ನಲಿವಿನ ಇರುಳು

ಈಚೆಗೆ ಭೈರಪ್ಪನವರ ಉತ್ತರ ಕಾಂಡ ಓದಿದ್ದರ ಪ್ರಭಾವವೋ ಏನೋ, ವಾಲ್ಮೀಕಿ ರಾಮಾಯಣದ ಉತ್ತರ ಕಾಂಡವನ್ನೂ , ಮತ್ತೆ ಭವಭೂತಿಯ ಉತ್ತರ ರಾಮ ಚರಿತೆಯನ್ನೂ ಕೊಂಚ ನೋಡುವ ಅವಕಾಶ ಆಯಿತು. ಆ ಸಂದರ್ಭದಲ್ಲೇ ಹಿಂದೊಮ್ಮೆ ಉತ್ತರ ರಾಮ ಚರಿತೆಯ ಒಂದು ಪದ್ಯವನ್ನು ಹಿಂದೊಮ್ಮೆ ಅನುವಾದಿಸಿದ್ದು ನೆನಪಿಗೆ ಬಂತು.  ಅದನ್ನ ಇನ್ನೂ ಸ್ವಲ್ಪ ಚಂದವಾಗಿ ಮಾಡಬಹುದು ಎನ್ನಿಸಿ , ಮಾಡಿದ ಇನ್ನೊಂದು ಪ್ರಯತ್ನ ಇಲ್ಲಿದೆ. 


ಮೆಲ್ಲ ಮೆಲ್ಲನದೇನದೇನನೋ ಮಾತನಾಡುತ ಸುಮ್ಮನೇ
ಗಲ್ಲದಲಿ ಗಲ್ಲವನು ಹಚ್ಚಿರೆ ಸೊಗದ ತಲ್ಲೀನತೆಯಲೇ |
ಉಲ್ಲಸದಲಪ್ಪುಗೆಯ ತೋಳ್ಗಳು ಒಂದುಗೂಡಿರೆ ಕಳೆಯಿತೇ
ಎಲ್ಲೊ ರಾತ್ರಿಯು ತಿಳಿಯದಲೆ ಮತ್ತೊಂದನರಿಯದ ಪರಿಯಲೇ ||

ಸಂಸ್ಕೃತ ಮೂಲ ( ಭವಭೂತಿಯ ಉತ್ತರರಾಮಚರಿತ, ಅಂಕ ೧, ಪದ್ಯ ೨೭)

ಕಿಮಪಿ ಕಿಮಪಿ ಮಂದಂ ಮಂದಮಾಸಕ್ತಿ ಯೋಗಾತ್
ಅವಿರಲಿತ ಕಪೋಲಮ್ ಜಲ್ಪತೋರಕ್ರಮೇಣ |
ಅಶಿಥಿಲ ಪರಿರಂಭ ವ್ಯಾಪೃತೇಕೈಕದೋಷ್ಣೋಃ
ಅವಿದಿತ ಗತಯಾಮಾ ರಾತ್ರಿರೇವ ವ್ಯರಂಸೀತ್ ||

किमपि किमपि मन्दं मन्दमासक्ति योगात्
अविरलित कपोलम् जल्पतोरक्रमेण ।
अशिथिलपरिरंभव्यापृतेकैकदोष्णोः
अविदित गतयामा रात्रिरेव व्यरंसीत् ॥ 

-ಹಂಸಾನಂದಿ

ಚಿತ್ರ : ಬಾಲಿ (ಇಂಡೋನೇಷ್ಯ) ಯ ರಾಮ ಸೀತೆಯರ ಒಂದು ಮರದ ಶಿಲ್ಪ

ಕೊ:   ಮೂಲವು ಮಾಲಿನಿ ಎಂಬ  ವೃತ್ತದಲ್ಲಿದೆ. ಅನುವಾದವು ಮಾತ್ರಾ ಮಲ್ಲಿಕಾ ಮಾಲೆಯಲ್ಲಿದೆ. ಓದುವ ಅನುಕೂಲಕ್ಕೆ ಕೆಲವು ವಿಸಂಧಿಗಳನ್ನು ಹಾಗೆಯೇ ಉಳಿಸಿದ್ದೇನೆ. 

