ್ತೆ ಹಂಸಗೀತೆ, ಮಧ್ವಾಚಾರ್ಯ ಮೊದಲಾದ ಚಿತ್ರಗಳಲ್ಲಿ ಅವರು ಹಾಡಿದ ಎಲ್ಲ ಹಾಡುಗಳು ಕನ್ನಡ ಚಿತ್ರ ಸಂಗೀತದಲ್ಲಿ ಮರೆಯಲಾರದ ಗುರುತು ಮೂಡಿಸಿವೆ. ಇದೇ ರೀತಿ ತಮಿಳು ಚಿತ್ರಗೀತೆಗಳಲ್ಲೂ ಅವರ ಇದೇ ರೀತಿ ಛಾಪನ್ನು ಕಾಣಬಹುದು. 

ಹಿಂದಿನ ತಲೆಮಾರುಗಳ ಸಂಗೀತಗಾರರ ಬಗ್ಗೆ ನಾವು ಮಾತಿನಲ್ಲಿ  ಕೇಳಿಬಲ್ಲೆವಷ್ಟೆ. ಆದರೆ ಇಂದಿನ ಕಾಲದಲ್ಲಿ ಬಾಲಮುರಳಿಯಂತಹವರ ಸಂಗೀತವನ್ನು ನಾವು ಅವರನಂತರವೂಕೇಳಲು ಸಾಧ್ಯ. ಆ ಮಟ್ಟಿಗೆ ನಾವು ಧ್ವನಿ ಮುದ್ರಿಕೆಗಳಿಗೆ ಕೃತಜ್ಞರಾಗಿರಬೇಕು.   ಆದರೂ, ಒಬ್ಬ ತ್ಯಾಗರಾಜರ ನಂತರ ಒಬ್ಬ ಬಾಲಮುರಳಿಕೃಷ್ಣ ಬರುವುದಕ್ಕೆ ರಸಿಕರು ಸುಮಾರು ೮೦ ವರ್ಷ ಕಾಯಬೇಕಾಯಿತು. ಮತ್ತೊಮ್ಮೆ ಇಂತಹ ಮುರಳೀರವವು  ಕೇಳಲು, ಇಂತಹ ವಾಗ್ಗೇಯಕಾರರನ್ನು ಕಾಣಲುಅಷ್ಟು ಕಾಲವಾಗದಿರಲಿ ಎಂಬ ಆಶಯದೊಂದಿಗೆ, ಬಾಲಮುರಳಿ ಅವರನ್ನು ಒಳ್ಳೇ ಮನಸ್ಸಿನಲ್ಲಿ ಬೀಳ್ಕೊಡೋಣ.  ಮತ್ತೊಬ್ಬ ಮುರಳೀಕೃಷ್ಣ ಹುಟ್ಟಿಬರಲು ಕಾಯೋಣ!

-ಹಂಸಾನಂದಿ

ಕೊ: ಸಂಸ್ಕೃತ ಪದ್ಯದ ಮೊದಲ ಸಾಲು ರಾಮಾಯಣದಲ್ಲಿವಾಲ್ಮೀಕಿ  ರಾಮ ರಾವಣರ ಯುದ್ಧವನ್ನು ಬಣ್ಣಿಸುವಾಗ ಆಡುವ ಮಾತು.  

ಕೊ.ಕೊ: ರಾಮರಾವಣರ ಯುದ್ಧಕ್ಕೆ ರಾಮರಾವಣರ ಯುದ್ಧವೊಂದೇ ಸಾಟಿ ಎಂದು ಅವನು ಹೇಳಿದ ಮಾತುಬಾಲಮುರಳೀಕೃಷ್ಣರ ಸಂಗೀತಕ್ಕೂ ಸಲ್ಲುವುದೆನಿಸಿ,  ಎರಡನೇ ಸಾಲನ್ನು ನಾನು ಸೇರಿಸಿಅದರ ಕನ್ನಡಾನುವಾದವನ್ನು ಅಡಿಯಲ್ಲೇ ಕೊಟ್ಟಿದ್ದೇನೆ

Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ಹಲವರಿಗೆ ಪತ್ರಿಕೆಯಲ್ಲಿ ಬಂದದ್ದೆಲ್ಲಾ ಸತ್ಯ, ಪ್ರಕಟವಾಗಿದ್ದೆಲ್ಲ ನಿಜ ಅನ್ನುವ ಭ್ರಮೆ ಇರುತ್ತೆ. ಒಂದು ವಾದವಿದ್ದರೆ ಅದರ ಎಲ್ಲ ಮುಖಗಳನ್ನೂ ನೋಡಿ ಅವರವರ ತೀರ್ಮಾನ ಅವರು ತೆಗೆದುಕೊಳ್ಳುವುದೇನೋ ಸರಿಯೇ. ಆದರೆ ಈ ದಾರಿ ಹಿಡಿಯದೇ, ಪ್ರಕಟವಾದಮೇಲೆ ಅದು ಸರಿಯೇ ಇರಬೇಕು ಎಂದು ಕೊಳ್ಳುವುದು ಮಾತ್ರ ಹಳ್ಳ ಹಿಡಿಯುವ ದಾರಿ.

ಐದು  ವರ್ಷಗಳ ಹಿಂದೆ ಬರೆದಿಟ್ಟಿದ್ದ ಈ ಬರಹವನ್ನು ಇವತ್ತು, ಸ್ವಲ್ಪ ತಿದ್ದು ಪಡಿ ಮಾಡಿ, ಸ್ವಲ್ಪ ಸೇರಿಸಿ,  ಪ್ರಕಟಿಸಿದ್ದೇಕೆ ಎಂದರೆ, ಪ್ರಜಾವಾಣಿಯಲ್ಲಿ  ಐದು ವರ್ಷ ಹಿಂದೆ ಅಂಕಣವೊಂದರಲ್ಲಿ ಪ್ರಕಟವಾಗಿದ್ದ  ಬರಹವೊಂದು ಅವರಿವರ ಫೇಸ್ ಬುಕ್ ಗೋಡೆಗಳಲ್ಲಿ ಕಾಣಿಸಿಕೊಂಡಿದ್ದು. ಮತ್ತೆ ಹಲವರು  ಆ ಬರಹವನ್ನು ಹಂಚಿಕೊಂಡು, ಮರುಪ್ರಸಾರ ಮಾಡಿದ್ದೂ ನನ್ನ ಕಣ್ಣಿಗೆ ಬಿದ್ದುದರಿಂದ, ಹಿಂದೆ ನಾನು ಬರೆದಿಟ್ಟ ಟಿಪ್ಪಣಿಗಳು ನೆನಪಾದುವು!


ಈ ಬರಹದ ಬಗ್ಗೆ ಐದು ವರ್ಷಗಳ ಹಿಂದೆಯೇ, ಅಂದರೆ ಈ ಅಂಕಣ ಬರಹ ಪ್ರಜಾವಾಣಿಯಲ್ಲಿ ಬಂದಾಗಲೇ, ಗೂಗಲ್ ಬಜ಼್ ನಲ್ಲಿ ಒಂದಷ್ಟು ಚರ್ಚೆ ಆಗಿತ್ತು. ಪತ್ರಿಯೆಯ ಅಂಕಣದಲ್ಲಿ ಅಂಕಣಕಾರರು ಬರೆದದ್ದೆಲ್ಲಾ ಸತ್ಯ ಅಥವಾ ಸರಿ ಎಂದು ಕೊಂಡ ಕೆಲವು ಮಿತ್ರರು (ಏಕೆಂದರೆ ಅದು ಪ್ರಜಾವಾಣಿಯಂತಹ ಪತ್ರಿಕೆಯಲ್ಲೇ ಪ್ರಕಟವಾಗಿತ್ತಲ್ಲ!) ಈ ಬರಹವನ್ನು ಆಧಾರವಾಗಿಟ್ಟುಕೊಂಡು,  ಕೃಷ್ಣ ದ್ರಾವಿಡ ಭಾಷೆಯಾಡುತ್ತಿದ್ದವನೇ, ಅದರಲ್ಲೂ ಅವನು ಕನ್ನಡದವನೇ ಎಂದು ವಾದಿಸಿದ್ದರು. ಕೃಷ್ಣ ಕನ್ನಡದವನೇ ಅಲ್ಲವೇ ಅನ್ನುವುದನ್ನ…

