ದಿನಕ್ಕೊಂದು ನೆಪ!ನೆನ್ನೆ ಅಂದರೆ ಮಾರ್ಚ್ ೨೦ (ಕೆಲವೊಮ್ಮೆ ಮಾರ್ಚ್ ೨೧ ರಂದೂ ಬರುತ್ತೆಅನ್ನಿ)  ವಸಂತದ ಮೊದಲ ದಿನ ಅಂತ ಲೆಕ್ಕ. ಅಂದರೆ, ಈಗ ನಾವು ಯಾವುದನ್ನ ಮೇಷಾದಿ ಬಿಂದು ಅಂತ ಆಕಾಶದಲ್ಲಿ ಕರೀತೀವೋ ಆ ಜಾಗದಲ್ಲಿ ಸೂರ್ಯ ಇರ್ತಾನೆ ಅಂತ. ಆದರೆ , ತಮಾಷಿ ಅಂದ್ರೆ ಈ ಬಿಂದು ಈಗ ಮೇಷ ರಾಶಿಯಲ್ಲಿ ಇಲ್ಲ , ಬದಲಿಗೆ ಮೀನ ರಾಶಿಯನ್ನೂ ದಾಟಿ ಹೆಚ್ಚು ಕಡಿಮೆ  ಕುಂಭರಾಶಿಗೆ ಸೇರಿ ಹೋಗಿದೆ. ಹೋಗಲಿ ಬಿಡಿ, ಈಗ ನಾನು ಹೇಳೋಕೆ ಹೊರಟಿದ್ದೇ ಬೇರೆ ವಿಷಯ.

ನಾವು ಚಿಕ್ಕವರಿದ್ದಾಗ ವರ್ಷದಲ್ಲಿ ಹನ್ನೆರಡು ತಿಂಗಳು, ಆರು ಋತುಗಳು ಮೂರು ಕಾಲಗಳು ಅಂತೆಲ್ಲ ಬಾಯಿಪಾಠ ಮಾಡಿದ್ದೇ ಮಾಡಿದ್ದು. ನಮ್ಮೂರಲ್ಲಿ ಮೂರು ಕಾಲಗಳಂತೂ ಕಾಣ್ತಿದ್ದವು,  ಆದರೆ ಋತುಗಳು? ವಸಂತ ? ಹೇಮಂತ?  ಶಿಶಿರ? ಹೂವು ಅರಳೋ ಕಾಲ? ಎಲೆ ಉದುರೋ ಕಾಲ?  ಹೂವುಗಳೇನೋ ಅರಳ್ತಿದ್ದವು ಹೆಚ್ಚು ಕಡಿಮೆ ವರ್ಷ ಪೂರ್ತಿ. ಇನ್ನು ಎಲೆ ಉದುರುತ್ತೆ ಅನ್ನೋದನ್ನ ಪುಸ್ತಕದಲ್ಲಿ ಓದಿ ತಿಳಿದಿದ್ದು ಅಷ್ಟೇ ಬಿಡಿ.

ಅದೇ ರೀತಿ ಆಗ ನಮಗೆ ಗೊತ್ತಿದ್ದದ್ದು ಮಕ್ಕಳ ದಿನಾಚರಣೆ ಒಂದೇ. ಆಮೇಲೆ, ಬೇರೆ ಬೇರೆ ದಿನಗಳ ಪರಿಚಯವಾಗ್ತಾ  ಹೋಯ್ತು.  ಅಪ್ಪನ ದಿನ, ಅಮ್ಮನ ದಿನ ಮೊದಲಾದುವುಗಳೆಲ್ಲ ಗ್ರೀಟಿಂಗ್ ಕಾರ್ಡ್ ಕಂಪನಿಗಳ ಲಾಭ ಹೆಚ್ಚಿಸೋಕೆ ಹೆಚ್ಚು ಹೆಚ್ಚು ಪ್ರಚಾರವಾಗ್ತಾ ಇದೆ ಅನ್ನುವ ಆರೋಪ ಇದ್ದೇ ಇದ್ದರೂ, ಪ್ರತಿ ದಿನವೂ ಅಪ್ಪನ ದಿನ, ಅಮ್ಮನ ದಿನ ಯಾಕಾಗಬಾರದು ಅಂತ ಪ್ರಶ್ನೆ ಕೇಳುವವರು ಹೆಚ್ಚೇ ಇದ್ದರೂ, ಹಾಗೊಂದು ದಿವಸ ಇದ್ರೆ ತಪ್ಪೇನಿಲ್ಲ ಅಂತಲೂ ಅನ್ನಿಸುತ್ತೆ.