ಕೊ.ಕೊ:   ಉತ್ತರ ರಾಮ ಚರಿತೆಯಲ್ಲಿ  ರಾಮನ ಸೀತೆಯರು ತಾವು ವನವಾಸದಲ್ಲಿ ಕಳೆದ ಹಿಂದಿನ ಚಿತ್ರಗಳನ್ನು ನೋಡುತ್ತಾ, ನಲಿವಿನ ರಾತ್ರಿಗಳ ನೆನಪನ್ನು ಮಾಡಿಕೊಳ್ಳುವ ಸಂದರ್ಭದಲ್ಲಿ,   ಬರುತ್ತದೆ. ಇಲ್ಲಿ ಹಾಕಿದ ಚಿತ್ರದಲ್ಲಿ ರಾಮ ಸೀತೆಯರು ವನವಸದಲ್ಲಿಲ್ಲ ಅನ್ನುವ ಅಂಶವನ್ನು ಸದ್ಯಕ್ಕೆ ಮರೆತುಬಿಡಿ.

ಆಸಕ್ತಿಯ ಅಂಶ ಅಂದರೆ ಈ ಪದ್ಯದ ನಾಲ್ಕನೇ ಸಾಲಿಗೆ "ಅವಿದಿತ ಗತಯಾಮಾ ರಾತ್ರಿರೇವಂ ವ್ಯರಂಸೀತ್" ಎಂಬ ಇನ್ನೊಂದು ಪಾಠಾಂತರವೂ ಇದೆಯಂತೆ. ಇ ಹಿನ್ನೆಲೆಯಲ್ಲೇ ಇರಬೇಕು, ಒಂದು ಒಳ್ಳೆ ಕುತೂಹಲಕಾರಿಯಾದ ಕಥೆಯನ್ನೇ ಕಟ್ಟಿಬಿಟ್ಟಿದ್ದಾರೆ ನಮ್ಮ ಹಿಂದಿನವರು. ಭವಭೂತಿಯೂ, ಕಾಳಿದಾಸನೂ ಬೇರೆ ಬೇರೆ ಕಾಲದಲ್ಲಿದ್ದವರು ಅನ್ನುವುದು ಚರಿತ್ರೆಯನ್ನು ನೋಡಿದರೆ ತಿಳಿಯುತ್ತದೆ. ಆದರ ಈ ಕಥೆಯನ್ನು ಕೇಳುವಾಗ ಆ ವಿಷಯವನ್ನೂ ಸ್ವಲ್ಪ ಬದಿಗೊತ್ತಿಬಿಡಿ.

