ಪಂಚವಟಿಯಲ್ಲಿ ಕಡೆಯ ದಿನ
ಕಳೆದಿರಲು ಹಲವಾರು ತಿಂಗಳು
ಕುಳಿರುಗಾಲವು ಮುಗಿಯಬಂದಿತು
ಹೊಳೆಯೆ ಚೈತ್ರದ ಚಿಗುರು ಸುತ್ತೆಡೆಯಲ್ಲಿ ವನರಾಜಿ |
ನಳನಳಿಸೆ ಪಂಚವಟಿಯಾಶ್ರಮ
ವಿಳೆಯ ಸಗ್ಗವೆನಿಸಿರೆ ಜಾನಕಿ
ಕಳೆದ ಗಳಿಗೆಗಳನ್ನು ಸಂತಸದಲ್ಲಿ ನೆನೆಯುತಿರೆ ||೧||

ಒಂದು ಹಗಲಲಿ ಜನಕಸುತೆ ಕುಟಿ
ಮುಂದುಗಡೆಯಲಿ ಮಲ್ಲೆ ಹಂಬಿಗೆ
ಚಂದದಲಿ ನೀರೆರೆಯುತಿರೆ ಅವಳ ಕಣ್ಣೆದುರ- |
ಲ್ಲೊಂದು  ಹೊಂಬಣ್ಣದಲಿ ಹೊಳೆದಿ-
ತ್ತಂದವಾಗಿಹ ಚಿಕ್ಕೆ ಚಿಂಕೆಯು
ಹಿಂದೆಮುಂದೆಯೆ ಸುತ್ತುತಿದ್ದಿತು ಮನವನಪಹರಿಸಿ ||೨||

ಸೀತೆ ಕರೆಯುತ ಹೊನ್ನ ಜಿಂಕೆಗೆ
ಪ್ರೀತಿ ತೋರುತ ಬಳಿಗೆ ಹೋಗಲು
ಭೀತಿಯಲಿ ಹಾರುತ್ತ ದೂರಕೆ ಓಡಿಹುದು ಮಿಗವು  |
ಮಾತಿಗಂಜುವುದೆಂದು ಮರವ-
ನ್ನಾತುಕೊಂಡೇ ನೋಡುತಿದ್ದಳು
ಮಾತಿನಲಿ ಸಿಗದಂಥ ಸೊಗವನು ಕಣ್ಗೆ ತುಂಬುತಲಿ ||೩||

ಹೊರಗೆ ಬಂದಿಹ ರಾಮನಾಕಡೆ
ತರುಣಿ ಕಣ್ಗಳು  ಪೋಗದಿರಲವ
ಹರುಷವೇನಿವಳದೆನುತ ಕೂಡಲೆ ಬಳಿಗೆ ಬಂದಾತ |
-ನೊರೆದಿಹನು ಸತಿ ನುಡಿಯೆ ನಿನ್ನಯ
ಮರುಳು ಮಾಡಿದ ತವಕವೇನಿದು?
ಇರಲಿ ನಡೆಸುವೆ ಬೇಗ ಪೇಳೆಂದಿಹನು ಮೈಥಿಲಿಗೆ  ||೪||

ನಲ್ಲ ನೋಡೈ  ಹೊನ್ನ ಬಣ್ಣಗ
ಳಲ್ಲಿ ಕಂಗೊಳಿಸಿರುವುದೀ ಮಿಗ
ಮೆಲ್ಲನೇ ಹಿಡಿದಿದನು ತಾರೈ ಬೇಗ ನನಗಾಗಿ |
ಹುಲ್ಲ ತಿನ್ನಿಸಿ ಮುದ್ದು ಮಾಡುವೆ
ಬಲ್ಲೆಯಾ! ಬೇಸರವ ಕಳೆಯಲಿ
-ದಿಲ್ಲದಿರಲೀ ಪಂಚವಟಿ ಬೇಡೆನಗೆಯೆಂದಿಹಳು ||೫||

-ಹಂಸಾನಂದಿ

ಕೊ: ಕಳೆದ ವರ್ಷ ಪಂಚವಟಿಯಲ್ಲಿ ಮೊದಲದಿನ ಅನ್ನುವ ತಲೆಬರಹದಲ್ಲಿ ಒಂದಷ್ಟು ಷಟ್ಪದಿಗಳನ್ನ ಬರೆದಿದ್ದೆ. ಅದೇ ರೀತಿ ಪಂಚವಟಿಯಲ್ಲಿ ರಾಮ ಸೀತೆಯರು ಸಂತಸವಾಗಿ ಕಳೆದ ಕಡೆಯ ಘಳಿಗೆಯ ಬಗ್ಗೆ ಕೆಲವು ಪದ್ಯಗಳಿವು.

ಚಿತ್ರ ಕೃಪೆ: ಮೂಲ ತಿಳಿದಿಲ್ಲ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