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಪ್ರತಿದಿನ ಪತ್ರಿಕೆಯಲ್ಲಿ ದಿನಭವಿಷ್ಯ ನೋಡುವಂತಹ ಕೋಟ್ಯಂತರ ಜನಗಳಲ್ಲಿ ನೀವು ಒಬ್ಬರಾಗಿದ್ದರೆ, ಅಥವ ನಿಮ್ಮ ರಾಶಿ ಫಲವನ್ನು  ಪತ್ರಿಕೆಯಲ್ಲೋ, ಇಂಟರ್ನೆಟ್ ನಲ್ಲೋ ಆಗಾಗ ನೋಡುವ ಹವ್ಯಾಸ ನಿಮಗಿದ್ದರೆ, ಈ ಬರಹ ಓದೋದು ನಿಮಗೆ ಅತೀ ಅಗತ್ಯ. ಯಾಕೆ ಗೊತ್ತಾ? ನೀವು ನೋಡ್ತಾ ಇರೋ ರಾಶಿ ನೀವು ಹುಟ್ಟಿದ ರಾಶಿಯೇ ಅಲ್ಲದೆ ಇರಬಹುದು. ಇದೇನಪ್ಪಾ ನಾನು ಹುಟ್ಟಿದ್ದೇ ಸುಳ್ಳಾ ಹೀಗನ್ನೋಕೆ ಅಂದಿರಾ? ತಾಳಿ, ನಿಮಗೇ ಅರ್ಥವಾಗುತ್ತೆ. ಇನ್ನು ನಿಮಗೆ ಈ ಭವಿಷ್ಯ ಜ್ಯೋತಿಷ್ಯ ಇಂತಹದ್ದರ ಬಗ್ಗೆ ನಂಬಿಕೆ ಇಲ್ಲವೇ? ಅದರೂ, ಸುಮ್ಮನೆ ನಿಮ್ಮ ಆಕಾಶದ ಬಗ್ಗೆ ತಿಳುವಳಿಕೆಯನ್ನ ಹೆಚ್ಚಿಸಿಕೊಳ್ಳೋದಕ್ಕೆ ಓದಬಹುದು ನೀವಿದನ್ನ. ನಮ್ಮಲ್ಲಿ ಹಲವರು ನಾನು ಇಂಥ ನಕ್ಷತ್ರದಲ್ಲಿ ಹುಟ್ಟಿದೆ , ಇಂತಹ ರಾಶಿ ಅಂತ ಅಂದುಕೊಂಡಿರ್ತಾರೆ. ಅಂತಹವರಲ್ಲಿ ನೀವೂ ಸೇರಿದ್ದರೆ, ಈ ಜನ್ಮ ನಕ್ಷತ್ರಗಳು ಸಾಮಾನ್ಯವಾಗ ನೀವು ಹುಟ್ಟಿದಾಗ ಚಂದ್ರ ಆಕಾಶದಲ್ಲಿ ಯಾವ ನಕ್ಷತ್ರದ ಹತ್ತಿರ ಕಾಣಿಸ್ತಿದ್ದ ಅನ್ನೋದರ ಮೇಲೆ ಹೇಳಲಾಗುತ್ತೆ. ಚಂದಿರ ಆಕಾಶದ ಸುತ್ತಾ ಒಂದು ಸುತ್ತನ್ನ ಸುಮಾರು ೨೭ ದಿನದಲ್ಲಿ ಪೂರಯಿಸುತ್ತಾನೆ. ಹಾಗಾಗಿ ದಿನಕ್ಕೊಂದು ನಕ್ಷತ್ರ. ಈ ಇಪ್ಪತ್ತೇಳು ನಕ್ಷತ್ರಗಳು ೧೨ ರಾಶಿಗಳಲ್ಲಿ ಹಂಚಿರೋದ್ರಿಂದ, ಒಂದು ತಿಂಗಳ ಅವಧಿಯಲ್ಲಿ ಹುಟ್ಟಿರೋ ಒಂದಷ್ಟು ಜನರನ್ನ ನೋಡಿದರೆ, ಅವರು ಹುಟ್ಟಿದ ಚಾಂದ್ರಮಾನ ರಾಶಿ ಹನ್ನೆರಡು ರಾಶಿಗಳಲ್ಲಿ ಯಾವುದಾದರೂ ಆಗಿರಬಹುದು. ಇದು ಚಾಂದ್ರಮಾನದ ರೀತಿ. ಆದರೆ…