ಭವಭೂತಿ, ಕಾಳಿದಾಸ ಇಬ್ಬರೂ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ನವಮಣಿಗಳಲ್ಲಿ ಇಬ್ಬರು. ಭವಭೂತಿಗೆ ಕಾಳಿದಾಸನ ಹತ್ತಿರ ಹೊಗಳಿಸಿಕೊಳ್ಳಬೇಕೆಂಬ ಆಸೆ. ಹಾಗಾಗಿ, ಉತ್ತರ ರಾಮಚರಿತವನ್ನು ಬರೆದ ನಂತರ ಮೊತ್ತ ಮೊದಲು ಕಾಳಿದಾಸನ ಮುಂದೇ ಓದಿದನಂತೆ. ಅವನು ಓದಿದಾಗ ಈ ಪದ್ಯದ ಕಡೆಯ ಸಾಲು "ಅವಿದಿತ ಗತಯಾಮಾ ರಾತ್ರಿರೇವಂ ರಾತ್ರಿರೇವ ವ್ಯರಂಸೀತ್" ಎಂದೇ ಆಗಿತ್ತು. ಇಡೀ ನಾಟಕ ಮುಗಿಸಿದಮೇಲೆ, ಕಾಳಿದಾಸ ಈ ನಾಟಕದಲ್ಲಿ "ಬಿಂದುರಧಿಕಂ " - ಒಂದು ಬಿಂದು ಮಾತ್ರ ದೋಷವಿದೆ - ಅದಿಲ್ಲದಿದ್ದರೆ ಇದು ಪರಿಪೂರ್ಣವಾಗುತ್ತಿತ್ತು ಎಂದನಂತೆ. ಭವಭೂತಿ ಏನು? ಬೆರಳು ತೋರಿದರೆ ಹಸ್ತ ನುಂಗುವಂತಹವನು. ಅವನು ಕೂಡಲೆ, ಕಾಳಿದಾಸ ಮಾರ್ಮಿಕವಾಗಿ ನುಡಿದದ್ದು ಏನೆಂದು ಅರಿತು ಒಂದು ಬಿಂದುವನ್ನು ಅಳಿಸಿ ನಾಲ್ಕನೇ ಸಾಲನ್ನು "ಅವಿದಿತ ಗತಯಾಮಾ ರಾತ್ರಿರೇವ ರಾತ್ರಿರೇವ ವ್ಯರಂಸೀತ್" ಎಂದು ಬದಲಾಯಿಸಿ, ತನ್ನ ನಾಟಕವನ್ನು ಪರಿಪೂರ್ಣಗೊಳಿಸಿದನಂತೆ. 

ಸಂಸ್ಕೃತವನ್ನು ದೇವನಾಗರಿಯಲ್ಲಿ ಬರೆಯುವಾಗ ಅನುಸ್ವಾರವನ್ನು "ಬಿಂದು" ಎಂದರೆ ಒಂದು ಚುಕ್ಕೆಯಿಂದ ಸೂಚಿಸಬೇಕು. ಭವಭೂತಿಯು ಮೊದಲು ಬರೆದಿದ್ದ ಸಾಲು "ರಾತ್ರಿರೇವಂ" ಅಂದರೆ, ರಾತ್ರಿಯು ಹೀಗೆ (ಈ ಮೊದಲು ಹೇಳಿದ ರೀತಿ) ಕಳೆಯಿತು ಎಂದಿದ್ದರೆ, ಬಿಂದುವನ್ನು ತೆಗೆದು ಹಾಕಿದ ನಂತರ "ರಾತ್ರಿರೇವ", ಅಂದರೆ ರಾತ್ರಿಯೇ (ತನ್ನಿಂತಾನೆ) ಕಳೆದುಹೋಯಿತು ಎಂದು ಪದ್ಯಕ್ಕೆ ಒಂದು ಹೊಸತೇ ಹೊಳಹನ್ನು ಮೂಡಿಸುತ್ತದೆ.