ಸಂತಸಕೆ ಬೇಕೇನು ದಿವಸ ವಾರದ ಕಟ್ಟು
ಎನ್ನದಿರಿ ನೆನಪಿಸಲಿ ಒಂದಿರಲು ನೆವವು
ಮಕ್ಕಳಲಿ ಇದ್ದರೂ ಪ್ರೀತಿ ಅನುದಿನವೂ
ಮಾಡುವೆವು ಹುಟ್ಟು ಹಬ್ಬವನೊಂದು ದಿವಸ!

ಅಲ್ವೇ? ಏನೋ ಒಂದು ನೆಪದಲ್ಲಿ ಒಂದು ಒಳ್ಳೇ ಕೆಲಸ, ಒಂದು ಒಳ್ಳೇ ನೆನಪು ಮಾಡಿಕೊಂಡರೆ ಅದರಲ್ಲೇನಿದೆ ತಪ್ಪು?  ಅಂದ ಹಾಗೆ,   ಈ ಸಂತಸ ಪಡೋ ದಿವಸ ಯಾವುದು ಅಂತ ಕೇಳಿದ್ರಾ? ಮಾರ್ಚ್ ೨೦ ರಂದು          ಅಂತೆ. ಅಂತೂ ಇಂತೂ ಸಂತೋಷವಾಗಿರಿ.

ನೆನ್ನೆ ಸಂತೋಷದ ದಿವಸ ಆದರೆ ಇವತ್ತು ಕವಿತೆಯ ದಿನವಂತೆ -     ಅದಕ್ಕೂ ಒಂದು ಸಮ್ಜಾಯಿಶಿ  ಕೊಟ್ರೆ ಹೇಗೆ?


ಒಂದು ದಿನ ಅಪ್ಪನಿಗೆ ಒಂದು ದಿನ ಅಮ್ಮನಿಗೆ
ಒಂದು ದಿನ ಮಕ್ಕಳಿಗೆ ಉಂಟಂತೆ ಕೇಳಿ
ಒಂದುದಿನ ಸಂತಸಕೆ ಒಂದು ದಿನ ತಾಯ್ನುಡಿಗೆ
ಇಂದಿನಾ ದಿನವಂತೆ ಕವಿತೆ ಬರೆವುದಕೆ !

ಹಾಗಾಗಿ, ಇವತ್ತು  ಹಿಂದೆ ಬರೆದಿದ್ದ ಈ ಎರಡೂ ಚೌಪದಿಗಳನ್ನು ಗೊಟಾಯಿಸಿ, ಈ ಕಿರುಬರಹ ತಯಾರಿಸಿದ್ದಾಯ್ತು!

-ಹಂಸಾನಂದಿ


ಕೊ:

Mother's Day: Second Sunday of May
Father's Day: Third Sunday of June
Children's day: Nov 14th
International "Happiness Day" - March 20th
"Mother tongue" Day: Feb 21st
Poetry Day : - March 21st

ಕೊ.ಕೊ: ಎರಡೂ ಚುಟುಕಗಳು ಚೌಪದಿ ಛಂದಸ್ಸಿನಲ್ಲಿ ಇವೆ. ೧೦೦% ಛಂದಸ್ಸಿನ ನಿಯಮಗಳನ್ನು ಪಾಲಿಸದಿದ್ದರೂ ಚೌಪದಿ ಎನ್ನಲು ಅಡ್ಡಿ ಇಲ್ಲ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