ಲಕ್ಷ್ಮೀ ಸ್ತುತಿ - ಕನಕಧಾರಾ ಸ್ತೋತ್ರ

ಮೊಗ್ಗೊಡೆದಿಹ ಲವಂಗ ಮರವನ್ನು ಮುತ್ತುತಿಹ
ಹೆಣ್ದುಂಬಿಯೋಲ್ ಹರಿಯ ಬಳಿಸಾರಿ ನಲಿವಾಕೆ
ಕಣ್ಣುಗಳ ಓರೆನೋಟದಲೆ ಸಕಲಸುಖವಿತ್ತು
ಒಳ್ಳಿತನು ತಂದೀಯಲಾ ಮಂಗಳೆ

ಜೇನ ಸವಿಯಲು ಚೆಲುವ ಕನ್ನೈದಿಲೆಯ ಕಡೆಗೆ
ಮರಮರಳಿ ಬರುತಲಿಹ ಜೇನ್ದುಂಬಿಯಂತೆ
ನಾಚುತಲಿ ಒಲವಿನಲಿ ಆ ಮುರಾರಿಯ ಮೊಗವ
ಓರಣದಿ ಹೊರಳುತಲಿ ನೋಡುತಿಹ ಮುಗುದೆ
ಹಿರಿಕಡಲ ಮಗಳ ಆ ಸೊಗದ ನೋಟದ ಮಾಲೆ
ತೋರುತಿರಲೆನಗೀಗ ಸಕಲ ಸಂಪದಗಳನೆ

ಹಾವ ಮೇಗಡೆ ಕಣ್ಣಮುಚ್ಚಿ ಪವಡಿಸಿರುವಂಥ
ಪತಿಯನ್ನು ಎವೆಯಿಕ್ಕದೆಯೆ ಪ್ರೀತಿಯಲ್ಲಿ
ನೋಡುತಿಹ ಕಮಲಕಣ್ಣವಳೋರೆ ನೋಟಗಳು
ಬೀಳುತಿರಲೆನ್ನೆಡೆಗೆ ಸಂತಸವ ತರಲು

ಕೌಸ್ತುಭವನಿಟ್ಟವಗೆ  ಮಧುವನ್ನು ಮಡುಹಿದಗೆ
ನಿನ್ನ ಕಣ್ನೋಟಗಳ ಸರವ ತೊಡೆಸಿಹಳೆ!
ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ
ತುಸು ಬೀರು ಎನ್ನೆಡೆಗೆ ಮಂಗಳವ ತರುತ

ಸಂಸ್ಕೃತ ಮೂಲ (ಆದಿ ಶಂಕರರ ಕನಕಧಾರಾ ಸ್ತೋತ್ರದಿಂದ): 

ಅಂಗಂ ಹರೇಃ ಪುಲಕ ಭೂಷಣ ಮಾಶ್ರಯಂತೀ
ಭೃಂಗಾಗನೇವ ಮುಕುಲಾಭರಣಂ ತಮಾಲಮ್ |
ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಳ ದೇವತಾಯಾಃ ||

ಮುಗ್ದಾ ಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾ ಪ್ರಣಿಹಿತಾನಿ ಗತಾಗತಾನಿ |
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ ಸಂಭಾವಾ ಯಾಃ ||

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದ
ಮಾನಂದಕಂದಮನಿಷೇಷಮನಂಗ ನೇತ್ರಮ್ |
ಅಕೇಕರಸ್ಥಿತಕನೀನಿಕ ಪದ್ಮನೇತ್ರಂ
ಭೂತ್ಯೈ ಭವನ್ಮಮ ಭುಜಂಗಶಯಾಂಗನಾಯಾಃ ||

ಬಾಹ್ವಂತರೇ ಮಧುಜಿತಃ ಶ…