ಈ "ಬಿಂದು ಮಾತ್ರ" ವ್ಯತ್ಯಾಸದ ಕಥೆ ಬಹುಶಃ ದೇವನಾಗರಿ ಲಿಪಿಯ ಬಳಕೆ ಇರುವಲ್ಲಿ ಬಂದಿರುವುದಾದರೆ, ಆಂಧ್ರದೇಶದಲ್ಲಿ ಇದಕ್ಕೇ ಇನ್ನೊಂದು ಬದಲಾವಣೆಯೊಂದಿಗೆ, ಕಾಳಿದಾಸ ಭವಭೂತಿಗಳನ್ನ ತೆಲುಗು ಲಿಪಿ ಬಲ್ಲವರನ್ನಾಗಿಸಿ ಬಿಟ್ಟಿದ್ದಾರೆ ಕೆಲವರು - ಕನ್ನಡದಲ್ಲಿ "ರಾಮ" ನಾಮ ಹೇಳಲು ಬರದ ವಾಲ್ಮೀಕಿಗೆ ನಾರದನು "ಮರ-ಮರ-ಮರ-" ಎಂದು ಜಪಿಸಿ, ಅದರಿಂದ ರಾಮನಾಮವನ್ನು ಅವನ ಬಾಯಲ್ಲಿ ತರಿಸಿದ ಎಂಬ ಕಥೆಯಿಂದ, ವಾಲ್ಮೀಕಿಯನ್ನೂ ಕನ್ನಡಿಗನನ್ನಾಗಿಸಿಲ್ಲವೇ, ಹಾಗೇ. ಕಥೆಯ ಈ ಆವೃತ್ತಿಯೂ ಸೊಗಸಾಗಿದೆ. ಇದರಲ್ಲಿ ಕಾಳಿದಾಸನಿಗೂ, ಭವಭೂತಿಗೂ ಎದುರು ಮುಖಾಮುಖಿಯಿಲ್ಲ. ಭವಭೂತಿಯ ಶಿಷ್ಯನೋ, ಸೇವಕನೋ ನಾಟಕವನ್ನು ಕಾಳಿದಾಸನ ಮನೆಗೆ ಹೋಗಿ ಅವನ ಮುಂದೆ ಓದಿ ಮರಳಿ, ಭವಭೂತಿಯ ಬಳಿ ಮರಳುತ್ತಾನೆ. ಕಾಳಿದಾಸ ಏನೆಂದು ಹೇಳಿಕಳಿರಬಹುದೆಂಬ ಕುತೂಹಲದಿಂದ ಭವಭೂತಿ ಕೇಳಿದರೆ, ಏನೂ ಹೇಳಲಿಲ್ಲ ಅನ್ನುವುದು ಶಿಷ್ಯನ ಉತ್ತರ. ಭವಭೂತಿಗೆ ನಿರಾಶೆಯೇ ಆಯಿತು. ಏನೂ ಹೇಳಲಿಲ್ಲವೇ, ಒಮ್ಮೆಯೂ ಏನೂ ಮಾತಾಡಲಿಲ್ಲವೇ? ಎಂದು ಕೇಳಲು, ಶಿಷ್ಯ "ವೀಳೆಯ ಹಾಕಿಕೊಳ್ಳುತ್ತಿದ್ದಾಗ, ಸ್ವಲ್ಪ ಸುಣ್ಣ ಹೆಚ್ಚಾಯಿತೇನೋ ಅಂದರು" ಅಷ್ಟೇ ಅಂದನಂತೆ.

ಭವಭೂತಿಗೆ ತಕ್ಷಣ ಏನಾಯಿತೆಂದು ತಿಳಿಯಿತು. ತೆಲುಗಿನಲ್ಲಿ ಸುಣ್ಣಕ್ಕೆ "ಸುನ್ನ" ಎನ್ನುವರು. ಹಾಗೇ, ಅನುಸ್ವಾರವನ್ನು ಸೂಚಿಸುವ ಸೊನ್ನೆಗೂ "ಸುನ್ನ" ಅಂತಲೇ ಅನ್ನುವರು. ಅಂದರೆ, ಕಾಳಿದಾಸ ತೆಲುಗಿನಲ್ಲೇ ಮಾತಾಡಿರಬೇಕಲ್ಲ :-) . ಇರಲಿ, ಒಂದು ಸೊನ್ನೆ ಹೆಚ್ಚಾಯಿತೆಂದು ತಿಳಿದ ಭವಭೂತಿ ಈ ಸಾಲನ್ನು ತಿದ್ದಿ "ರಾತ್ರಿರೇವ ರಾತ್ರಿರೇವ ವ್ಯರಂಸೀತ್" ಎಂದು ಬದಲಾಯಿಸಿದನಂತೆ!

ಇದು ಯಾವುದೂ ನಿಜವಲ್ಲದಿದ್ದರೂ, ಆಸಕ್ತಿ ಹುಟ್ಟಿಸುವುದಾದದ್ದರಿಂದ ಬರೆದೆ!

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